ಕಾರ್ಕಳದಲ್ಲಿ ನನ್ನ ಓಡಾಟ ಶಾಸಕರಿಗೆ ಸಹಿಸಲು ಆಗುತ್ತಿಲ್ಲ

ಉಡುಪಿ: ನಾನು ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವಕ್ಕಾಗಿ ಸ್ಪರ್ಧಿಸುತ್ತೇನೆ. ಕಾರ್ಕಳದಲ್ಲಿ ನನ್ನ ಓಡಾಟ ಶಾಸಕರಿಗೆ ಸಹಿಸಲು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರಿಗೆ ಅವರು ಕಿರುಕುಳ ಕೊಡುವುದನ್ನು ನಿಲ್ಲಿಸಲಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ ಕೊನೆಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಕಾರ್ಕಳದ ಓಡಾಟ ಅಲ್ಲಿಯ ಶಾಸಕರಿಗೆ ಸಹ್ಯವಾಗುತ್ತಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಕೊಲೆ ಕೇಸುಗಳನ್ನು ಹಾಕುತ್ತಿದ್ದಾರೆ. ಕಾಂಗ್ರೆಸ್‌ ಕೂಡಾ ಅಂದು ಇದನ್ನೇ ಮಾಡಿತು. ನೀವೂ ಅದನ್ನೇ ಮಾಡುತ್ತಿದ್ದೀರಿ. ಸುನೀಲ ಕುಮಾರ್‌ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೋಲು ಖಚಿತ ಎಂದರು.
ರಾಜ್ಯದಲ್ಲಿ 3 ಸಾವಿರ ಹಿಂದು ಕಾರ್ಯಕರ್ತರ ಮೇಲೆ ಕೇಸುಗಳಿವೆ. ಇಡೀ ರಾಜ್ಯದಲ್ಲಿ 18 ಹಿಂದು ಒಕ್ಕೂಟ ಬಿಜೆಪಿ ವಿರುದ್ಧ ನಿಲ್ಲಲಿದೆ ಎಂದರು.