ಚಿಕ್ಕೋಡಿ: ತಾಲೂಕಿನ ಖಡಕಲಾಟ ಗ್ರಾಮದ ನಿಪ್ಪಾಣಿ-ಚಿಕ್ಕೋಡಿ ರಸ್ತೆಯ ಲಕ್ಷ್ಮೀ ಮಂದಿರ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಟೈಲ್ಸ್ ಆಳವಡಿಸುವ ಕಾರ್ಮಿಕರೊಬ್ಬರು ಮೃತಪಟ್ಟು, ಹಿಂದೆ ಕುಳಿತಿದ್ದ ಆತನ ಸ್ನೇಹಿತ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ರಾಜಸ್ಥಾನದ ಬಾಲನ್‌ಪುರ್ ನಿವಾಸಿ ರಾಜಕುಮಾರ್ ಬಲರಾಮ ವರ್ಮಾ (೨೮) ಮೃತ ಕಾರ್ಮಿಕ. ವಿಶಾಲ ಪ್ರಕಾಶ ಬಾಟೆ ಗಂಭೀರ ಗಾಯಗೊಂಡಿದ್ದು, ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ರಾಜಸ್ಥಾನ ಮೂಲದ ರಾಜಕುಮಾರ್ ಮತ್ತು ವಿಶಾಲ ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿಯಲ್ಲಿ ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಇಬ್ಬರೂ ಬೈಕ್‌ನಲ್ಲಿ ಚಿಕ್ಕೋಡಿಗೆ ಬರುತ್ತಿದ್ದಾಗ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ರಾಜಕುಮಾರ ಮತ್ತು ವಿಶಾಲ ಕೆಳಗೆ ಬಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ರಾಜಕುಮಾರ್ ಮೃತಪಟ್ಟಿದ್ದು, ವಿಶಾಲ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.