ಬಾಗಲಕೋಟೆ: ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳ ಅನುಷ್ಠಾನಕ್ಕೆ ವರ್ಷಕ್ಕೆ ಕನಿಷ್ಠ ೫ ಲಕ್ಷ ಕೋಟಿ ಬೇಕಾಗಲಿದೆ, ಅಷ್ಟು ಮೊತ್ತವನ್ನು ವ್ಯಯಿಸಿದರೆ ಸರ್ಕಾರಿ ನೌಕರರ ಸಂಬಳವನ್ನು ಎಲ್ಲಿಂದ ಪಾವತಿಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಸ್ಥಾನದಲ್ಲೂ ಕಾಂಗ್ರೆಸ್ ಇಂತಹದೇ ಘೋಷಣೆಗಳನ್ನು ಮಾಡಿದ್ದರಿಂದ ಅಲ್ಲಿನ ಸ್ಥಿತಿ ಪಾಕಿಸ್ತಾನದ ರೀತಿ ಆಗಿದೆ. ಕರ್ನಾಟಕದಲ್ಲೂ ಸಾಲದ ಹೊರೆಯಿದ್ದು, ಕಾಂಗ್ರೆಸ್ ಘೋಷಣೆ ಅವಾಸ್ತವಿಕವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರ ಮೇಲೆ ಜನರಿಗೆ ವಿಶ್ವಾಸವಿಲ್ಲ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಪ್ರತ್ತುತ್ತರ ನೀಡಿದ ಅವರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ನಿಲ್ಲಿಸಿ ತಾವೇನು ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಸಲಿ, ಆ ಇಬ್ಬರ ಮೇಲೆ ಜನಕ್ಕೆ ನಂಬಿಕೆಯಿದ್ದರೆ ಚುನಾವಣೆಯಲ್ಲಿ ಅವರನ್ನೇಕೆ ಅಷ್ಟು ಹೀನಾಯವಾಗಿ ಸೋಲಿಸಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲಾಕಿದರು.
ಬಿಜೆಪಿ ಕಳೆದ ಚುನಾವಣೆಯಲ್ಲಿ ೧೦೪ ಸ್ಥಾನಗಳನ್ನು ಗೆಲ್ಲುವುದರ ಮೂಲಕ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಜನಕ್ಕೆ ನಮ್ಮ ಮೇಲೆ ವಿಶ್ವಾಸ ಇದ್ದಿದ್ದರಿಂದಲೇ ನಾವು ಗೆದ್ದೇವು. ಈ ಬಾರಿ ಸಿದ್ದರಾಮಯ್ಯ ಮಾತ್ರವಲ ರಾಹುಲ್ ಗಾಂಧಿ ಕೂಡ ಗೆಲವು ಸಾಧಿಸುವುದಿಲ್ಲ ಅವರ ಅಜ್ಜ ಕಟ್ಟಿಸಿದ ಮನೆಗೆ ಅವರು ಹೋಗಲಿದ್ದಾರೆ ಎಂದರು.
ಯುಕೆಪಿ ವಿಚಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ.ಕೂಡಲಸಂಗಮಕ್ಕೆ ಪಾದಯಾತ್ರೆಯಲ್ಲಿ ಬಂದಿದ್ದ ಕಾಂಗ್ರೆಸ್ ನಾಯಕರು ವೀರಾವೇಷದಿಂದ ಮಾತನಾಡಿದ್ದರು ಆದರೆ ಅವರು ಐದು ವರ್ಷದಲ್ಲಿ ಯುಕೆಪಿ ಮೂರನೇ ಹಂತಕ್ಕೆ ಕೇವಲ ೨೬೫೦ ಕೋಟಿ ರೂ.ನೀಡಿದ್ದರು ನಾವು ಇದೇ ವರ್ಷ ೮ ಸಾವಿರ ಕೋಟಿ ರೂ.ಖರ್ಚು ಮಾಡುತ್ತಿದ್ದೇವೆ ಇದು ನಮ್ಮ ಬದ್ಧತೆ ಎಂದರು.