ಕಾಂಗ್ರೆಸ್ ಅಂದ್ರೆ ಸುಳ್ಳಿನ ಮನೆ: ಅರುಣ ಸಿಂಗ್ ವಾಗ್ದಾಳಿ

0
9

ಹುಬ್ಬಳ್ಳಿ : ಕಾಂಗ್ರೆಸ್ ಅಂದರೆ ಸುಳ್ಳಿನ ಮನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಹತಾಶೆಯಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸು ಕಾಣುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ರಾಷ್ಡ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭ್ರಮೆಯಲ್ಲಿದ್ದಾರೆ. ಅದಕ್ಕಾಗಿಯೇ ಸಿಎಂ ಕನಸು ಕಾಣುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ರಾಷ್ಡ್ರೀಯ ನಾಯಕ ರಾಹುಲ್ ಗಾಂಧಿ ದಿನಗಳನ್ನು ಲೆಕ್ಜ ಹಾಕಿ ಇಷ್ಟೇ ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ನಾಲ್ಕು ವರ್ಷವಾದರೂ ಮನ್ನಾ ಮಾಡಿಸಿಲ್ಲ. ಇಂತಹ ಹತ್ತಾರು ಭರವಸೆ ಈಡೇರಿಸಿಲ್ಲ ಎಂದು ಅರೋಪಿಸಿದರು.
ರಾಜಸ್ತಾನದಲ್ಲಿ ಅಲ್ಲಿನ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪರಸ್ಪರ ಕೆಟ್ಟ ಪದಗಳನ್ನು ಬಳಸಿ ಟೀಕೆ ಮಾಡಿಕೊಂಡಿದ್ದಾರೆ. ಈಗಲೇ ಹೀಗೆ. ಇನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇವರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ರಾಜ್ಯದ ಜನರು ಲೆಕ್ಕ ಹಾಕಿದ್ದಾರೆ ಎಂದರು.
ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸಿದ್ದಾರೆ. ಬೊಮ್ಮಾಯಿ ಅವರ ಜನಪರ ಆಡಳಿತ ಅವರನ್ನು ವಿಚಲಿತರನ್ನಾಗಿ ಮಾಡಿದೆ. ಕಾಮನ್ ಮ್ಯಾನ್ ಸಿಎಂ ಎಂಬ ಹೆಗ್ಗಳಿಕೆಗೆ ಬೊಮ್ಮಾಯಿ ಪಾತ್ರರಾಗಿದ್ದಾರೆ. ಅವರ ಬಗ್ಗೆ ತಳಮಟ್ಟದ ಟೀಕೆ ಮಾಡಿದರೆ ರಾಜ್ಯದ ಜನ ಸಹಿಸುತ್ತಾರೆಯೇ? ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.
150 ಸ್ಥಾನಗಳು ಖಚಿತ
ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಿಸುತ್ತದೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ. ರಾಜ್ಯವ್ಯಾಪಿ ಪ್ರವಾಸ ಮಾಡಿದ್ದೇನೆ. ಜನರ ನಾಡಿಮಿಡಿತ ಬಿಜೆಪಿ ಪರವಾಗಿದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.

Previous articleಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರೆ ವಲಸಿಗರು: ಕಟೀಲು ವಾಗ್ದಾಳಿ
Next articleಯತ್ನಾಳ್ ಈಗ ಯಾರ ಬಗ್ಗೇನೂ ಮಾತಾಡೋದಿಲ್ಲ: ಅರುಣ ಸಿಂಗ್