ಕೊಪ್ಪಳ: ಕಾವೇರಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲವಿದ್ದು, ಬಂದ್ ಶಾಂತಿಯುತವಾಗಿ ನಡೆಯಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದವರಿಗೆ ವಿಶಾಲವಾದ ಭಾವನೆ ಇದೆ. ಹಾಗಾಗಿ ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲಿಯೇ ನೆಲ, ಜಲ, ಭಾಷೆಯ ಸಮಸ್ಯೆಯಾದರೂ ಈ ಭಾಗದವರು ಧ್ವನಿ ಎತ್ತುತ್ತೇವೆ. ಹೋರಾಟ ಮಾಡುತ್ತೇವೆ. ಆದರೆ ಈ ಭಾಗದ ನೆಲ, ಜಲದ ವಿಷಯಕ್ಕೆ ಆ ಭಾಗದವರು ಧ್ವನಿ ಎತ್ತಬೇಕು. ವಿಶಾಲ ಕರ್ನಾಟಕದಲ್ಲಿ ಒಂದೇ ಭಾವನೆ ಬರಬೇಕು. ಎಲ್ಲಾ ಸರ್ಕಾರಗಳು ಉತ್ತರ ಕರ್ನಾಟಕ ಹಾಗು ಹಳೆಯ ಮೈಸೂರು ಭಾಗದ ಬಗ್ಗೆ ತಾರತಮ್ಯ ಮಾಡುತ್ತವೆ. ಮೀಸಲಾತಿ ಹೋರಾಟದ ನಂತರ ಕೃಷ್ಣಾ ನದಿಗಾಗಿ ಹೋರಾಟ ಮಾಡಲಾಗುವುದು ಎಂದರು.