ಕರ್ನಾಟಕದಲ್ಲಿ ಭ್ರಷ್ಟಾಚಾರ ಡಬಲ್ ಆಗಿದೆ: ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

0
9
ದಾವಣಗೆರೆ

ದಾವಣಗೆರೆ: ಪ್ರಾಮಾಣಿಕ ಪಕ್ಷ ಎಂದು ಹೇಳಿಕೊಂಡು ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಸರ್ಕಾರದ ಭ್ರಷ್ಟಾಚಾರವೂ ಡಬಲ್ ಆಗಿದ್ದು, ಹಿಂದೆ ಶೇ.೨೦ರಷ್ಟಿದ್ದ ಕಮಿಷನ್ ದಂಧೆ ಈಗ ೪೦ರಷ್ಟಾಗಿದೆ. ಬಿಜೆಪಿ ಪಕ್ಷಕ್ಕೆ ಹೀಗೆ ಅಧಿಕಾರ ನೀಡುತ್ತಾ ಹೋದರೆ ಭ್ರಷ್ಟಾಚಾರ ಏರಿಕೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಕರ್ನಾಟಕಕ್ಕೆ ಹೊಸ ಇಂಜಿನ್ ಇರುವ ಎಎಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡುವುದಾಗಿ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದರು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಜನರು ತುಂಬಾ ಒಳ್ಳೆಯವರು, ಪರಿಶ್ರಮಿಗಳು ಮತ್ತು ದೇಶಭಕ್ತರು. ಆದರೆ, ಇಲ್ಲಿನ ನಾಯಕ (ಸಿಎಂ ಬೊಮ್ಮಾಯಿ) ಮಾತ್ರ ಭ್ರಷ್ಟ ಎಂದು ಕುಟುಕಿದರು.
ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಕೇವಲ ಶೇ.೪೦ ರಷ್ಟು ಕಮಿಷನ್‌ಗೆ ಹೆಸರುವಾಸಿಯಾಗಿದೆ. ಕಮಿಷನ್ ಕೊಡಲು ನಿರಾಕರಿಸಿದ ಕಾರಣಕ್ಕೆ ಗುತ್ತಿಗೆದಾರ ಸಂತೋಷ್‌ಗೆ ಹಣ ಮಂಜೂರು ಮಾಡದೆ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಟೆಂಡರ್ ಗುತ್ತಿಗೆದಾರ ಕೆಂಪಣ್ಣ ಎನ್ನುವವರು ಕಮಿಷನ್ ಪಡೆಯುತ್ತಿರುವ ಸರ್ಕಾರದ ಶಾಸಕರು, ಮಂತ್ರಿಗಳ ವಿರುದ್ಧ ಆರೋಪಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದರೂ ಕೂಡ ಕ್ರಮ ಕೈಗೊಳ್ಳದೆ, ಆರೋಪಿಸಿದ ೮೨ ವರ್ಷ ವಯಸ್ಸಿನ ಕೆಂಪಣ್ಣ ಅವರನ್ನೇ ಜೈಲಿಗೆ ಕಳಿಸಿದರು ಎಂದು ಹರಿಹಾಯ್ದರು.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಲು ೨೦ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸರಿಯಾಗಿ ೨೦ ಗುಂಡಿಗಳನ್ನು ಸರ್ಕಾರ ಮುಚ್ಚಿಸಿಲ್ಲ. ಬಿಡುಗಡೆಯಾದ ಹಣವನ್ನು ಲೂಟಿ ಮಾಡಲಾಗಿದೆ. ಅಲ್ಲದೇ, ಇಲ್ಲಿ ಸಿಎಂ ಆಗಲು ಯಾವುದೇ ಚುನಾವಣೆ ಎಂದು ದೂರಿದರು.


ಕರ್ನಾಟಕದಲ್ಲಿ ಶಾಸಕರ, ಸಚಿವರ ಹಗರಣಗಳು ದಿನಕ್ಕೊಂದು ಹೊರಗೆ ಬರುತ್ತಿದ್ದು, ೨೫೦೦ ಕೋಟಿ ಹಣ ಕೊಟ್ಟರೆ ಚುನಾವಣೆ ಇಲ್ಲದೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬಹುದೆಂದು ಸ್ವಪಕ್ಷದ ಶಾಸಕರೇ ಆರೋಪ ಮಾಡಿರುವುದು ಡಬಲ್ ಇಂಜಿನ್ ಸರ್ಕಾರದ ಪ್ರಾಮಾಣಿಕತೆ ಎಷ್ಟಿದೆ ಎಂಬುದನ್ನು ತೋರುತ್ತದೆ ಎಂದು ಟೀಕಿಸಿದರು.
ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ವಿನಾಕರಣ ಬಂಧಿಸಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅವರ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ಸಹ ಸಿಕ್ಕಿಲ್ಲ. ಆದರೂ ಅವರನ್ನು ಬಂಧಿಸಲಾಗಿದೆ. ಆದರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕರೊಬ್ಬರ ಪುತ್ರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಮನೆಯಲ್ಲಿ ೮ ಕೋಟಿ ಹಣ ಸಿಕ್ಕಿದ್ದರೂ ಇದುವರೆಗೂ ಸರ್ಕಾರ ಶಾಸಕರನ್ನು ಮತ್ತು ಅವರ ಪುತ್ರನನ್ನು ಬಂಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆಮ್ ಆದ್ಮಿ ಪಾರ್ಟಿ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡುತ್ತಿದ್ದು, ದೇಶದಲ್ಲಿಯೇ ಈಗ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವ ಏಕೈಕ ಪಕ್ಷವಾಗಿ ಆಮ್ ಆದ್ಮಿ ಹೊರಹೊಮ್ಮಿದೆ. ಅಷ್ಟೇ ಅಲ್ಲ ಉಚಿತವಾಗಿ ಆರೋಗ್ಯವನ್ನು ಜನರಿಗೆ ಕೊಡುತ್ತಿದೆ ಆ ಮೂಲಕ ಜನಪರ ಆಡಳಿತವನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ನೀಡುತ್ತಿದ್ದು, ಕರ್ನಾಟಕದ ಜನರು ಎಎಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಬ್ರಿಜೇಶ್ ಕಾಳಪ್ಪ, ಮುಖ್ಯಮಂತ್ರಿ ಚಂದ್ರು, ರಾಜ್ಯ ಕಾರ್ಯಧ್ಯಕ್ಷರುಗಳಾದ ಬಿ.ಟಿ. ನಾಗಣ್ಣ, ಮೋಹನ್ ಸೇಸಾಯಿ, ಜಫರ್ ಮೋಹಿದ್ದೀನ್, ರವಿಚಂದ್ರ ನರಬೆಂಚಿ, ಕುಶಾಲ ಸ್ವಾಮಿ, ದೆಹಲಿ ಶಾಸಕ ದಿಲೀಪ್ ಪಾಂಡೆ, ಡಾ. ವೆಂಕಟೇಶ್, ಚನ್ನಪ್ಪ ನೆಲ್ಲೂರು, ರುದ್ರಯ್ಯ ನವಲಿ ಹಿರೇಮಠ, ಟೆನ್ನಿಸ್ ಕೃಷ್ಣ, ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.

Previous articleಮುಖ್ಯೋಪಾದ್ಯಾಯರ ಕಿರುಕುಳದಿಂದ ಬೇಸತ್ತು: ಶಿಕ್ಷಕಿ ಆತ್ಮಹತ್ಯೆ
Next articleಭ್ರಷ್ಟಾಚಾರ ಮಾಡಿದ್ರೆ ಪುತ್ರನನ್ನು ಜೈಲಿಗೆ ಕಳಿಸುವೆ!