ಕಮಡೊಳ್ಳಿ (ಕುಂದಗೋಳ ತಾಲ್ಲೂಕು): ತಮ್ಮ ಪೂರ್ವಜರ ಗ್ರಾಮ, ತವರೂರಾದ ಕಮಡೊಳ್ಳಿ ಗ್ರಾಮಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮಸ್ಥರ ನಿರೀಕ್ಷೆಯಂತೆಯೇ ಮಹತ್ವದ ಘೋಷಣೆ ಮಾಡಿದರು.
`ಕಮಡೊಳ್ಳಿ’ ಗ್ರಾಮವನ್ನು ಇಡೀ ರಾಜ್ಯದಲ್ಲಿಯೇ ಅತ್ಯಂತ ಮಾದರಿ ಗ್ರಾಮವನ್ನಾಗಿ ರೂಪಿಸಲಾಗುವುದು. ಈ ಕಾರ್ಯ ಬುಧವಾರದಿಂದಲೇ ಆರಂಭವಾಗಲಿದೆ ಎಂದು ಘೋಷಿಸಿದರು.
ತವರೂರಲ್ಲಿ ಗ್ರಾಮಸ್ಥರಿಂದ ಕಂಡು ಬಂದ ಅಭಿಮಾನ, ಪ್ರೀತಿಗೆ ಭಾವಪರವಶರಾದ ಮುಖ್ಯಮಂತ್ರಿ, ಈ ಮಣ್ಣಿನ ಗುಣ ಬಹಳ ಶ್ರೇಷ್ಠವಾದುದು. ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದರು. ಇಲ್ಲಿಗೆ ತಂದೆಯೊಂದಿಗೆ ಬಂದಿದ್ದ ವೀರಪ್ಪ ಮೊಯಿಲಿ ಅವರೂ ಮುಖ್ಯಮಂತ್ರಿಯಾಗಿದ್ದರು. ಈಗ ಈ ಮಣ್ಣಿನ ಮಗನಾದ, ನಿಮ್ಮೆ ಮನೆ ಮಗನಾದ ನಾನು ಮುಖ್ಯಮಂತ್ರಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಫಲವಾಗಿ ಈ ಸ್ಥಾನಮಾನ ಲಭಿಸಿದೆ. ಇದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನಿಮ್ಮ ಮನೆ ಮಗನಾಗಿ ಈ ನಾಡಿಗೆ ಹೂವು ತರುತ್ತೇನೆಯೇ ಹೊರತು ಹುಲ್ಲು ತರುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ ಎಂದು ನುಡಿದರು.
ಮಾತನಾಡದೇ ಸಾಮಾಜಿಕ ನ್ಯಾಯದಡಿ ಆಡಳಿತ
ಸುಮಾರು ಎರಡುವರೆ ದಶಕಗಳಿಂದ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಎಂಬ ಮಾತುಗಳನ್ನು ಕೇಳಿಕೊಂಡು ಬಂದಿದ್ದಾಗಿದೆ. ಆದರೆ ಎಲ್ಲೂ ಸಾಮಾಜಿಕ ನ್ಯಾಯ ಕಾಣಲಿಲ್ಲ. ಆದರೆ, ನಾನು ಮುಖ್ಯಮಂತ್ರಿಯಾದ ಬಳಿಕ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡದೇ ಆಡಳಿತದಲ್ಲಿ ಅನುಷ್ಠಾನ ಮಾಡಿದ್ದೇನೆ. ಸರ್ವ ಸಮುದಾಯದ ಹಿತಕ್ಕೆ ಯೋಜನೆ ರೂಪಿಸಿ ಜಾರಿಗೊಳಿಸಿದ್ದೇನೆ. ಮಹಿಳೆಯರು, ದುಡಿಯುವ ವರ್ಗ, ದಲಿತರು, ಕಾರ್ಮಿಕ ವರ್ಗ ಹೀಗೆ ಎಲ್ಲ ಸಮುದಾಯಕ್ಕೂ ಆದ್ಯತೆಯನುಸಾರ ಸಾಮಾಜಿಕ ನ್ಯಾಯದಡಿ ಸರ್ಕಾರ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸವಾಲು ಮೆಟ್ಟಿ ನಿಂತು ನಿಭಾಯಿಸಿದೆ: ನಾನು ಮುಖ್ಯಮಂತ್ರಿಯಾದಾಗ ೫೦೦೦ ಕೋಟಿ ಸಾಲ ಇತ್ತು. ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಪರಿಸ್ಥಿತಿ ನಿಭಾಯಿಸುವುದು ಕಷ್ಟವಿತ್ತು. ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿ ೫೦೦೦ ಕೋಟಿ ಸಾಲ ತೀರಿಸಿ ೧೩೦೦೦ ಕೋಟಿ ಹೆಚ್ವುವರಿ ಸಂಗ್ರಹ ಮಾಡಲಾಯಿತು. ದೂರದೃಷ್ಟಿ, ಜನಹಿತ ಕಲ್ಯಾಣ ಗುರಿ ಇದ್ದರೆ ಎಲ್ಲವೂ ಸಾಧ್ಯ ಎಂದು ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ೨೫ ಲಕ್ಷ ಮನೆಗಳಿಗೆ ಶುದ್ಧ ನಲ್ಲಿ ನೀರು ಪೂರೈಕೆ, ರೈತರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ವಿದ್ಯಾನಿಧಿ ಯೋಜನೆ ಜಾರಿ, ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಪ್ರತಿ ತಿಂಗಳು ೧೦೦೦ ಮೊತ್ತ ಪಾವತಿ ಸೇರಿದಂತೆ ಹತ್ತು ಹಲವು ಯೋಜನೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.
ಇದಕ್ಕೂ ಮೊದಲು ಗ್ರಾಮದೇವತೆ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮದೇವಿಗೆ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಕಮಡೊಳ್ಳಿ ಗ್ರಾಮಕ್ಕೆ ಈ ದಿನ ಹಬ್ಬದ ಸಡಗರ ತಂದಿತ್ತು. ಗ್ರಾಮದ ಮಹಿಳೆಯರು ಮುಖ್ಯಮಂತ್ರಿಗೆ ಆರತಿ ಮಾಡಿ ಸ್ವಾಗತಿಸಿದರು.
ಬಿಜೆಪಿ ಮುಖಂಡ, ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಆರ್. ಪಾಟೀಲ, ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಗ್ರಾಮದ ಹಿರಿಯರು ಇದ್ದರು.