ಮಂಡ್ಯ : ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯ ಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ,ಇಂಧನ ಸಚಿವ ಕೆ.ಜೆ. ಜಾರ್ಜ್ ಕಾಣೆಯಾಗಿದ್ದಾರೆ, ಹುಡುಕಿ ಕೊಟ್ಟವರಿಗೆ ಸಿಂಗಲ್ ಪೇಸ್ ವಿದ್ಯುತ್ ಉಚಿತ,ಕನ್ನಡಿಗರ ಹಣವನ್ನು ಹೊರ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಬಳಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಧಾನಿಯಲ್ಲಿ ನಡೆದಿರುವ ಐಟಿ ದಾಳಿಯಲ್ಲಿ ನೂರಾರು ಕೋಟಿ ಹಣ ಪತ್ತೆಯಾಗಿದೆ,ಹಣದ ಮೂಲ ಕಾಂಗ್ರೆಸ್ಸಿಗರಿಗೆ ಸೇರಿದ್ದಾಗಿದೆ, ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಕರ್ನಾಟಕ ಸರ್ಕಾರ ಹಣ ಸಂಗ್ರಹಿಸಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತಿದೆ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಆಗಿ ಪರಿವರ್ತನೆಯಾಗಿದೆ, ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸರ್ಕಾರ ಶೇ.60 ಕಮಿಷನ್ ಸರ್ಕಾರವಾಗಿ ಬದಲಾಗಿದೆ.ಅಧಿಕಾರಿಗಳಿಗೆ ಹಣ ವಸೂಲು ಮಾಡಲು ಟಾರ್ಗೆಟ್ ನೀಡಲಾಗಿದೆ, ಹಿರಿಯ ಕಲಾವಿದ ಪಂಡಿತ್ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮಕ್ಕೆ ಸಂಭಾವನೆಯಾಗಿ 5 ಲಕ್ಷ ರೂಪಾಯಿ ನೀಡುವಂತೆ ಹಾಗೂ ಅಧಿಕಾರಿಗಳಿಗೆ 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಇದು ಸರ್ಕಾರ ಶೇ.60 ಕಮಿಷನ್ ಸರ್ಕಾರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಯಾಗದೆ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಬೆಳೆಗಳು ಒಣಗುತ್ತಿವೆ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದಲು ಬೆಳಕು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ರಾಜ್ಯದ ಜನತೆಗೆ ಆಳುವ ಸರ್ಕಾರ ಕತ್ತಲೆ ಭಾಗ್ಯ ಕರುಣಿಸಿದೆ ಎಂದು ಕಿಡಿ ಕಾರಿದರು.
ಮಳೆ ಕೊರತೆಯಿಂದ ರಾಜ್ಯದ ನೂರಾರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ, ಆದರೆ ರೈತರಿಗೆ ಪರಿಹಾರ ನೀಡಿಲ್ಲ.ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಅಲ್ಲಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಆರೋಪ ಮಾಡಿದರು.
ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನ ಮಾಡಿರುವ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಅಶೋಕ್ ಜಯರರಾಂ , ಯತ್ತಗದಹಳ್ಳಿ ಸಿದ್ದರಾಮಯ್ಯ ಸಿ.ಟಿ.ಮಂಜುನಾಥ್, ಬೇಕರಿ ಅರವಿಂದ್, ನಗರ ಅಧ್ಯಕ್ಷ ವಿವೇಕ್, ನಾಗಾನಂದ್,ಪ್ರಸನ್ನ, ಹನಿಯಂಬಾಡಿ ನಾಗರಾಜ್, ಸುರೇಶ್, ಬಿ.ಟಿ ಶಿವಲಿಂಗಯ್ಯ, ಮಹಾಂತಪ್ಪ ನೇತೃತ್ವ ವಹಿಸಿದ್ದರು