ಸುಳ್ಯ: ಈ ಬಾರಿಯ ಚುನಾವಣೆ ರಾಜ್ಯದ ಭವಿಷ್ಯದ ದೃಷ್ಠಿಯಿಂದ ಬಹಳ ಮುಖ್ಯವಾದ ಚುನಾವಣೆ. ಎಷ್ಟೇ ಭಿನ್ನಾಭಿಪ್ರಾಯ, ಅಸಮಾಧಾನ ಇದ್ದರೂ ಅದನ್ನು ಬದಿಗಿರಿಸಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನ ಸುಳ್ಯದಲ್ಲಿ ಗೆಲ್ಲಿಸಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದೆ ಬಡವರು ಕೂಡಾ ಬ್ಯಾಂಕ್‌ಗೆ ಹೋಗುವಂತೆ ಮಾಡಿದ್ದು ಇಂದಿರಾಗಾಂಧಿ. ಮಂಗಳೂರು-ಉಡುಪಿಯ ಜನತೆ ಬ್ಯಾಂಕ್ ಸ್ಥಾಪನೆ ಮಾಡಿದರು. ಆದ್ರೆ ಇದೀಗ ಕರಾವಳಿಯ ಕೆಲ ಬ್ಯಾಂಕ್‌ಗಳನ್ನ ಬೇರೆ ಬ್ಯಾಂಕ್ ಜೊತೆ ವಿಲೀನ ಮಾಡಿದ್ದಾರೆ. ಇದು ಯಾತಕ್ಕಾಗಿ ಅಂತ ಮೋದಿಜಿ ಅವರು ಹೇಳಬೇಕು. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದ ಅವರು ಕಾಂಗ್ರೆಸ್ ಸರ್ಕಾರ ಇರುವಾಗ ಅದೆಷ್ಟೋ ಕಾರ್ಯಕ್ರಮಗಳನ್ನ ಕೊಟ್ಟು ರಸ್ತೆಗಳನ್ಬು, ಸೇತುವೆಗಳನ್ನು, ಬೃಹತ್ ಕೈಗಾರಿಕೆಗಳನ್ನು ಕೊಟ್ಟು ಮಂಗಳೂರು ಮತ್ತು ಉಡುಪಿಯನ್ನು ಅಭಿವೃದ್ಧಿ ಮಾಡಿದ್ದೇವೆ. ಆದರೆ ಕರಾವಳಿಯಲ್ಲಿ ಬಿಜೆಪಿ ಅಭಿವೃದ್ಧಿಗೆ ಒತ್ತು ನೀಡಿಲ್ಲ ಬದಲಾಗಿ, ಧರ್ಮ ಧರ್ಮಗಳ ನಡುವೆ ದ್ವೇಷ ಉಂಟು ಮಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಕೆಲಸ ಎಂದರು.
ಕಾಂಗ್ರೆಸ್ ಈ ಬಾರಿ ನೀಡಿರುವ ಗ್ಯಾರಂಟಿ ಕಾರ್ಡ್ ಪಕ್ಷ ನೀಡುವ ಪಕ್ಕಾ ಗ್ಯಾರಂಟಿ ಎಂದ ಅವರು 200 ಯೂನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ, ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ, ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವ ಗೃಹ ಲಕ್ಷ್ಮಿ ಯೋಜನೆ, ಯುವಕರಿಗೆ ಪಿಂಚಣಿ ನೀಡುವ ಯುವ ನಿಧಿ ಯೋಜನೆ ಅನುಷ್ಠಾನ ಮಾಡಿಯೇ ಮಾಡ್ತೇವೆ. ಯಾರೇ ಮುಖ್ಯಮಂತ್ರಿ ಆದರೂ ಕೊಟ್ಟ ವಚನವನ್ನು ಪಾಲಿಸುತ್ತೇವೆ ಎಂದರು.