ಬೆಳಗಾವಿ: ಅಳೆದೂ ಸುರಿದೂ ಲೆಕ್ಕಾಚಾರದ ಬಳಿಕ ಕಾಂಗ್ರೆಸ್ ಇಂದು ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ೪೨ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪಕ್ಕಾ ಆಗಿದೆ. ಬೆಳಗಾವಿ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇನ್ನು ಗೋಕಾಕ, ಸವದತ್ತಿ, ಕಿತ್ತೂರು, ನಿಪ್ಪಾಣಿ ಕ್ಷೇತ್ರಗಳ ಟಿಕೇಟು ಘೋಷಣೆಯಾಗಿದ್ದು, ಈ ನಾಲ್ಕೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟುವ ಸಂಪೂರ್ಣ ಸಾಧ್ಯತೆ ಇದ್ದು, ಇದೀಗ ಈ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ.
ಕಿತ್ತೂರಿನಲ್ಲಿ ಇನಾಮದಾರ್ ಕುಟುಂಬಕ್ಕೆ ಕೈ ಕೊಟ್ಟ ಕಾಂಗ್ರೆಸ್ ನಾಯಕರು. ಡಿಬಿ ಇನಾಮದಾರ್ ಆರೋಗ್ಯ ನೆಪ ಹೇಳಿ ಅವರ ಅಳಿಯ ಬಾಬಾಸಾಹೇಬ್ ಪಾಟೀಲ್‌ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಟಿಕೆಟ್ ಕೈತಪ್ಪಿದ ಹಿನ್ನೆಲೆ ಇನಾಮದಾರ್ ಕುಟುಂಬಸ್ಥರಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಸಾಧ್ಯತೆ ದಟ್ಟವಾಗಿದೆ. ಇಂದು ಮನೆಯಲ್ಲಿ ಸಭೆ ಕರೆದು ಮುಂದಿನ ತೀರ್ಮಾನ ಘೋಷಣೆ ಮಾಡಲಿರುವ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ. ಮತ್ತೋರ್ವ ಟಿಕೆಟ್
ಆಕಾಂಕ್ಷಿ ಹಬೀಬ್ ಶಿಲ್ಲೇದಾರ್ ಇಬ್ಬರೂ ಕಣಕ್ಕೆ ಇಳಿಯುವ ಸಾಧ್ಯತೆ ಎದ್ದು ಕಾಣುತ್ತಿದೆ. ನಿಪ್ಪಾಣಿಯಲ್ಲಿ ಕಾಕಾ ಸಾಹೇಬ ಪಾಟೀಲರಿಗೆ ಟಿಕೇಟು ಸಿಕ್ಕಿದ್ದು, ಟಿಕೇಟ್ ಆಕಾಂಕ್ಷಿಯಾಗಿದ್ದ ಉತ್ತಮ ಪಾಟೀಲರಿಗೆ ಹಿಂದೇಟಾಗಿದೆ. ನಿಪ್ಪಾಣಿ ಭಾಗದಲ್ಲಿ ಭಾರೀ
ಜನಮೆಚ್ಚುಗೆ ಪಡೆದಿರುವ ಉತ್ತಮ ಪಾಟೀಲ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಾಂತೇಶ ಕಡಾಡಿಯವರ ಹೆಸರು ಘೋಷಣೆಯಾಗಿದ್ದು, ಟಿಕೇಟು ಆಕಾಂಕ್ಷಿಯಾಗಿರುವ ಅಶೋಕ ಪೂಜಾರಿಯವರಿಗೆ ತೀವ್ರ ಹಿನ್ನೆಡೆಯಾಗಿದೆ. ಟಿಕೇಟು ಕೊಡುವ ಭರವಸೆಯಲ್ಲಿಯೇ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಅಶೋಕ ಪೂಜಾರಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಆದರೆ ಪಂಚಮಸಾಲಿ ಹೋರಾಟದ
ಹೆಸರಿನಲ್ಲಿ ನಾಯಕರ ದಿಕ್ಕು ತಪ್ಪಿಸಿ ಮಹಾಂತೇಶ ಕಡಾಡಿಗೆ ಟಿಕೇಟು ನೀಡಿರುವುದು ಸ್ವತಃ ಅಶೋಕ ಪೂಜಾರಿಯವರನ್ನು ಕೆರಳಿಸಿದ್ದು, ಪಕ್ಷದ ವಿರುದ್ಧ ಅವರು ಬಂಡಾಯದ ಭಾವುಟ ಹಾರಿಸುವುದು ಸ್ಪಷ್ಟ ಎನ್ನಲಾಗುತ್ತಿದೆ.
ಇನ್ನು ಸವದತ್ತಿಯಲ್ಲಿ ದಿವಂಗತ ಆನಂದ ಛೋಪ್ರಾ ಅವರ ಪುತ್ರ ಸೌರಭ ಛೋಪ್ರಾ ಅವರು ಕಾಂಗ್ರೆಸ್‌ಗೆ ನಿದ್ದೆಗೆಡಿಸುವ ಸಾಧ್ಯತೆ ಇದೆ. ಈ ಹಿಂದಿನ ಚುನಾವಣೆಯಲ್ಲಿ ಆನಂದ ಛೋಪ್ರಾ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೋಲಿನ ರುಚಿ ಕಂಡಿದ್ದು, ಆನಂದ ಮಾಮನಿಯವರು ಗೆದ್ದಿದ್ದರು. ಇಂದು ಆನಂದ ಛೋಪ್ರಾ ಹಾಗೂ ಆನಂದ ಮಾಮನಿ ಇಬ್ಬರೂ ಇಹಲೋಕದಲ್ಲಿಲ್ಲ. ಆದರೆ ಛೋಪ್ರಾ ಪುತ್ರ ಸೌರಭ ಟಿಕೇಟು ಆಕಾಂಕ್ಷಿಯಾಗಿದ್ದು, ಇದೀಗ ವಿಶ್ವಾಸ ವೈದ್ಯರಿಗೆ ಟಿಕೇಟು ಪಕ್ಕಾ ಆಗಿರುವ ಹಿನ್ನೆಲೆಯಲ್ಲಿ ಬಂಡಾಯದ ಕಿಡಿ ಹಾರಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಟಿಕೇಟು ಅರ್ಜಿ ಸಲ್ಲಿಸುವಾಗ ಕಾಂಗ್ರೆಸ್ ಪಕ್ಷ ನಮ್ಮಿಂದ ೨ ಲಕ್ಷ ರೂ. ದೇಣಿಗೆ ಪಡೆದು ಇದೀಗ ಏಕಮುಖವಾಗಿ ಟಿಕೇಟು ತೀರ್ಮಾನಿಸಿದೆ ಎಂಬ ಆಕ್ರೋಶ ಈಗ ಆಕಾಂಕ್ಷಿಗಳಲ್ಲಿದೆ. ಈ ಎಲ್ಲಾ ಆಕಾಂಕ್ಷಿಗಳ ಬಂಡಾಯದ ಬಿಸಿ ಸಮನಗೊಳಿಸುವಲ್ಲಿ ಕಾಂಗ್ರೆಸ್ ವರಿಷ್ಠರು ಸಫಲರಾಗುತ್ತಾರೋ? ಇಲ್ಲವೋ ಎಂಬುದನ್ನು ಕಾದು ನೋಡಬೇಕು.