ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಿಂದ ಅನುಕಂಪದ ಆಧಾರದಲ್ಲಿ ದ. ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀಡಲಾಗಿದ್ದ ಉದ್ಯೋಗಕ್ಕೆ ಕುತ್ತು ಬಂದಿದೆ.
ನೂತನ ಕುಮಾರಿ ಕಳೆದ ಏಳು ತಿಂಗಳುಗಳಿಂದ ಮಂಗಳೂರಿನಲ್ಲಿರುವ ದ. ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪ್ರವೀಣ್ ಪತ್ನಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ, ಕೆಲಸ ಕೊಡಿಸುವುದಾಗಿ ಬಿಜೆಪಿ ಹೇಳಿತ್ತು. ಅದರಂತೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ೨೦೨೨ರ ಸೆ. ೨೨ರಂದು ನೇಮಿಸಲಾಗಿತ್ತು. ಈಗ ಕೆಲಸದಿಂದ ಬಿಡುಗಡೆಗೊಳಿಸಿರುವ ಆದೇಶ ಅವರ ಕೈ ತಲುಪಿದೆ.
ಈ ಮುಖ್ಯಮಂತ್ರಿ ಅಧಿಕಾರ ಇರುವ ತನಕ ಅಥವಾ ಮುಂದಿನ ಆದೇಶವರೆಗೆ ಎಂದು ನೇಮಕಾತಿ ಆದೇಶದಲ್ಲಿ ನಮೂದಿಸಲಾಗಿತ್ತು. ನೂತನ ಕುಮಾರಿ ಅವರ ವಿನಂತಿ ಮೇರೆಗೆ ಅವರಿಗೆ ಸ್ಥಳೀಯವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನೀಡಲಾಗಿತ್ತು. ಅವರು ಅಕ್ಟೋಬರ್ ೧೪ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.
ಪ್ರಸ್ತಾವನೆ: ‘ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ. ತಮ್ಮನ್ನು ಮುಂದುವರಿಸಲು ನೂತನಕುಮಾರಿ ಅವರು ಕೋರಿದರೆ ಅದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಕೇಂದ್ರ ಸರಕಾರದ ಅಧೀನ ಸಂಸ್ಥೆಯಲ್ಲಿ ಉದ್ಯೋಗ: ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ನೀಡಿ, ಮನೆ ನಿರ್ಮಿಸಿಕೊಟ್ಟು ನಮ್ಮ ಸರ್ಕಾರ ಪತ್ನಿಗೆ ಉದ್ಯೋಗ ನೀಡಿತ್ತು. ಪ್ರವೀಣ್ ನೆಟ್ಟಾರು ಪತ್ನಿ ಕೆಲಸದ ವಿಚಾರದಲ್ಲಿ ನಮ್ಮ ಸರ್ಕಾರವೇ ಮುಂದೆಯೂ ಬರುತ್ತದೆ ಎಂದು ಆದೇಶ ಮಾಡಿದ್ದೆವು. ಆದರೆ ಸರ್ಕಾರ ಬದಲಾಗಿದೆ. ಅನುಕಂಪದ ಆಧಾರದಲ್ಲಿ ಕೊಟ್ಟ ಉದ್ಯೋಗವನ್ನು ಈಗ ತೆಗೆಯಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅಂತಹವರ ಬಗ್ಗೆ ಸರ್ಕಾರಕ್ಕೆ ಮಾನವೀಯತೆ ಇರಬೇಕು, ಮುಖ್ಯಮಂತ್ರಿ ಅವರಿಗೆ ತಕ್ಷಣ ಮತ್ತೆ ಉದ್ಯೋಗ ನೀಡಬೇಕು. ಒಂದು ವೇಳೆ ನೀವು ಕೊಡದೇ ಇದ್ದರೂ ಎನ್‌ಎಂಪಿಎ ಮುಂತಾದ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಉದ್ಯೋಗ ಕೊಡುತ್ತೇವೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು: ಸರಕಾರ ಬದಲಾದ ಬೆನ್ನಲ್ಲೇ ಹಿಂದಿನ ಸರಕಾರ ಮಾಡಿರುವ ಎಲ್ಲ ತಾತ್ಕಾಲಿಕ ನೇಮಕಾತಿಗಳನ್ನು ರದ್ದುಗೊಳಿಸಲಾಗಿದೆ. ನೂತನ ಸರಕಾರದ ಈ ಆದೇಶದಿಂದ ಅನುಕಂಪದ ಆಧಾರದಲ್ಲಿ ನೌಕರಿ ಪಡೆದಿದ್ದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯ ನೌಕರಿ ಕಳೆದುಕೊಂಡಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿಯು ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ’ಕಾಂಗ್ರೆಸ್ ನಿಂದ ದ್ವೇಷ ರಾಜಕಾರಣ’ ಎಂದು ಟೀಕಿಸಿ ಟ್ವೀಟ್ ಮಾಡಿದೆ. ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ”ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರುವ ಬಿಜೆಪಿಗೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಆಸಕ್ತಿ , ಸಮಯ ಇರಲು ಸಾಧ್ಯವೇ? ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ, ಬದುಕಿಗೆ ಶಾಶ್ವತ ದಾರಿ ತೋರಿಸದೆ ಇಂತಹ ಪೇಪರ್ ಚಾಕ್ಲೆಟ್ ನೀಡುವ ಮೂಲಕ ಬಿಜೆಪಿ ಪ್ರವೀಣ್ ಪತ್ನಿಗೆ ದ್ರೋಹವೆಸಗಿದೆ’ ಎಂದು ಕಾಂಗ್ರೆಸ್ ಹೇಳಿದೆ.
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಉದ್ಯೋಗ ಕಳೆದುಕೊಂಡ ನೆಟ್ಟಾರು ಪತ್ನಿಗೆ ಕೇಂದ್ರ ಸರಕಾರದ ಅಧೀನ ಸಂಸ್ಥೆಯಲ್ಲಿ ಉದ್ಯೋಗ