ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಭಾನುವಾರ ಬ್ರಹತ್ ಪಾದಯಾತ್ರೆ ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತ್ತು ಚುನಾವಣೆಯ ಬಳಿಕ ವಿದ್ಯಮಾನಗಳನ್ನು ಪುತ್ತೂರು ಮಹಾಲಿಂಗೇಶ್ವರ ದೇವರ ಮುಂದೆ ಅರ್ಪಿಸುವ ಸಲುವಾಗಿ, ಅರುಣ್ ಕುಮಾರ್ ಪುತ್ತಿಲ ಆಯೋಜಿಸಿದ ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಕಾಲ್ನಡಿಗೆ ಜಾಥಾ ಅಭೂತಪೂರ್ವ ಯಶಸ್ಸು ಕಂಡಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಗದ್ದೆಯಲ್ಲಿ ಭಾನುವಾರ ನಡೆದ ಈ ‘ಸೇವಾ ಸಮರ್ಪಣಾ’ ಕಾರ್ಯಕ್ರಮದಲ್ಲಿ ‘ಪುತ್ತಿಲ ಪರಿವಾರ’ ಲಾಂಚನ ಬಿಡುಡೆಗೊಳಿಸಲಾಯಿತು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, 20 ದಿನಗಳಲ್ಲಿ 62,000 ಮತ ಪಡೆದಿದ್ದೇವೆಂದರೆ ಕಾರ್ಯಕರ್ತರ ಹಾಗೂ ಹಿರಿಯರ ಪರಿಶ್ರಮದಿಂದ ಆಗಿದೆ. ನೀವು ನಮ್ಮೆ ಮೇಲೆ ಇಟ್ಟಿರುವ ನಂಬಿಕೆಯನ್ನು ಕೊನೆವರೆಗೂ ಉಳಿಸಿಕೊಳ್ಳುತ್ತೇನೆ. ಹಾಗೆಯೆ ನನ್ನ ಮೇಲೆ ಬಂದಿರುವ ಎಲ್ಲಾ ಆರೋಪ, ಅಪಚಾರಗಳಿಗೆ ದೇವರು ಉತ್ತರ ಕೊಡುತ್ತಾನೆ ಎಂದರು. ಇಂದು ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ನಡೆದ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡಿರುವ ಅರುಣ ಕುಮಾರ ಪುತ್ತಿಲ “ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಯಿಂದ , ಹಿರಿಯರ ಆಶೀರ್ವಾದದಿಂದ ಹಾಗೂ ಮುಖ್ಯವಾಗಿ ಎಲ್ಲಾ ಕಾರ್ಯಕರ್ತರ ಪ್ರೀತಿ , ಧೈರ್ಯ , ಶಕ್ತಿಯಿಂದ ಚುನಾವಣಾ ಸಂದರ್ಭದಿಂದ ಹಿಡಿದು ಇಂದಿನ ತನಕ ನನ್ನಲ್ಲಿರುವ ಇಚ್ಛಾ ಶಕ್ತಿ ಕುಗ್ಗದಂತೆ ಕಾಪಾಡಿದ್ದೀರಿ.” ಎಂದಿದ್ದಾರೆ.