ರಟ್ಟೀಹಳ್ಳಿ: ಪಥಸಂಚಲನ ನಡೆಸಲು ರೂಟ್ ಮ್ಯಾಪ್ ಮಾಡುತ್ತಿದ್ದ ಆರ್‌ಎಸ್‌ಎಸ್ ಮುಖಂಡರ ಮೇಲೆ ಅನ್ಯಧರ್ಮಿಯರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ರಟ್ಟೀಹಳ್ಳಿಯ ಅಂಜುಮನ್ ಕಮಿಟಿ ಅಧ್ಯಕ್ಷ ಸೇರಿದಂತೆ ೨೦ ಜನರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಟ್ಟೀಹಳ್ಳಿ ಪಟ್ಟಣದಲ್ಲಿ ಅ. ೭ರಿಂದ ಆರ್‌ಎಸ್‌ಎಸ್ ಶಿಬಿರ ನಡೆಯುತ್ತಿದ್ದು, ಅ. ೧೪ರಂದು ಪಥಸಂಚಲನ ನಡೆಯಲಿದೆ. ಈ ಪಥ ಸಂಚಲನದ ರೂಟ್ ಮ್ಯಾಪ್ ಪರಿಶೀಲನೆಗೆ ಮಂಗಳವಾರ ರಾತ್ರಿ ಆರ್‌ಎಸ್‌ಎಸ್ ಮುಖಂಡರು ತೆರಳಿದ್ದರು. ಹೀಗೆ ರೂಟ್ ಮ್ಯಾಪ್ ಮಾಡುತ್ತಾ ಹಳೆ ಬಸ್ ನಿಲ್ದಾಣದ ಮುಂಭಾಗಕ್ಕೆ ಬರುತ್ತಿದ್ದಂತೆ ಏಕಾಏಕಿ ಸೇರಿದ ನೂರಕ್ಕೂ ಹೆಚ್ಚು ಜನರು ದಾಳಿ ನಡೆಸಿ ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಆರ್‌ಎಸ್‌ಎಸ್ ಪ್ರಮುಖರ ಮೇಲೆ ಹಲ್ಲೆ ನಡೆಸಿದ್ದಾರೆ. ಗುರಣ್ಣ ಕುಲಕರ್ಣಿ, ಚಂದ್ರಣ್ಣ, ಮಾಲತೇಶ, ಸುನೀಲ್ ಅವರ ಮೇಲೆ ಹಲ್ಲೆ ನಡೆದಿದ್ದು, ಕಾರಿನ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ. ಈ ಕುರಿತು ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.























