ಬಾಗಲಕೋಟೆ: ಜವಳಿ ಕ್ಷೇತ್ರದಲ್ಲಿ ಅತ್ಯಂತ ಮಹತ್ವ ಪಾತ್ರ ವಹಿಸುವಲ್ಲಿ ಸೈಜಿಂಗ್ ಘಟಕಗಳ ಪಾತ್ರ ಪ್ರಮುಖವಾದುದು. ಮೊದಲು ಕಚ್ಚಾ ವಸ್ತುಗಳು ಈ ಘಟಕಕ್ಕೆ ಬಂದ ಮೇಲೆಯೇ ನಂತರ ಸೀರೆಗಳ ವಿನ್ಯಾಸ, ರೂಪ ಹೀಗೆ ಎಲ್ಲವನ್ನೂ ತಯಾರಿಸಲು ಸಾಧ್ಯ. ಇಂತಹ ಘಟಕಗಳೇ ಅವಸಾನದತ್ತ ಸಾಗಿವೆಯೆಂದರೆ ಇನ್ನು ನೇಕಾರರ ಸ್ಥಿತಿ ಯಾವ ಮಟ್ಟಕ್ಕಿದೆ ಎಂಬುದನ್ನು ಆಲೋಚಿಸಬಹುದು.
ಹೌದು, ಕಾಟನ್ ಬಟ್ಟೆ ತಯಾರಿಸಲು ಬೇಕಾಗುವ ಕಚ್ಚಾ ವಸ್ತುವಾದ ಹತ್ತಿ ಬೆಲೆ ಗಗನಕ್ಕೇರಿದ್ದರಿಂದ ಅಲ್ಲದೆ ಇಡೀ ರಬಕವಿ-ಬನಹಟ್ಟಿ ನಗರದಲ್ಲಿ ಕಾಟನ್ ಬಟ್ಟೆಗಳೇ ತಯಾರಾಗುತ್ತಿದ್ದವು. ಇದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 30 ಸೈಜಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಕೋವಿಡ್ ನಂತರದ ದಿನಗಳಲ್ಲಿ ಇದೀಗ ಬೆರಳಣಿಕೆಯಷ್ಟು ಮಾತ್ರ ಸ್ವಲ್ಪಮಟ್ಟಿಗೆ ನಿರ್ವಹಣೆಯಾಗುತ್ತಿದ್ದರೆ, ಉಳಿದೆಲ್ಲವುಗಳು ಧೂಳು ತಿನ್ನುತ್ತಿವೆ.
ಸೈಜಿಂಗ್ ಘಟಕಗಳನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಕುಟುಂಬಗಳು ಅನ್ಯ ಉದ್ಯೋಗದತ್ತ ವಾಲುತ್ತ ಗೌಂಡಿ(ಮನೆ ಕಟ್ಟುವ ಕೆಲಸ), ಹೊಟೇಲ್-ಧಾಬಾ ಹಾಗೂ ಮಹಿಳೆಯರು ಮನೆ ಮನೆಗೆ ತೆರಳಿ ಮನೆಗೆಲಸ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು ಮಾಲೀಕರ ಪರಿಸ್ಥಿತಿಯಂತು ತೀರಾ ಹದಗೆಟ್ಟಿದ್ದು, ಲಕ್ಷಾಂತರ ರೂ.ಗಳ ವೆಚ್ಚದೊಂದಿಗೆ ಸೈಜಿಂಗ್ ಘಟಕ ನಿರ್ಮಿಸಿಕೊಂಡು ಸಾಲ ಮಾಡಿಕೊಂಡು ಇದೀಗ ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಒಂದೆಡೆಯಾದರೆ, ಅನ್ಯ ಉದ್ಯೋಗವಿಲ್ಲದೆ ಖಾಲಿ ಕೈಗಳಿಂದ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಬಂದ್‌ಗೆ ಪ್ರಮುಖ ಕಾರಣ
ಸೈಜಿಂಗ್ ಘಟಕಗಳು ನಿರ್ವಹಣೆಯಾಗಬೇಕಾದರೆ ಕಾಟನ್(ಹತ್ತಿ) ನೂಲು ಬೇಕೇ ಬೇಕು. ಇದೀಗ ಅವಳಿ ನಗರಾದ್ಯಂತ ಕಾಟನ್ ಬೆಲೆ ಹೆಚ್ಚಳಗೊಂಡಿದ್ದಲ್ಲದೆ, ಮಾರುಕಟ್ಟೆಯಲ್ಲಿ ಸಮರ್ಪಕ ಮಾರುಕಟ್ಟೆ ದೊರಕದ ನಿಟ್ಟಿನಲ್ಲಿ ಮಸರಾಯಿಜ್ಡ್ ಹಾಗೂ ಪಾಲಿಸ್ಟರ್‌ಗೆ ಮೊರೆ ಹೋಗಿದ್ದಾರೆ. ಇವೆಲ್ಲದರ ಕಚ್ಚಾ ವಸ್ತುಗಳು ಗುಜರಾತ್‌ನ ಸೂರತ್ ಹಾಗೂ ತಮಿಳುನಾಡಿನ ಚಿರಾಲ್‌ದಿಂದ ತಯಾರಾದ ನೂಲುಗಳು ದೊರೆಯುತ್ತಿವೆ.
ಮಹಿಳೆಯರಿಗೆ ವರವಾಗಿದ್ದ ಸೈಜಿಂಗ್
ಸಾವಿರಾರು ಮಹಿಳೆಯರು ಕೆಲಸ ಮಾಡುವಲ್ಲಿ ಸೈಜಿಂಗ್ ಘಟಕಗಳು ನೆರವಾಗಿದ್ದವು. ಇದೀಗ ಎಲ್ಲವೂ ಬಂದ್ ಆಗಿರುವ ಹಿನ್ನಲೆ ಸಾವಿರಾರು ಕಾರ್ಮಿಕರು ಅನಾಥವಾಗುವಲ್ಲಿ ಕಾರಣವಾಗಿ ದುಡಿಮೆಯಿಲ್ಲದೆ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಾಗಿದೆ.
ಪ್ರಮುಖವಾಗಿ ಅತಿ ಅವಶ್ಯವಾಗಿ `ಜವಳಿ ಪಾರ್ಕ್’ ನಿರ್ಮಾಣವಾಗಬೇಕಿತ್ತು. ಕಳೆದೆರಡು ದಶಕಗಳಿಂದ ಇಲ್ಲಿ ಸ್ಥಾಪನೆಗೊಳ್ಳಲು ವೈಫಲ್ಯತೆ ಕಂಡ ಕಾರಣ ಪ್ರಸಕ್ತವಾಗಿ ಜವಳಿ ಅಭಿವೃದ್ಧಿಯಾಗದೆ ಒಂದೊಂದಾಗಿ ಕಾರ್ಯ ಕ್ಷೇತ್ರಗಳು ಮುಚ್ಚಲು ಕಾರಣವಾಗುತ್ತಿವೆ.
ಸರ್ಕಾರಕ್ಕೆ ಸಾಕಷ್ಟು ಬಾರಿ ಒತ್ತಾಯಪಡಿಸಿದರೂ ಯಾವುದೇ ಪ್ರಯೋಜನವಾಗದೆ ಈ ಭಾಗದ ನೇಕಾರ ಸಮುದಾಯ ಕೈಕಟ್ಟಿ ಕುಳಿತುಕೊಳ್ಳುವಂತಾಗಿದ್ದು, ಹಿಂದಿನ ಸರ್ಕಾರಗಳು ಕೋನ್ ಡೈಯಿಂಗ್, ಜವಳಿ ಪಾರ್ಕ್ ಸೇರಿದಂತೆ ಈ ಭಾಗದ ನೇಕಾರರಿಗೆ ಆಶ್ವಾಸನೆಗಳನ್ನು ನೀಡುತ್ತ ಹಗಲಿನಲ್ಲಿಯೇ ಆಕಾಶದಲ್ಲಿ ಚುಕ್ಕೆಗಳನ್ನು ತೋರಿಸುವದನ್ನು ಮಾತ್ರ ನಿಲ್ಲಿಸಿಲ್ಲ.