ಮಂಗಳೂರು: ವಾಹನಗಳಿಗೆ ವಿಮೆ ಮಾಡದಿದ್ದರೆ ಏನೆಲ್ಲಾ ಆಗಬಹುದು ಎಂಬ ಕುರಿತು ಜನತೆಗೆ ಜಾಗೃತಿ ಮೂಡಿಸಲು ಮಂಗಳೂರಿನ ಕದ್ರಿಯಲ್ಲಿರುವ ಸಂಚಾರ ಪೂರ್ವ ಠಾಣೆಯ ಪೊಲೀಸರು ತೆಗೆದು ಕೊಂಡಿರುವ ವಿಶಿಷ್ಟ ಕ್ರಮ ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿದೆ.
ಕದ್ರಿ ಸಂಚಾರ ಪೂರ್ವ ಠಾಣೆಯು ರಸ್ತೆಗೆ ತಾಗಿಕೊಂಡಿದೆ. ದಿನಕ್ಕೆ ಸಾವಿರಾರು ವಾಹನಗಳು ಠಾಣೆಯ ಮುಂದೆಯೇ ಸಾಗುತ್ತದೆ. ಈ ಸಂದರ್ಭದಲ್ಲಿ ವಾಹನ ಸವಾರರ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಅಪಘಾತಕ್ಕೀಡಾದ ಕಾರೊಂದನ್ನ ಬಳಸಿಕೊಂಡು ವಾಹನ ವಿಮೆ (ಇನ್ಶೂರೆನ್ಸ್) ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಪಘಾತಕ್ಕೀಡಾಗಿ ಠಾಣೆ ಮುಂದೆ ಕೆಲವು ದಿನಗಳಿಂದ ನಿಲ್ಲಿಸಲಾಗಿರುವ ನ್ಯಾನೋ ಕಾರಿನ ಬಾನೆಟ್ ಮೇಲೆ ಹಾಕಲಾದ ಬ್ಯಾನರ್‌ನಲ್ಲಿ ಅಪಘಾತದ ವಿವರದ ಜೊತೆ ವಿಮೆ ಮಹತ್ವವನ್ನು ತಿಳಿಸಲಾಗುತ್ತಿದೆ.
ಬ್ಯಾನರ್‌ನಲ್ಲಿ ‘ನನ್ನ ಹೆಸರು ಕೆಎ೧೨ ಎನ್೮೭೦೭ ನ್ಯಾನೋ ಕಾರು, ನನ್ನನ್ನು ನನ್ನ ಮಾಲಕನು ಖರೀದಿ ಮಾಡಿರುತ್ತಾನೆ. ಆದರೆ ನನ್ನ ಮಾಲಕ ನನಗೆ ಇನ್ಶುರೆನ್ಸ್ ಮಾಡಿಸಿರುವುದಿಲ್ಲ. ಹೀಗಿರುವಾಗಿ ದಿನಾಂಕ ೧೧-೦೬-೨೦೨೩ ರಂದು ಯೆಯ್ಯಾಡಿಯಲ್ಲಿ ಮಾಲಿಕನ ಅಜಾಗರೂಕತೆಯಿಂದ ನನ್ನನ್ನು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರನು ಗಂಭೀರ ಗಾಯಗೊಂಡು ಮೃತಪಟ್ಟಿರುತ್ತಾನೆ. ವಿಮೆ (ಇನ್ಶುರೆನ್ಸ್) ಇಲ್ಲದ ಕಾರಣ ನನ್ನನ್ನು ಪೊಲೀಸ್ ಠಾಣೆ ಮುಂಭಾಗ ಇಡಲಾಗಿದೆ. ನಾನು ಅನಾಥನಾಗಿದ್ದೇನೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬಾರದಿರಲಿ.” ಎಂದು ಬರೆಯಲಾಗಿದೆ. ಜೊತೆಗೆ, “ನಿಮ್ಮ ವಾಹನಕ್ಕೆ ವಿಮೆ ಮಾಡಿಸಿ. ಸುರಕ್ಷತೆಯ ಚಾಲನೆಯನ್ನು ಆನಂದಿಸಿ” ಎಂದು ಸಂದೇಶವನ್ನು ನೀಡಲಾಗಿದೆ.
ವಾಹನಕ್ಕೆ ವಿಮೆ ಮಾಡಿಸದಿದ್ದರೆ, ಇಲ್ಲವೇ ವಿಮೆ ನವೀಕರಿಸದಿದ್ದರೆ ಅಥವಾ ಪ್ರೀಮಿಯಂ ಮೊತ್ತ ಪಾವತಿಸದಿದ್ದರೆ ಏನೆಲ್ಲಾ ಅನಾಹುತ ಆಗಬಹುದೆಂಬ ಜಾಗೃತಿ ಮೂಡಿಸುವ ಪೊಲೀಸರ ಈ ಕ್ರಮ ಎಲ್ಲೆಡೆ ಸುದ್ದಿಯಾಗಿದೆ.