ಕಲಬುರಗಿ: `ಬಿಜೆಪಿ ಅಥವಾ ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದವರೇ ತಮ್ಮ ವೈಫಲ್ಯಗಳನ್ನು ಮರೆಮಾಚಲು ಯಾವುದೋ ಸಬೂಬು ಹೇಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನರ ವಿಚಾರದಲ್ಲಿ, ಕನ್ನಡಿಗರ ಅಸ್ಮಿತೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ಕಿ ಒದಗಿಸುವ ಬಗ್ಗೆ ಸಕಾರಾತ್ಕವಾಗಿಯೇ ಸ್ಪಂದಿಸಿದ್ದಾರೆ ಎಂದರು.
ನಾವೇನೂ ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಅಮಿತ್ ಶಾ ಕೊಡುವುದಿಲ್ಲವೆಂದೇನೂ ಹೇಳಿಲ್ಲ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ಕೇಂದ್ರ ಸಕಾರಾತ್ಕಕವಾಗಿ ಸ್ಪಂದಿಸಿದೆ ಎನ್ನುವ ಮೂಲಕ ಅಕ್ಕಿ ಸಿಗುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.
ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕರ್ನಾಟಕಕ್ಕೂ ಅಕ್ಕಿ ಕೊಡುತ್ತಿದ್ದು, ಪ್ರತಿಯೊಬ್ಬರಿಗೂ ಐದು ಕೆಜಿ ಸಿಗುತ್ತಲಿದೆ. ಈಗ ನಾವು ಕೇಳುತ್ತಿರುವುದು ಕೇಂದ್ರ ಕೊಡುವ 5 ಕೆಜಿ ಜೊತೆ ರಾಜ್ಯದ ಇನ್ನೂ ಹತ್ತು ಕೆಜಿ, ಅಂದರೆ ಕಾಂಗ್ರೆಸ್‌ನ ಚುನಾವಣೆ ಗ್ಯಾರಂಟಿಯಲ್ಲಿ ಘೋಷಣೆ ಮಾಡಿರುವಂತೆ 10 ಕೆಜಿ ಸೇರಿದಂತೆ ಜನರಿಗೆ ಒಟ್ಟು 15 ಕೆಜಿ ಕೊಡಿ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.
ರಾಜ್ಯ ಸರ್ಕಾರ ಎಫ್ ಸಿ ಐ ಅಧಿಕಾರಿಗಳ ಬದಲು ಕೇಂದ್ರ ಆಹಾರ ಮಂತ್ರಿಗಳಲ್ಲಿ ಮನವಿ ಮಾಡಬೇಕಿತ್ತು. ಅದು ಬಿಟ್ಟು ಮಾಧ್ಯಮಗಳ ಮುಂದೆ ಏನೇನೋ ಹೇಳಿಕೊಂಡು ರಾಜ್ಯದಲ್ಲಿ ಪ್ರತಿಭಟನೆ ಮಾಡಿದರೆ ಹೇಗೆ? ಯಾವ ಆಧಾರದಲ್ಲಿ ಗ್ಯಾರಂಟಿ ಘೋಷಣೆ ಮಾಡಿದಿರಿ? ಹಿಂದೆಯೂ ನೀವು ಕೇಂದ್ರದ ಅಕ್ಕಿಯ ಜತೆ ಎರಡು ಕೆಜಿ ಕೊಟ್ಟು ನಿಮ್ಮ ಫೋಟೊ ಹಾಕಿಕೊಂಡು ನೀವು ಪ್ರಚಾರ ತಗೊಂಡ್ರಿ. ಈಗ ಪುನಃ ಹತ್ತು ಕೆಜಿ ಕೊಡ್ತಿನಿ ಅಂತಾ ಹೇಳಿದ್ದಿರಿ ಕೊಡ್ರಿ… ಇದರಲ್ಲಿ ಕೇಂದ್ರ ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ಅಗತ್ಯವಿಲ್ಲ ಎಂದರು.
ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮನೆ ಮನೆಗೆ ಮುಖಂಡರು, ಕಾರ್ಯಕರ್ತರು ಹೋಗಿ ಫಲಾನುಭವಿಗಳಿಗೆ ದೊರಕದ ಯೋಜನೆ ಫಲ ದೊರಕುವಂತೆ ಮಾಡಲಿದ್ದಾರೆ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶಾಸಕ ಬಸವರಾಜ ಮತ್ತಿಮಡು, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮುಖಂಡರಾದ ಶರಣಪ್ಪ ತಳವಾರ, ರಾಘವೇಂದ್ರ ಕುಲಕರ್ಣಿ ಕೋಗನೂರ ಮತ್ತಿತರರು ಇದ್ದರು.