ಅಂಜನಾದ್ರಿಗೆ ರಾಜ್ಯಪಾಲ ಗೆಹ್ಲೋಟ್‌ ಭೇಟಿ-ಪೂಜೆ

0
20

ಕೊಪ್ಪಳ: ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತಕ್ಕೆ ಇಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭೇಟಿ ನೀಡಿದರು.
ನಿನ್ನೆ ಹಂಪಿ ಕನ್ನಡ ವಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲರು ಇಂದು ಬೆಳಗ್ಗೆ 7.40ಕ್ಕೆ ಅಂಜನಾದ್ರಿಗೆ ಭೇಟಿ ನೀಡಿದರು. ಅಂಜನಾದ್ರಿ ಬೆಟ್ಟ ಏರಲು ಸಾಧ್ಯವಾಗದ ಕಾರಣ ಜಿಲ್ಲಾ ಆಡಳಿತ ಅಂಜನಾದ್ರಿ ಬೆಟ್ಟದ ಕೆಳಗಡೆ ಪೂಜೆಗೆ ವ್ಯವಸ್ಥೆ ಮಾಡಿತ್ತು. ಮೊದಲು ಪೂರ್ಣ ಕುಂಭದ ಮೂಲಕ ಅರ್ಚಕರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು. ಬಳಿಕ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯಪಾಲರ ಆಗಮನದ ಮುನ್ನ ಹೈಡ್ರಾಮಾ: ರಾಜ್ಯಪಾಲರು ಅಂಜನಾದ್ರಿ ಭೇಟಿ 7.40ಕ್ಕೆ ನಿಗದಿಯಾಗಿತ್ತು. ಇದಕ್ಕೂ ಅರ್ಧಗಂಟೆ ಪೂರ್ವದಲ್ಲಿ ಈ ಮುಂಚೆ ಅಂಜನಾದ್ರಿಯ ಪ್ರಧಾನ ಅರ್ಚಕರಾಗಿದ್ದ ವಿದ್ಯಾದಾಸ್ ಬಾಬಾ ಹಾಗೂ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ನಡುವೆ ಹೈಡ್ರಾಮಾ ನಡೆಯಿತು. ವಿದ್ಯಾದಾಸ್ ಬಾಬಾ ಗೆ ಜಿಲ್ಲಾ ಆಡಳಿತ ಅಂಜನಾದ್ರಿಯಲ್ಲಿನ ಆಂಜನೇಯನಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂಜೆ ಮಾಡಲು ಅವಕಾಶ ನೀಡಿದೆ. ಇದನ್ನೇ ಇಟ್ಟುಕೊಂಡು ವಿದ್ಯಾದಾಸ್ ಬಾಬಾ ರಾಜ್ಯಪಾಲರು ಪೂಜೆ ಸಲ್ಲಿಸುವ ಕೆಳ ಭಾಗಕ್ಕೆ ಬಂದು ನಾನು ಪೂಜೆ ಮಾಡುತ್ತೇನೆಂದು ಹೇಳಿದ್ದಾನೆ. ಆದರೆ ಇದಕ್ಕೆ ಜಿಲ್ಲಾ ಆಡಳಿತ ಒಪ್ಪಿಲ್ಲ. ಹೀಗಾಗಿ ವಿದ್ಯಾದಾಸ್ ಬಾಬಾ ಗಲಾಟೆ ಮಾಡಲು ಆರಂಭ ಮಾಡಿದ. ಈ ವೇಳೆ ಪೊಲೀಸರು ವಿದ್ಯಾದಾಸ್ ಬಾಬಾನನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ ಕೊನೆ ಗಳಿಗೆಯಲ್ಲಿ ವಿದ್ಯಾದಾಸ್ ಬಾಬಾ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿದ್ದರಿಂದ ಪ್ರಕರಣ ಸುಖಾಂತ್ಯವಾಯಿತು.
ಈ ಹಿಂದಿನ ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಸಹ ಅಂಜನಾದ್ರಿಗೆ ಭೇಟಿ ನೀಡಿದ್ದರು. ಇದೀಗ ಪ್ರಸ್ತುತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹ ಭೇಟಿ ನೀಡಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಪೂಜೆಯ ಬಳಿಕ ರಾಜ್ಯಪಾಲರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಆಂಜನೇಯನ ಫೋಟೋ ನೀಡಿ ಗೌರವಿಸಿದರು. ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ಮೂಲಕ ರಾಜ್ಯಪಾಲರ ಅಂಜನಾದ್ರಿ ಭೇಟಿಯನ್ನು ಯಶಸ್ವಿಗೊಳಿಸಿದೆ.

Previous articleಹಣ ವಸೂಲಿ-ಕ್ಯಾಮೆರಾ ಕಂಡು ದಿಕ್ಕೆಟ್ಟು ಓಡಿದ ಆರ್‌ಟಿಒ ಸಿಬ್ಬಂದಿ
Next articleಜನವರಿ ಮೊದಲನೇ ವಾರದಲ್ಲಿ ಮೇಯರ್‌ ಚುನಾವಣೆ?