ʻನನ್ನ ಮೈತ್ರಿʼ ಯೋಜನೆಗೆ ಚಾಲನೆ

0
7

ಮಂಗಳೂರು: ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ನಗರದ ನೆಹರು ಮೈದಾನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ದ. ಕ. ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಅಕ್ಟೋಬರ್ ತಿಂಗಳಿನಿಂದ ರಾಜ್ಯದ ೪೦ ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ನಡೆಸಲಾಗುವುದು. ೨೦೧೩ರಲ್ಲಿ ಸಿದ್ಧರಾಮಯ್ಯ ಸರಕಾರ ಜಾರಿಗೆ ತಂದಿದ್ದ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದು, ಅದನ್ನು ಮುಂದುವರಿಸಲಾಗುವುದು ಎಂದರು.
ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ೧೦ರಿಂದ ೧೭ ವರ್ಷ ವಯಸ್ಸಿನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು. ಪದವಿ ತರಗತಿಗಳ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ ಆರಂಭಿಕವಾಗಿ ದ.ಕ. ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು ೧೫೦೦೦ (ದ.ಕ. ಜಿಲ್ಲೆಯಲ್ಲಿ ೧೧೦೦೦ ಹಾಗೂ ಚಾಮರಾಜನಗರದ ೪ ಸಾವಿರ)ವಿದ್ಯಾರ್ಥಿನಿಯರಿಗೆ ವಿತರಿಸಲಾಗುತ್ತಿದ್ದು, ಈ
ಪ್ರಾಯೋಗಿಕ ವಿತರಣೆಯ ಬಳಿಕ ಇದನ್ನು ರಾಜ್ಯದೆಲ್ಲೆಡೆ ಉಚಿತವಾಗಿ ವಿತರಿಸಲಾಗುವುದು ಎಂದರು.
ಪ್ರತೀ ವಿದ್ಯಾರ್ಥಿನಿಯೂ ಯೋಜನೆಯ ರಾಯಭಾರಿ: ಯೋಜನೆಯ ರಾಯಭಾರಿ ಸಿನಿಮಾ ನಟಿ ಸಪ್ತಮಿ ಗೌಡ, “ಶುಚಿ ನನ್ನ ಮೈತ್ರಿ‘ ಯೋಜನೆಯ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಋತುಚಕ್ರದ ಕಾರಣಕ್ಕೆ ಹೆಣ್ಣುಮಕ್ಕಳು ಚಟುವಟಿಕೆಯಿಂದ ಹಿಂದೆ ಸರಿಯುವುದನ್ನು ತಡೆಯಲು ಮುಟ್ಟಿನ ಕಪ್ ಸಹಕಾರಿ. ನನ್ನ ವೈಯಕ್ತಿಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ’‘ ಎಂದರು.
‘ನಾನು ಹದಿಹರೆಯದಲ್ಲಿದ್ದಾಗ ಮುಟ್ಟಿನ ಕಪ್ ಬಳಕೆ ಇರಲಿಲ್ಲ. ಆಗ ಬಳಸುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿತ್ತು. ಬಳಸಿದ ಪ್ಯಾಡ್‌ಗಳನ್ನು ಪೇಪರ್‌ನಲ್ಲಿ ಸುತ್ತಿ, ಪ್ರತ್ಯೇಕವಾಗಿ ಎತ್ತಿಟ್ಟು, ಬಿಸಾಡುವುದು ಮುಜುಗರದ ವಿಷಯವಾಗಿತ್ತು. ಆದರೆ ಮುಟ್ಟಿನ ಕಪ್ ಈ ಎಲ್ಲ ಮುಜುಗರಗಳಿಂದ ಮುಕ್ತಿ ನೀಡಲಿದೆ’ ಎಂದರು.
‘ಒಬ್ಬ ಮಹಿಳೆ ಎಲ್ಲ ಋತುಚಕ್ರಗಳನ್ನು ಪೂರೈಸುವಾಗ ಸುಮಾರು ೨೦೦ ಕೆ.ಜಿ.ಗಳಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬೇಕಾಗುತ್ತದೆ. ಇದರಿಂದ ಎಷ್ಟೊಂದು ತ್ಯಾಜ್ಯ ಉತ್ಪತ್ತಿಯಾಗುತ್ತದೆ ನೀವೇ ಊಹಿಸಿ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಮುಟ್ಟಿನ ಕಪ್ ಬಳಕೆ ಸೂಕ್ತ. ಇದರ ಬಳಕೆಯೂ ಸರಳ. ಶುಚಿತ್ವ ಕಾಪಾಡುವುದಕ್ಕೂ ಇದು ಸಹಕಾರಿ. ಕಪ್ ಬಳಸಿದರೆ, ಬಟ್ಟೆಯಲ್ಲಿ ಮುಟ್ಟಿನ ದ್ರವದಿಂದ ಉಂಟಾಗುವ ಕಲೆಗಳ ಬಗ್ಗೆ, ರಕ್ತ ಒಸರುವಿಕೆಯ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇವುಗಳ ನಿರ್ವಹಣೆಯೂ ಸುಲಭ. ಈ ಕಾರಣಕ್ಕಾಗಿಯೇ ದೇಶದ ಹಾಗೂ ಜಗತ್ತಿನ ಮಹಿಳೆಯರು ಮುಟ್ಟಿನ ಕಪ್ ಬಳಕೆಗೆ ಒಲವು ತೋರಿಸುತ್ತಿದ್ದಾರೆ’ ಎಂದರು.
‘ಮದುವೆಯಾಗದ ಹೆಣ್ಣುಮಕ್ಕಳು ಇದನ್ನು ಬಳಸಬಹುದೇ ಎಂಬ ಚಿಂತೆ ಅನೇಕ ತಾಯಂದಿರನ್ನು ಕಾಡುತ್ತಿದೆ. ನನ್ನ ತಾಯಿಗೂ ಇಂತಹದೇ ಚಿಂತೆ ಇತ್ತು. ಇದರ ಮಹತ್ವದ ಬಗ್ಗೆ ಮೊದಲು ತಾಯಂದಿರಲ್ಲಿ ಅರಿವು ಮೂಡಿಸಬೇಕು. ಇದನ್ನು ಬಳಸುವ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಈ ಯೋಜನೆಯ ರಾಯಭಾರಿಗಳಾಗಬೇಕು. ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ ಇತರರೂ ಬಳಸುವಂತೆ ಪ್ರೇರೇಪಿಸಬೇಕು’ ಎಂದರು.
ಸ್ಪೀಕರ್ ಯು. ಟಿ. ಖಾದರ್, ಮೇಯರ್ ಸುಧೀರ್ ಶೆಟ್ಟಿ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ.ಎಂ. ಇಂದುಮತಿ, ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ್ ಜಿ.ಎನ್., ಉಪ ನಿರ್ದೇಶಕರಾದ ಡಾ. ವೀಣಾ ವಿ.,ವಿಭಾಗೀಯ ಸಹಾ ನಿರ್ದೇಶಕರಾದ ಡಾ. ರಾಜೇಶ್ವರಿ ದೇವಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಉಪಸ್ಥಿತರಿದ್ದರು.

Previous articleಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ
Next articleಖಾಸಗಿ ಸಾರಿಗೆ ಬಂದ: ಬಿಎಂಟಿಸಿ ಬಸ್​ನಲ್ಲಿ ಅನಿಲ್ ಕುಂಬ್ಳೆ ಪಯಾಣ