ದ್ವೇಷ ರಾಜಕಾರಣ ಇಡೀ ದೇಶವನ್ನು ಆವರಿಸುತ್ತಿದೆ

0
6

ಬೆಂಗಳೂರು: ಬೆಲೆ ಏರಿಕೆಯಿಂದ ಬಡವರು-ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿ ಪಕ್ಷದ ದ್ವೇಷ ರಾಜಕಾರಣ ಇಡಿ ದೇಶವನ್ನು ಆವರಿಸುತ್ತಿದೆ. ದ್ವೇಷ ಅಳಿಸಿ ಪ್ರೀತಿಯ ಭಾರತವನ್ನು ಪುನರ್ ನಿರ್ಮಿಸಲು “ಉತ್ತಮ‌ ಭಾರತದ ಅಡಿಪಾಯ” ಸಮಾವೇಶ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ನಿರುದ್ಯೋಗ, ಬಡತನ ಹೆಚ್ಚಾಗುವಾಗಲೇ ದೇಶದಲ್ಲಿ ದ್ವೇಷವನ್ನು ಹರಡುವ ಪಿತೂರಿ ರಾಜಕಾರಣ ನಡೆಯುತ್ತಿದೆ. ನೆಹರೂ ಅವರ ಕಾಲದಿಂದ ಭಾರತಕ್ಕೆ ಹಾಕಲಾಗಿರುವ ಮಾನವೀಯತೆ, ಜಾತ್ಯತೀತತೆ, ವೈಜ್ಞಾನಿಕ‌ ಪ್ರಗತಿ ಮತ್ತು ಅಭಿವೃದ್ಧಿಯ ಅಡಿಪಾಯವನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಸಮಾವೇಶ ನಮ್ಮ ಭಾರತವನ್ನು ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ಮತ್ತೆ ಎತ್ತಿ ನಿಲ್ಲಿಸಲು ನೆರವಾಗುತ್ತದೆ. ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಇದ್ದ ಭಾರತವನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಬಿಜೆಪಿ-ಆರ್‌ಎಸ್ಎಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ.

ಈ ದೇಶದ ರೈತರು, ಕಾರ್ಮಿಕರು, ಶ್ರಮಿಕರ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡದ ಬಿಜೆಪಿ ಪರಿವಾರ ಈ ರೈತ-ಕಾರ್ಮಿಕ-ಶ್ರಮಿಕರ ಮಕ್ಕಳು, ವಿದ್ಯಾರ್ಥಿಗಳನ್ನೇ ದ್ವೇಷದ ಕುಲುಮೆಗೆ ತಳ್ಳಿ ದೇಶವನ್ನು ಮತ್ತೆ ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಈ ದೇಶದ ಯುವಕರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಬದ್ಧವಾಗಿದೆ. ಕಾರ್ಮಿಕರು, ಮಹಿಳೆಯರು, ದಲಿತ, ಶೂದ್ರರು, ಹಿಂದುಳಿದವರು ಹೀಗೆ ಎಲ್ಲಾ ಜಾತಿಯ ಬಡವರ ಬದುಕನ್ನು ಉನ್ನತೀಕರಿಸುವ ಮತ್ತು ಈ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಅಭಿಯಾನವನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ ಬಂದಿದೆ. ಸಾಮಾಜಿಕ ನ್ಯಾಯದ ಪರಂಪರೆಯನ್ನು ಮುನ್ನಡೆಸುವ ರಥವೆಂದರೆ ಅದು ಕಾಂಗ್ರೆಸ್ ಪಕ್ಷ.  ಬಿಜೆಪಿ ಪರಿವಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ. ಕೇವಲ 9 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿ ದೇಶದ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ್ದಾರೆ. ಕಳೆದ 75 ವರ್ಷಗಳಿಂದ ಇದ್ದ ದೇಶದ ಸಾಲ 53 ಲಕ್ಷ ಕೋಟಿ ಮಾತ್ರ. ಈ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ ಕುಖ್ಯಾತಿ ಪ್ರಧಾನಿ ಮೋದಿ ಮತ್ತು ಬಿಜೆಪಿ-ಆರ್ ಎಸ್ ಎಸ್ ಪರಿವಾರದ್ದು. ಆದಿಕವಿ ಪಂಪ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೇಳಿದ್ದರು. ಇಂಥಾ ಮಾನವೀಯತೆ, ವೈವಿಧ್ಯತೆ ಮತ್ತು ಏಕತೆಯನ್ನು ವಿಶ್ವಕ್ಕೆ ಸಾರಿದ ನೆಲ ನಮ್ಮದು. ನಮ್ಮ ಸಂವಿಧಾನ ಕೂಡ ಇದೇ ಮೌಲ್ಯವನ್ನು ಎತ್ತಿ ಹಿಡಿದಿದೆ. ಈ ನೆಲದಲ್ಲಿ ನಡೆಯುತ್ತಿರುವ “ಉತ್ತಮ ಭಾರತದ ಬುನಾದಿ” ಯುವ ಸಮಾವೇಶ ಇಡೀ ದೇಶದಲ್ಲಿ ಪ್ರತಿಧ್ವನಿಸಲಿದೆ ಎಂದಿದ್ದಾರೆ.

Previous articleಬೀದರ್ ಜಿಲ್ಲೆಯಲ್ಲಿ ರೆಡ್ ಅಲರ್ಟ್
Next article2019ರಲ್ಲಿಯೇ ʻಭವಿಷ್ಯʼ ನುಡಿದಿದ್ದ ಮೋದಿ!