ಸೋಮವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಎಚ್.ಆರ್. ಶ್ರೀಶ ಅವರ ಅಂಕಣ ಬರಹ
ಇತ್ತೀಚೆಗೆ ಮೋದಿ ಚೀನಾಗೆ ಹೋಗಿ ಸ್ನೇಹ ಬೆಳೆಸಿಬಂದಿದ್ದಾರೆ. ವ್ಯಾಪಾರ ಸಂಬಂಧ ಬೆಳೆಯಲಿದೆ. ಚೀನಾದಲ್ಲಿ ಸೋಲಾರ್ ಫಲಕ ಅತಿ ಕಡಿಮೆ ದರದಲ್ಲಿ ತಯಾರಾಗುತ್ತಿದೆ. ಅದು ಏನಾದರೂ ನಮ್ಮ ದೇಶಕ್ಕೆ ಬಂದಲ್ಲಿ ನಮ್ಮ ಸೋಲಾರ್ ಉದ್ಯಮ ಮುಳುಗಿ ಹೋಗುತ್ತದೆ. ನಮ್ಮ ಉತ್ಪಾದನಾ ವೆಚ್ಚವನ್ನು ಅವರಿಗೆ ಹೋಲಿಸುವಂತೆ ಇಲ್ಲ. ನಮ್ಮಲ್ಲಿ ಹೊರಗಿನಿಂದ ಬರುವ ವಸ್ತುಗಳ ಮೇಲೆ ಆಂಟಿ ಡಂಪಿಂಗ್ ತೆರಿಗೆ ಶೇ. 40 ರಷ್ಟು ಇರುವುದರಿಂದ ಯಾವುದೇ ವಸ್ತುಬಂದರೂ ಅದು ದುಬಾರಿಯಾಗಲಿದೆ. ನಮಗಿಂತ ಹೆಚ್ಚು ಉತ್ಪಾದನಾ ಸಾಮರ್ಥ್ಯ ಚೀನಾ ಹೊಂದಿದೆ. ಅಕ್ರಮವಾಗಿ ನುಸುಳಿ ಬಂದರೂ ನಮ್ಮ ಮಾರುಕಟ್ಟೆ ಕುಸಿಯುವುದಂತೂ ಖಂಡಿತ. ಹಿಂದೆ ರೇಷ್ಮೆ ಕಳ್ಳತನದಲ್ಲೇ ಭಾರತಕ್ಕೆ ಬಂದು ನಮ್ಮ ರೇಷ್ಮೆ ನೆಲಕಚ್ಚಲು ಕಾರಣವಾಯಿತು. ಮೇಕ್ ಇನ್ ಇಂಡಿಯ ಘೋಷಣೆ ಇರುವುದರಿಂದ ತಡೆಗೋಡೆ ಇದೆ. ಈ ವಿಷಯದಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಅಷ್ಟು ಕಷ್ಟಕರವಾಗಿರಲಿಲ್ಲ. ಅಲ್ಲಿಯ ವಸ್ತುಗಳ ಬೆಲೆ ಅಧಿಕವಾಗಿರುವುದರಿಂದ ಇಲ್ಲಿಯ ಮಾರುಕಟ್ಟೆಗೆ ಬರುವುದು ಕಷ್ಟ. ಚೀನಾ ವಸ್ತುಗಳ ಬೆಲೆ ನಮಗಿಂತ ಕಡಿಮೆ. ಅಲ್ಲದೆ ಅವರು ಹೆಚ್ಚು ಉತ್ಪಾದನೆ ಮಾಡುತ್ತಾರೆ. ಹೀಗಾಗಿ ವ್ಯಾಪಾರ ಸಂಬಂಧ ಬೆಳೆಸುವಾಗ ಎಚ್ಚರವಹಿಸುವುದು ಅಗತ್ಯ.
ಈಗ ನಮ್ಮಲ್ಲೇ ಸೋಲಾರ್ ಉತ್ಪಾದನೆ ಅಧಿಕಗೊಂಡಿದೆ. ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿನ 600 ಮೆಗಾವ್ಯಾಟ್ ಸೋಲಾರ್ ಉತ್ಪಾದನೆ ಅಧಿಕಗೊಂಡಿದೆ. ಹಗಲು ಹೆಚ್ಚು ಸೋಲಾರ್ ಲಭಿಸುತ್ತಿದ್ದು ಅದನ್ನು ಬಳಸುವುದೇ ಕಷ್ಟದ ಕೆಲಸವಾಗಿದೆ. ಸಂಜೆ 6 ನಂತರ ಸೋಲಾರ್ ಉತ್ಪಾದನೆ ನಿಂತುಹೋಗುವುದರಿಂದ ಗ್ರಿಡ್ ನಿರ್ವಹಣೆ ಕಷ್ಟವಾಗುತ್ತಿದೆ. ಈಗ ಎಲ್ಲರೂ ಅನಿವಾರ್ಯವಾಗಿ ಬ್ಯಾಟರಿ ದಾಸ್ತಾನು ವ್ಯವಸ್ಥೆಗೆ ಪರಿವರ್ತನೆಗೊಳ್ಳುವುದು ಅನಿವಾರ್ಯವಾಗಿದೆ. 1 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ ಬ್ಯಾಟರಿಯಲ್ಲಿ ದಾಸ್ತಾನು ಮಾಡಬೇಕೆಂದರೆ 8.5 ಕೋಟಿ ರೂ. ಬೇಕು. ಸೋಲಾರ್ ಉತ್ಪಾದನೆ ಮಾಡಿ ನೇರವಾಗಿ ಬಳಸಬೇಕು ಎಂದರೆ ಕೈಗಾರಿಕೆ ಹಗಲು ಮಾತ್ರ ಕೆಲಸ ಮಾಡಬೇಕು. ರಾತ್ರಿ ಕೂಡ ಉತ್ಪಾದನೆಯಲ್ಲಿ ತೊಡಗಬೇಕು ಎಂದರೆ ಬ್ಯಾಟರಿ ದಾಸ್ತಾನು ವ್ಯವಸ್ಥೆ ಅಗಲೇಬೇಕು. ಈಗ ಜಿಎಸ್‌ಟಿ ದರವನ್ನು ಸೋಲಾರ್‌ಗೆ ಇಳಿಸಲಾಗಿದೆ. ಕಲ್ಲಿದ್ದಲು ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಶೇ. 13.8 ಇದ್ದ ಜಿಎಸ್‌ಟಿ ತೆರಿಗೆ ಈಗ ಶೇ.8.9 ಆಗಿದೆ.
100 ಕೋಟಿ ರೂ. ಬಂಡವಾಳ ಹೂಡಿದರೆ 5 ಕೋಟಿ ರೂ ತೆರಿಗೆ ಉಳಿತಾಯವಾಗುತ್ತದೆ. 2030ಕ್ಕೆ 500 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಪಡೆಯುವ ಗುರಿ ಹೊಂದಲಾಗಿದೆ. ಲೀಥಿಯಂ ಬ್ಯಾಟರಿ ಮೇಲೆ ಶೇ.18 ಲೀಥಿಯಂ ಅಲ್ಲದ ಬ್ಯಾಟರಿ ಮೇಲೂ ಶೇ.18 ತೆರಿಗೆ ವಿಧಿಸಲಾಗಿದೆ. ನಮ್ಮ ಉತ್ಪಾದನೆಗೂ ಚೀನಾ ಉತ್ಪಾದನೆಗೂ ಹೋಲಿಸಿದರೆ ಸೋಲಾರ್ ಫಲಕ ಪ್ರತಿ ವ್ಯಾಟ್‌ಗೆ 14 ರಿಂದ 73 ರೂ ವರೆಗೆ ಕಡಿಮೆ ಆಗುತ್ತದೆ. ನಮ್ಮಲ್ಲಿ ಸೋಲಾರ್ ಬಳಕೆಗೆ ಸಹಾಯಧನ ನೀಡಲಾಗುತ್ತಿದೆ. ಪ್ರತಿ 1 ರಿಂದ 5 ಕೆವಿ ವರೆಗೆ 25 ಸಾವಿರದಿಂದ 1.25 ಲಕ್ಷ ರೂ. ವರೆಗೆ ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ಏನನ್ನೂ ಕೊಡುತ್ತಿಲ್ಲ. ಚೀನಾದ ಸೋಲಾರ್ ಫಲಕ ಪ್ರತಿ ವ್ಯಾಟ್‌ಗೆ 22-36 ರೂ. ಆಗಲಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಚೀನಾದೊಂದಿಗೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದೆ.
ಮರುಭೂಮಿ ವಿದ್ಯುತ್: ಈಗ ಮರಳುಗಾಡಿನಿಂದಲೂ ಸೋಲಾರ್ ವಿದ್ಯುತ್ ಪಡೆಯುವ ಕೆಲಸ ನಡೆಯುತ್ತಿದೆ. ರಾಜಾಸ್ತಾನದ ಮರಳುಗಾಡಿನಲ್ಲಿ ಈ ಪ್ರಯೋಗ ಫಲಕಾರಿಯಾಗಿದೆ. ಇಲ್ಲಿ ಸೋಲಾರ್ ವಿದ್ಯುತ್ ಪಡೆಯುವುದು ಸುಲಭ. ಅದರೆ ಅದನ್ನು ಬೇರೆ ಕಡೆಗೆ ರವಾನಿಸುವುದು ಕಷ್ಟದ ಕೆಲಸ. ಗುಜರಾತ್‌ನಲ್ಲೂ ಈಗ ಮರುಳುಗಾಡನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿದೆ. ಅತಿ ಕಡಿಮೆ ದರದಲ್ಲಿ ಸೋಲಾರ್ ವಿದ್ಯುತ್ ಪಡೆಯಬಹುದು. ಸಹಾರಾ ಮರುಭೂಮಿ ಇಡೀ ಜಗತ್ತಿಗೆ ಅತಿ ದೊಡ್ಡ ಸೋಲಾರ್ ವಿದ್ಯುತ್ ಘಟಕ ಹೊಂದ ಬಹುದು. ಅಲ್ಲಿ ಉತ್ಪಾದಿಸಿದ ವಿದ್ಯುತ್ ಹಲವು ದೇಶಗಳಿಗೆ ಕಡಿಮೆ ದರದಲ್ಲಿ ನೀಡಬಹುದು. ಕೆಲವು ಕಡೆ ರಾತ್ರಿ ವೇಳೆಯೂ ಮರಳುಗಾಡಿನಿಂದ ಸೋಲಾರ್ ವಿದ್ಯುತ್ ಪಡೆಯುವ ಪ್ರಯೋಗಗಳು ನಡೆಯುತ್ತಿವೆ. ಅತಿ ಕಡಿಮೆ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಲಭಿಸುವುದಂತೂ ಖಂಡಿತ.
ಕರ್ನಾಟಕದಲ್ಲಿ ಈಗ ಪಾವಗಡದ ಮಾದರಿಯಲ್ಲಿ ಬೀದರ್ ಜಿಲ್ಲೆ ಔರಾದ್‌ದಲ್ಲಿ 500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಫಲಕ ಅಳವಡಿಸುವ ಕೆಲಸ ನಡೆದಿದೆ. ಔರಾದ್ ತಾಲೂಕು ಕಪ್ಪಿಕೇರಿಯಲ್ಲಿ 3 ಮೆ.ವ್ಯಾಟ್ ಸೋಲಾರ್ ಫಲಕ ತಲೆಎತ್ತಿದೆ. ಅಲ್ಲಿ ಬಿಸಲು ಹೆಚ್ಚಿರುವುದಲ್ಲದೆ ಬಂಜರು ಭೂಮಿ ಸಾಕಷ್ಟಿದೆ. ಅದರ ಬಳಕೆ ಈಗ ಸಾಧ್ಯವಾಗಲಿದೆ. ಮಳೆ ಕಡಿಮೆ ಇರುವ ಪ್ರದೇಶವಾಗಿರುವುದರಿಂದ ಕೃಷಿಗಿಂತ ಸೋಲಾರ್ ಉತ್ಪಾದನೆ ರೈತರಿಗೆ ಲಾಭದಾಯಕ ಉದ್ದಿಮೆ ಆಗಲಿದೆ. ಕರ್ನಾಟಕ- ಮಹಾರಾಷ್ಟç ಗಡಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಯಾವುದೂ ಇಲ್ಲ. ನೀರಾವರಿ ಬಹಳ ಕಡಿಮೆ. ಸೋಲಾರ್ ಉದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳ. ಬೀದರ್ ಜಿಲ್ಲೆಯಲ್ಲಿ ಕೈಗಾರಿಕೆಗಳೂ ತಲೆ ಎತ್ತಿರುವುದರಿಂದ ಅಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಅಧಿಕಗೊಂಡರೂ ಸಮಸ್ಯೆ ಏನೂ ಬರುವುದಿಲ್ಲ. ಹೈದರಾಬಾದ್ ಸಮೀಪ ಇರುವುದರಿಂದ ಸಣ್ಣ ಸಣ್ಣ ಕೈಗಾರಿಕೆಗಳಿಗೆ ಹೆದ್ದಾರಿ ಇಕ್ಕೆಲಗಳಲ್ಲಿ ಉತ್ತಮ ಅವಕಾಶ ಇದೆ. ಸೋಲಾರ್ ವಿದ್ಯುತ್ ಅಧಿಕಗೊಂಡರೂ ಅದರ ಬಳಕೆಗೆ ದೂರದ ವಿದ್ಯುತ್ ಮಾರ್ಗ ನಿರ್ಮಿಸುವ ಸಂದರ್ಭ ಒದಗಿ ಬರುವುದಿಲ್ಲ.
ಮುಂದಿನ ದಿನಗಳಲ್ಲಿ ಬೀದರ್ ಅತ್ಯಂತ ಶ್ರೀಮಂತ ಜಿಲ್ಲೆ ಅಗಲಿದೆ. ರೈಲು, ರಸ್ತೆ, ವಿಮಾನ ಸಂಪರ್ಕ ಇರುವುದರಿಂದ ಕೈಗಾರಿಕೆ ಅಭಿವೃದ್ಧಿಗೊಳ್ಳುವುದರಲ್ಲಿ ಸಂದೇಹವಿಲ್ಲ. ಶೈಕ್ಷಣಿಕವಾಗಿ ಬೀದರ್ ಹಿಂದುಳಿದ ಜಿಲ್ಲೆಯಾದರೂ ಈಗ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಮೀಪದ ಹೈದರಾಬಾದ್ ಮತ್ತು ಸೋಲಾಪುರ ಮಾನವ ಸಂಪನ್ಮೂಲದ ಕೊರತೆ ಬರಲಾಗದಂತೆ ನೋಡಿಕೊಳ್ಳಬಹುದು. ಭಾಷೆ ಇಲ್ಲಿ ಸಮಸ್ಯೆ ಇಲ್ಲ. ಇಲ್ಲಿಯ ಜನರಿಗೆ ಕನ್ನಡ, ಹಿಂದಿ,ಮರಾಠಿ, ಉರ್ದು ಭಾಷೆಗಳ ಮೂಲಕ ವ್ಯಾಪಾರ ಮಾಡುವುದು ಗೊತ್ತಿದೆ. ವಿದೇಶಿ ಬಂಡವಾಳ ಹರಿದು ಬರುವುದರಲ್ಲಿ ಕರ್ನಾಟಕದ ಮೊದಲ ಸ್ಥಾನದಲ್ಲಿರುವುದರಿಂದ ಸೋಲಾರ್ ಉದ್ಯಮಕ್ಕೆ ಬೇಕಾದ ಬಂಡವಾಳ ಸಾಕಷ್ಟು ಲಭಿಸುವುದರಲ್ಲಿ ಸಂದೇಹವಿಲ್ಲ. ಕರ್ನಾಟಕದ ಉದ್ಯಮಿಗಳು ಈಗಾಗಲೇ ಚೀನಾದೊಂದಿಗೆ ನೇರ ವ್ಯಾಪಾರ ಮಾಡಲು ಆರಂಭಿಸಿದ್ದಾರೆ. ಚೀನಾದವರಿಗೆ ಇಂಗ್ಲಿಷ್ ಬಾರದೇ ಇದ್ದರೂ ಈಗ ಯುವ ಚೀನೀಯರು ಇಂಗ್ಲಿಷ್ ಬಳಕೆಯನ್ನು ಹೆಚ್ಚಿಸಿದ್ದಾರೆ.
ಚೀನಾದಲ್ಲಿರುವ ರಸ್ತೆ, ರೈಲು ಮತ್ತು ವಿಮಾನ ಸವಲತ್ತು ನಮ್ಮಲ್ಲಿ ಇಲ್ಲ ಎಂಬುದು ದೊಡ್ಡ ಕೊರತೆ ಎಂಬುದಂತೂ ನಿಜ. ಅಲ್ಲದೆ ಅವರು ಅತ್ಯಂತ ಶಿಸ್ತಿನ ವ್ಯಕ್ತಿಗಳು. ಅವರು ಇಂದಿನ ಕೆಲಸವನ್ನು ಇಂದೇ ಮಾಡಬೇಕೆಂದು ಪಣ ತೊಡುತ್ತಾರೆ. ಅಲ್ಲದೆ ವ್ಯಾಪಾರದಲ್ಲಿ ನಿಷ್ಣಾತರು. ಅವರಿಂದ ಭಾರತೀಯರು ಕಲಿಯಬೇಕಾದದ್ದು ಬಹಳ ಇದೆ. ನಮ್ಮ ಜಾಣ್ಮೆ ಅವರ ಪರಿಶ್ರಮ ಒಟ್ಟಿಗೆ ಸೇರಿದರೆ ಬೇರೆ ಯಾವುದೇ ದೇಶ ಪೈಪೋಟಿ ನಡೆಸುವುದು ಕಷ್ಟ. ಅದರಿಂದಲೇ ಟ್ರಂಪ್ ಮೆತ್ತಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಚೀನಾ ಮತ್ತು ಭಾರತ ಸೋಲಾರ್ ರಂಗದಲ್ಲಿ ಏಕಸ್ವಾಮ್ಯತೆ ಸಾಧಿಸುವುದರಲ್ಲಿ ಸಂದೇಹವಿಲ್ಲ. ಸೋಲಾರ್ ಅತಿ ಕಡಿಮೆ ದರದಲ್ಲಿ ಲಭಿಸುವ ಪರಿಶುದ್ಧ ವಿದ್ಯುತ್ ಜನರನ್ನು ಆಕರ್ಷಿಸುವುದರಲ್ಲಿಸಂದೇಹವಿಲ್ಲ. ಸೂರ್ಯ ನಮಗೆ ಉತ್ತಮ ಬೆಳಕು ನೀಡುವುದಲ್ಲದೆ ಹಣವನ್ನೂ ತರಲಿದ್ದಾನೆ.