ಅಂಕಣ ಬರಹ: `ರತ್ನ’ ಗರಿ ಹೊಳಪಿನಲ್ಲಿ ಎದ್ದ ಪ್ರಖರ ಪ್ರಶ್ನೆ

0
10

ಶುಕ್ರವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಕನ್ನಡ ಚಲನಚಿತ್ರ ರಂಗ ಮತ್ತು ಚಲನಚಿತ್ರ ಪ್ರೇಮಿಗಳು ಕಳೆದೊಂದು ವಾರದಿಂದ ಖುಷಿ, ಸಂಭ್ರಮದಲ್ಲಿದ್ದಾರೆ.

ಹೆಸರಾಂತ ನಟರಾಗಿದ್ದ, ನೂರಾರು ಬಿರುದು ಬಾವಲಿ, ಸಾವಿರಾರು ಸನ್ಮಾನಗಳಿಗೆ ಪಾತ್ರರಾಗಿ, ಲಕ್ಷಾಂತರ ಕನ್ನಡಿಗರ ಹೃದಯ ಗೆದ್ದಿದ್ದ ಸಾಹಸಿಂಹ ಡಾ. ವಿಷ್ಣುವರ್ಧನ ಹಾಗೂ ಅಭಿನೇತ್ರಿ ಬಿ. ಸರೋಜಾದೇವಿ ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿರುವುದು ಇದಕ್ಕೆ ಕಾರಣ.

ಕನ್ನಡ ಸಂಸ್ಕೃತಿ, ಚಲನಚಿತ್ರ ರಂಗ, ಕನ್ನಡದ ಕಲೆ – ನಾಡು – ನುಡಿಗೆ ಈರ್ವರ ಕೊಡುಗೆ ಅಪೂರ್ವವಾದದ್ದೇ, ಸರ್ಕಾರ ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಿದೆ. ಇಬ್ಬರೂ ಈ ಪ್ರಶಸ್ತಿಗೆ ಅರ್ಹರೇ. ಪ್ರಶಸ್ತಿಯ ಮೌಲ್ಯ ಇದರಿಂದ ಹೆಚ್ಚಾಗಿದೆ. ಹಿರಿಮೆ ಜಾಸ್ತಿಯಾಗಿದೆ ಎನ್ನುವುದರಲ್ಲಿ ಯಾವ ಸಂಕೋಚವೂ ಬೇಡ.

ಕರ್ನಾಟಕ ರತ್ನ ಪ್ರಶಸ್ತಿಯನ್ನು ಈವರೆಗೆ ಹನ್ನೆರಡು ಗಣ್ಯರಿಗೆ ನೀಡಿದಂತಾಗಿದೆ. ಕನ್ನಡದ ರಸಋಷಿ ಕುವೆಂಪು ಮತ್ತು ಡಾ. ರಾಜಕುಮಾರ್ ಈ ಪ್ರಶಸ್ತಿ ಪಡೆದ ಮೊದಲಿಗರು. ರಾಜ್ ಅವರಿಗೆ ಅಂದಿನ ಬಂಗಾರಪ್ಪ ಸರ್ಕಾರ ಕರ್ನಾಟಕ ರತ್ನ' ಪ್ರಶಸ್ತಿ ನೀಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದಾಗ,ಮೊದಲು ಕುವೆಂಪು ಅವರಿಗೆ ನೀಡಿ, ನಂತರ ಪರಿಶೀಲಿಸಿ’ ಎಂದು ರಾಜ್ ಸ್ಪಷ್ಟವಾಗಿ ಹೇಳಿದ್ದರು. ಹಾಗೇ ಅವರೇ ಸರ್ಕಾರದ ಪರವಾಗಿ ಕುವೆಂಪು ಅವರನ್ನು ಅಭಿನಂದಿಸಿದರೂ ಕೂಡ!

ಅಂದಹಾಗೆ ಕರ್ನಾಟಕ ರತ್ನ' ಪ್ರಶಸ್ತಿಗಳ ಘೋಷಣೆ ವೇಳೆ ಸಿದ್ದರಾಮಯ್ಯ ಸರ್ಕಾರ ಕುವೆಂಪು ಅವರಿಗೆಭಾರತ ರತ್ನ’ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ, ಇವರ ಸಮಕಾಲೀನ ಮತ್ತು ಸಮಸಾಮರ್ಥ್ಯದ ವರಕವಿ ದ.ರಾ. ಬೇಂದ್ರೆಯವರನ್ನು ಮರೆತಿರುವುದು ಈ ಸಂದರ್ಭದಲ್ಲಿ ಕಡೆಗಣಿಸಲಾಗದ ವಿಷಯ!! ಬೇಂದ್ರೆಯವರ ಹೆಸರು ಶಿಫಾರಸು ಮಾಡಿ ಎಂದು ಹೇಳುವ `ರಾಜ’ರು ಈಗ ಎಲ್ಲಿದ್ದಾರೆ?

ಕರ್ನಾಟಕ ರತ್ನ ಪ್ರಶಸಿಯನ್ನು ಒಂದು ಇಡೀ ವರ್ತಮಾನದ ಮತ್ತು ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುವವರಿಗೆ ನೀಡಬೇಕು; ರಾಜ್ಯದ ನೆಲ – ಜಲ – ಭಾಷೆ ಮತ್ತು ಸಂಸ್ಕೃತಿಗಳ ಪ್ರತೀಕವಾಗಿರಬೇಕು. ರತ್ನದಂತೆಯೇ ಭೂಷಣಪ್ರಾಯರೆನಿಸಬೇಕು ಎಂಬುದನ್ನು ಪ್ರಶಸ್ತಿ ನೀಡಲು ನಿರ್ಧರಿಸಿದಾಗ ತೀರ್ಮಾನಿಸಲಾಗಿತ್ತು. ವಿವಾದರಹಿತರಾದವರಿಗೆ ಕೊಡಬೇಕು ಹಾಗೂ ನಮ್ಮೆಲ್ಲರ ಕಣ್ಣೆದುರಿಗೆ ಇರುವವರಿಗೆ ಮಾತ್ರ ಈ ಪ್ರಶಸ್ತಿಯನ್ನು ದಯಪಾಲಿಸುವ ಸಂಕಲ್ಪವಾಗಿತ್ತು.

ಇದರಿಂದ ಈಗಿನ ಪೀಳಿಗೆಯವರಿಗೆ ಒಂದಿಷ್ಟು ಪ್ರೇರಣೆ, ಅವರ ಬದುಕಿನ ಮಹತ್ವ ಅರ್ಥವಾಗುತ್ತದೆ. ಕಣ್ಣೆದುರಿನ ಸಾಧಕರೊಬ್ಬರ ಬದುಕು ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಎಂಬುದು ಈ ಪ್ರಶಸ್ತಿಯ ಘನವಾದ ತತ್ವವಾಗಿತ್ತು.

ಮೂವತ್ಮೂರು ವರ್ಷಗಳ ಅವಧಿಯಲ್ಲಿ, ವಿಷ್ಣುವರ್ಧನ, ಬಿ.ಸರೋಜಾದೇವಿ ಸೇರಿದಂತೆ ಕೇವಲ ಹನ್ನೆರಡು ಮಂದಿಗೆ ಸರ್ಕಾರ ಈ ಪ್ರಶಸ್ತಿಯನ್ನು ನೀಡಿದಂತಾಯಿತು. ನಮ್ಮೆದುರಿಗೆ ಇದ್ದವರಿಗೇ ನೀಡುತ್ತಿದ್ದ ಪ್ರಶಸ್ತಿಯ ನೀತಿಯನ್ನು ಬಸವರಾಜ ಬೊಮ್ಮಾಯಿ ಬದಲಾಯಿಸಿ, ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಿ ಕರ್ನಾಟಕ ರತ್ನವನ್ನು ಪ್ರದಾನ ಮಾಡಿದರು.

ಈ ಪ್ರಶಸ್ತಿ ಆಯ್ಕೆಗೆ ಪ್ರತ್ಯೇಕ ಸಮಿತಿ ರಚಿಸಿ, ಅದರ ಶಿಫಾರಸನ್ನು ಸಂಪುಟದ ಮುಂದೆ ಮಂಡಿಸಿ ಅಂಗೀಕರಿಸುವ ಸಂಪ್ರದಾಯವಿತ್ತು. ಬೊಮ್ಮಾಯಿಯವರು ಪುನೀತ್ ಅಕಾಲಿಕ ನಿಧನದ ನಂತರ ಭಾವಾವೇಶಕ್ಕೆ ಒಳಗಾಗಿ ಮತ್ತು ಅಭಿಮಾನಿಗಳ ಮನಸ್ಸು ನೋಯಿಸಲಾಗದೇ, ನಿಯಮ ಬದಲಿಸಿ ಮರಣೋತ್ತರವಾಗಿ `ಕರ್ನಾಟಕ ರತ್ನ’ ಘೋಷಿಸಿದರು.

ಈಗ ಅದೇ ಮಾರ್ಗವನ್ನು ಸಿದ್ದರಾಮಯ್ಯ ಸರ್ಕಾರ ಕೂಡ ಚಲನಚಿತ್ರ ರಂಗದ ಗಣ್ಯರ ಕೋರಿಕೆ, ಅಭಿಮಾನಿಗಳ ಒತ್ತಡದ ಹಿನ್ನೆಲೆಯಲ್ಲಿ ವಿಷ್ಣುವರ್ಧನ ಮತ್ತು ಸರೋಜಾದೇವಿಯವರನ್ನು ಆಯ್ಕೆ ಮಾಡಿದೆ. ಮರಣೋತ್ತರವಾಗಿ ಪ್ರಶಸ್ತಿ ಘೋಷಿಸುವುದರಿಂದ ಅವರ ಜೀವಿತಾವಧಿಯ ಕೊಡುಗೆ ಗಮನಿಸಿದರೂ, ಚಲನಚಿತ್ರ ರಂಗದಂತಹ ಅಭಿಮಾನಿಗಳು, ಜನಪ್ರಿಯತೆ, ಆಕರ್ಷಣೆ ಪ್ರಧಾನ ಪಾತ್ರ ವಹಿಸುತ್ತವೆ ಎನ್ನುವುದು ನಿಸ್ಸಂಶಯ.

ಪ್ರಶಸ್ತಿ ಘೋಷಣೆಯ ನಂತರ ಹಲವು ಪ್ರಶ್ನೆಗಳು ಕೂಡ ಎದ್ದಿವೆ. ಕಲೆ ಮತ್ತು ಸಂಸ್ಕೃತಿಯ ಹಿನ್ನೆಲೆ ನೋಡಿದರೆ, ಉಳಿದ ಕಲಾ ಪ್ರಕಾರಗಳಿಗಿಂತ ಕೇವಲ ಸಿನೆಮಾ ಕ್ಷೇತ್ರವನ್ನು ಮಾತ್ರ ಪರಿಗಣಿಸಿದ್ದೇಕೆ? ಎನ್ನುವ ಪ್ರಶ್ನೆ ಮೂಡುತ್ತದೆ. ಸಿನೆಮಾ ಕ್ಷೇತ್ರದ ನಾಲ್ವರಿಗೆ ಪ್ರಶಸ್ತಿ ನೀಡಿರುವುದಕ್ಕಿಂತಲೂ, ಉಳಿದ ಕ್ಷೇತ್ರಗಳ ಪ್ರಮುಖರನ್ನೂ ಪರಿಗಣಿಸಬಹುದಿತ್ತಲ್ಲ ಎನ್ನುವ ಪ್ರಶ್ನೆಯೂ ಮೂಡಿದೆ.

ಇದು ಒಂದಾದರೆ ಮರಣೋತ್ತರ ಪ್ರಶಸ್ತಿಗಳ ಸಂಪ್ರದಾಯವನ್ನು ಆರಂಭಿಸಿದ ನಂತರ ಇನ್ನೂ ಹಲವರು ಈ ನಾಡಿಗಾಗಿ, ಭಾಷೆಗಾಗಿ, ಸಮಾಜಕ್ಕಾಗಿ ದುಡಿದವರು ಇದ್ದರಲ್ಲ, ಅವರನ್ನೇಕೆ ಪರಿಗಣಿಸಿಲ್ಲ ಎಂಬ ಪ್ರಶ್ನೆ ಕೂಡ ಸಹಜವಾಗಿ ಎದ್ದಿದೆ. ಹಾಗೆಯೇ ರಾಜ್ಯ ಸರ್ಕಾರದ ಪ್ರಶಸ್ತಿಗಳೆಲ್ಲ ಕೇವಲ ಬೆಂಗಳೂರು ಮತ್ತು ಸುತ್ತಮುತ್ತಲಿನವರಿಗಷ್ಟೆಯೇ ಅಥವಾ ಆಳುವ ಪ್ರಭುಗಳ ಸನಿಹದಲ್ಲಿ ಇದ್ದವರಿಗಷ್ಟೆಯೇ ಎನ್ನುವ ಅನುಮಾನ ಎದ್ದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ನಾಡಿಗಾಗಿ ಕೆಲಸ ಮಾಡಿದವರನ್ನು ಏಕೆ ಪರಿಗಣಿಸಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸುವುದು ಸಹಜ.

ಇಡೀ ಹನ್ನೆರಡು ಪ್ರಶಸ್ತಿ ಪುರಸ್ಕೃತರಲ್ಲಿ ಕೇವಲ ಭೀಮಸೇಜ ಜೋಶಿ ಮಾತ್ರ ಉತ್ತರ ಕರ್ನಾಟಕದವರು. ವೀರೇಂದ್ರ ಹೆಗ್ಗಡೆ ಕರಾವಳಿಯವರು. ಬಿಟ್ಟರೆ ಉಳಿದೆಲ್ಲರೂ ಕೂಡ ರಾಜಧಾನಿ ಸುತ್ತಮುತ್ತಲಿನವರೇ. ಪ್ರಶಸ್ತಿಗೆ ಪ್ರಾದೇಶಿಕತೆ ಮುಖ್ಯವಲ್ಲ ಎಂಬುದು ನಿಜವಾದರೂ ಸಾಧಕರು ಆ ಪ್ರದೇಶದಲ್ಲಿಯೂ ಗಮನಾರ್ಹವಾಗಿ ದುಡಿದವರಿದ್ದಾರಲ್ಲ, ಅವರಿಗೇಕಿಲ್ಲ ಈ ಗೌರವ ಎನ್ನುವ ಅಸಮಾಧಾನ ಇರುವುದು ಸಹಜ.

ಮರಣೋತ್ತರ ಪ್ರಶಸ್ತಿಯನ್ನೇ ಕೊಡುವುದಾಗಿದ್ದರೆ ಕನ್ನಡ ಜನಮಾನಸದ ಕವಿ ದ.ರಾ. ಬೇಂದ್ರೆ, ಮನುಕುಲದ ಭವಿಷ್ಯತ್ತಿಗಾಗಿ ಬರೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ, ಖ್ಯಾತ ಸಂಗೀತ ವಿದುಷಿ ಡಾ. ಗಂಗೂಬಾಯಿ ಹಾನಗಲ್, ಶೈಕ್ಷಣಿಕ ಕ್ಷೇತ್ರಕ್ಕೆ ಫಲಾಪೇಕ್ಷೆ ಇಲ್ಲದೇ ದುಡಿದ ಚಟುಕು ಬ್ರಹ್ಮ ದಿನಕರ ದೇಸಾಯಿ, ವಿಷ್ಣುವರ್ಧನರನ್ನು ಕಟೆದು ಕಲಾವಿದನನ್ನಾಗಿಸಿದ ಪುಟ್ಟಣ್ಣ ಕಣಗಾಲ್, ಕಲ್ಯಾಣ ಕರ್ನಾಟಕದಲ್ಲಿ ಮಹಿಳಾ ಸಾಕ್ಷರತೆ ಮತ್ತು ಸಬಲೀಕರಣಕ್ಕೆ ಪಣತೊಟ್ಟು ಕೆಲಸ ಮಾಡಿದ್ದ ಡಾ. ಶರಣ ಬಸವಪ್ಪ ಅಪ್ಪ (ಇತ್ತೀಚೆಗಷ್ಟೇ ತೀರಿಕೊಂಡರು), ಬದುಕಿನುದ್ದಕ್ಕೂ ಸರಳ ಸಂತನಾಗಿ ಬದುಕಿದ ಜ್ಞಾನದಾಸೋಹಿ ಸಿದ್ದೇಶ್ವರ ಶ್ರೀಗಳು, ಕೆಂಗಲ್ ಹನುಂತಯ್ಯನವರು, ರಾಜಕೀಯ ಕ್ಷೇತ್ರಕ್ಕೆ ಹೊಸ ಪರಿವರ್ತನೆ ನೀಡಿದ ದೇವರಾಜ ಅರಸು, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಕನ್ನಡದ ಪ್ರಪ್ರಥಮ ವಚನ ಪಿತಾಮಹರು ಎಲ್ಲರೂ ಇದ್ದಾರೆ. ಇರ‍್ಯಾರೂ ಪರಿಗಣನೆಗೆ ಬಂದಿಲ್ಲವಲ್ಲ ಎನ್ನುವ ಪ್ರಶ್ನೆ ಈಗ ಎದ್ದಿದೆ. ಹಾಗಂತ ಪ್ರಶಸ್ತಿ ಪಡೆದವರ ಬಗ್ಗೆ ಅಸಮಾಧಾನ ಅಥವಾ ಅಪಸ್ವರ ಎಂದಲ್ಲ. ಆದರೆ ಈ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಜನ ಕೈ ತೋರಿಸುವುದು ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳತ್ತ, ಹಾಗೆಯೇ ಸಂಘ ಸಂಸ್ಥೆಗಳತ್ತ…

ತಮ್ಮ ಭಾಗದ ಪ್ರೇರಕರಿಗೆ ಪ್ರಶಸ್ತಿಗಳನ್ನು ಕೊಡಿಸುವ ಕುರಿತು ಇವರು ಯಾವ ಇಚ್ಛಾಶಕ್ತಿಯನ್ನೂ ತೋರುತ್ತಿಲ್ಲ. ಪ್ರಶಸ್ತಿ ಘೋಷಣೆ ನಂತರ ಹಾರ ತುರಾಯಿ ಹಿಡಿದುಕೊಂಡು ಬರುವವರು ತಮ್ಮ ಭಾಗದ ಪ್ರತಿಭೆಗಳಿಗೆ, ಪ್ರೇರಕರಿಗೆ ಮನಸಾರೆ ಪ್ರೋತ್ಸಾಹಿಸುವ ಗುಣ ಪ್ರತಿನಿಧಿಗಳಿಗೆ ಇಲ್ಲದಿರುವುದು ಈ ಅಸಡ್ಡೆಗೆ ಕಾರಣ…

ಕುವೆಂಪು ಅವರ ಹೆಸರಿನ ಜೊತೆ, ಅವರ ಸಮಕಾಲೀನ, ಅಂದಿನ ಜನಪ್ರಿಯ ಮತ್ತು ಜನಮಾನಸದ ಕವಿ ದ.ರಾ. ಬೇಂದ್ರೆಯವರ ಹೆಸರನ್ನೂ ಭಾರತ ರತ್ನಕ್ಕೆ ಶಿಫಾರಸು ಮಾಡಬಹುದಿತ್ತಲ್ಲ? ಸಂಪುಟ ಸಭೆಯಲ್ಲಿ ಈ ಭಾಗದ ಸಚಿವರು ಇದನ್ನು ಪ್ರಸ್ತಾವನೆಯನ್ನೂ ಕೂಡ ಮಾಡಿದಂತಿಲ್ಲ… ಬಹುಶಃ ಬೇಂದ್ರೆ ಈಗಿನ ರಾಜಕಾರಣಿಗಳಿಗೆ, ಸಚಿವರುಗಳಿಗೆ, ಜಾತಿ ರಾಜಕಾರಣಕ್ಕೆ ಅಪ್ರಸ್ತುತರಾಗಿದ್ದಾರೇನೋ ಏನೋ? ಬೇಂದ್ರೆಯವರಿಗೆ ಮತಬ್ಯಾಂಕಿಲ್ಲ. ಇದ್ದ `ನಾಕು ತಂತಿ..’ ಹರಿದಂತೆ ಕಂಡಿರಬೇಕು! ಹಾಗೇ ಉತ್ತರ ಕರ್ನಾಟಕದ ಪ್ರಶಸ್ತಿಗೆ ಅರ್ಹತೆ ಪಡೆದವರ ಹಿಂದೆಯೂ ಮತಬ್ಯಾಂಕ್ ಇಲ್ಲ. ಪ್ರಶಸ್ತಿ ಪಡೆದವರ ಹಿಂದಿನ ಮತ ಲೆಕ್ಕಾಚಾರ ಆರಂಭಿಸಿದರೆ ಪ್ರಶಸ್ತಿಯ ಮೌಲ್ಯ ಅಗ್ಗವಾಗುತ್ತದೆ ಅಲ್ಲವೇ?

ಹೀಗಾಗಿ ಸರ್ಕಾರದ ಗುರಿ ಮತ್ತು ಲೆಕ್ಕಾಚಾರ ಆ ನಿಟ್ಟಿನಲ್ಲಾದರೇ, ತಾಳ ತಪ್ಪಿದ, ಕುರುಡು ಕುದುರೆಯ, ಹರಿದ ನಾಕು ತಂತಿ'ಯ ನಾದದಂತೆ ಬೇಂದ್ರೆಯವರಂತಹ ಅರ್ಹರುಮೂಕಬಲಿ’ಗಳಾಗುತ್ತಾರಲ್ಲವೇ?

Previous articleಉಡಾನ್ ಯೋಜನೆಯಡಿ ಅನುದಾನ: ಕರ್ನಾಟಕದ 7 ಕಡೆ ಜಲವಿಮಾನ ನಿಲ್ದಾಣ
Next articleಬಾಗಲಕೋಟೆ: ಹಿರಿಯ ಪತ್ರಕರ್ತ ಬಿ. ಬಾಬು ಹೃದಯಾಘಾತದಿಂದ ನಿಧನ

LEAVE A REPLY

Please enter your comment!
Please enter your name here