ಅಂಕಣ ಬರಹ: ಅಕ್ಕ ಕೇಳವ್ವ ಈ ಅಬಲೆಯರ ಕೂಗನ್ನು

0
12

ಶುಕ್ರವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಯಾದಗಿರಿ ಜಿಲ್ಲೆ ಶಹಾಪುರ ಜಿಲ್ಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು.

ಅರೇ…! ಮಗು ಗರ್ಭ ಧರಿಸಿ ಒಂಬತ್ತು ತಿಂಗಳಾದರೂ ವಸತಿ ಶಾಲೆಯ ಅಧ್ಯಾಪಕರು ಅಥವಾ ಇತರ ಸಿಬ್ಬಂದಿಗೆ ಗೊತ್ತೇ ಆಗಲಿಲ್ಲವೇ? ಅದೂ ಶೌಚಾಲಯದಲ್ಲಿ ಅಸುರಕ್ಷಿತವಾಗಿ ಹೆರಿಗೆ ಆಗಬೇಕಾಯಿತೇ?

ಈ ಘಟನೆ ನಡೆದು ಎರಡು ದಿನಗಳಲ್ಲೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸರ್ಕಾರಿ ವಸತಿ ಶಾಲೆಯಲ್ಲೂ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಯಿತು!!

ಇಂತಹ ಘಟನೆಗಳಿಂದ ಹೆಣ್ಣು ಮಕ್ಕಳ ಸಬಲೀಕರಣ, `ಬೇಟಿ ಬಚಾವೋ, ಬೇಟಿ ಪಡಾವೋ’, ಪೋಕ್ಸೋ, ನಿರ್ಭಯಾ ಕಾನೂನು ಎಲ್ಲವೂ ಹುಸಿನಗೆ, ಅಪಹಾಸ್ಯದಂತೆ ಕಾಣುತ್ತಿವೆಯಲ್ಲವೇ?

ನಿಜ. ಸರ್ಕಾರಿ ಹಾಸ್ಟೆಲ್‌ಗಳು, ಸರ್ಕಾರಿ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳ ಅಥವಾ ಮಕ್ಕಳ ಪಾಲಿಗೆ ಎಷ್ಟು ಸುರಕ್ಷಿತ ಎನ್ನುವ ಆತಂಕ ಈ ಘಟನೆಗಳಿಂದ ಸಹಜವಾಗಿಯೇ ಉಂಟಾಗುತ್ತಿದೆ.

ಬಾಲ್ಯ ವಿವಾಹ ನಿಷೇಧ, ಅಪ್ರಾಪ್ತ ವಯಸ್ಸಿನ ಬಾಲಕಿಯರ ಸುರಕ್ಷತೆ ಮತ್ತು ಭವಿಷ್ಯ ಎಲ್ಲವೂ ಕೂಡ ಈಗ ಪ್ರಶ್ನಾರ್ಹವೇ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಸಂಸ್ಥೆ ಇತ್ತೀಚೆಗೆ ಹದಿನೆಂಟು ವರ್ಷಕ್ಕೂ ಪೂರ್ವದ ಬಾಲಕಿಯರು ಗರ್ಭ ಧರಿಸಿರುವ ಮತ್ತು ಅವರ ಜೀವಕ್ಕೆ ಇರುವ ಆತಂಕ, ಹುಟ್ಟಿದ ಮಕ್ಕಳ ಆರೋಗ್ಯ ಇತ್ಯಾದಿಗಳ ಕುರಿತು ಅಂಕಿಸಂಖ್ಯೆ ಬಿಡುಗಡೆ ಮಾಡಿದೆ.

2023ರಿಂದ 2025 ಜುಲೈವರೆಗೆ, ಎರಡು ವರ್ಷದ ಏಳು ತಿಂಗಳಲ್ಲಿ 14ರಿಂದ 18 ವರ್ಷದೊಳಗಿನ ವಯಸ್ಸಿನ 80,813 ಬಾಲಕಿಯರು ಗರ್ಭಿಣಿಯರಾಗಿದ್ದಾರೆ!. ಇದು ಆತಂಕಕಾರಿ ಅಷ್ಟೇ ಅಲ್ಲ. ಸಮಾಜದ ವಿವಿಧ ಸ್ಥರಗಳನ್ನು, ಸಾಮಾಜಿಕ ನೈತಿಕ ಸುರಕ್ಷೆಯನ್ನು ಕೆದಕಿದೆ. ಹಾಗೆಯೇ ಈ ನಾಡಿನಲ್ಲಿ ಕ್ರೂರತೆ ಇಷ್ಟೆಲ್ಲ ವಿಜೃಂಭಿಸಿದೆಯೇ? ಮಾನವೀಯತೆ, ಮನುಷ್ಯತ್ವ ಸತ್ತು ಹೋಯಿತೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಈ ಮಧ್ಯೆ ರಾಜ್ಯದಲ್ಲಿ 2024-25ರ ಸಾಲಿನಲ್ಲಿಯೇ 700ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ಸುಮಾರು 3049 ಬಾಲ್ಯ ವಿವಾಹಗಳ ದೂರು ದಾಖಲಾಗಿ 2349 ಬಾಲ್ಯ ವಿವಾಹಗಳನ್ನು ತಪ್ಪಿಸಲಾಗಿದೆ ಎಂದು ಇತ್ತೀಚೆಗಷ್ಟೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವಿಧಾನಸಭೆಗೆ ತಿಳಿಸಿದ್ದಾರೆ. ದುರಂತವೆಂದರೆ ಈ ಸಚಿವೆಯ ತವರು ಜಿಲ್ಲೆ ಬೆಳಗಾವಿಯಲ್ಲಿಯೇ ಕಳೆದೊಂದು ವರ್ಷದಲ್ಲಿ 78 ಬಾಲ್ಯ ವಿವಾಹಗಳು ನಡೆದಿವೆ. ಸಿಎಂ ತವರು ಜಿಲ್ಲೆಯಲ್ಲಿ 60 ಬಾಲ್ಯ ವಿವಾಹಗಳು ಆಗಿವೆ. ಸಮಾಜ ಕಲ್ಯಾಣ ಸಚಿವರ ಜಿಲ್ಲೆಯಲ್ಲಿ 24 ಬಾಲ್ಯ ವಿವಾಹಗಳು ನಡೆದರೆ, ಶಿವಮೊಗ್ಗ ಜಿಲ್ಲೆಯಲ್ಲಿ (ರಾಜ್ಯದಲ್ಲೇ ಅತೀ ಹೆಚ್ಚು) 79 ಬಾಲ್ಯ ವಿವಾಹಗಳು ಆಗಿವೆ.

ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಅಧ್ಯಕ್ಷನೊಬ್ಬ ಹದಿನೇಳು ವರ್ಷದ ಬಾಲಕಿಯನ್ನು ವಿವಾಹವಾಗಿ ಈಗ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ತಮ್ಮ ಊರಿನ ಸುರಕ್ಷೆ, ಕಾನೂನು ಪರಿಪಾಲನೆ ಜವಾಬ್ದಾರಿ ಹೊತ್ತವರೇ ಹೀಗೆ ಬಾಲ್ಯವಿವಾಹವಾದರೆ ಗತಿ ಏನು?

ಇಡೀ ರಾಜ್ಯದಲ್ಲಿ 3489 ಪೋಕ್ಸೋ ಪ್ರಕರಣಗಳು (2024-25ನೇ ಸಾಲಿನಲ್ಲಿ) ದಾಖಲಾಗಿವೆ. ಈ ಪೈಕಿ 685 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಈ ಅಂಕಿಸಂಖ್ಯೆಗಳನ್ನು ಗಮನಿಸಿ ಆತಂಕಕ್ಕೆ ಒಳಗಾಗಿದ್ದಾರೆ. ಬೆಂಗಳೂರು ನಗರದಲ್ಲಿಯೇ ಅತೀ ಹೆಚ್ಚು (343) ಪೋಕ್ಸೊ ಪ್ರಕರಣಗಳು; ಶಿವಮೊಗ್ಗದಲ್ಲಿ 231 ಪೋಕ್ಸೋ ಪ್ರಕರಣಗಳು, ಇವರಲ್ಲಿ 55 ಬಾಲಕಿಯರು ಗರ್ಭಿಣಿಯರು; ಬೆಳಗಾವಿ ಜಿಲ್ಲೆಯಲ್ಲಿ 179 ಪೋಕ್ಸೊ ಪ್ರಕರಣಗಳ ಪೈಕಿ 29 ಬಾಲಗರ್ಭಿಣಿಯರು; ಚಿಕ್ಕಬಳ್ಳಾಪುರದಲ್ಲಿ 170 ಪೋಕ್ಸೋ ಪ್ರಕರಣಗಳ ಪೈಕಿ 32 ಗರ್ಭವತಿಯರು!

ದುರಂತ ನೋಡಿ. ಸಾಕ್ಷರತೆ ಎಲ್ಲಿ ಹೆಚ್ಚಿದೆಯೋ, ಎಲ್ಲಿ ಪ್ರಜ್ಞಾವಂತರಿದ್ದಾರೆಂದು ನಾವು ಭಾವಿಸಿದ್ದೇವೋ, ವಿಧಾನಸೌಧದ ಪಕ್ಕದ ಜಿಲ್ಲೆಯಲ್ಲಿಯೇ ಬಾಲ್ಯ ವಿವಾಹ, ಬಾಲಗರ್ಭಿಣಿಯರು, ಪೋಕ್ಸೊ ಪ್ರಕರಣಗಳು ಹೆಚ್ಚಾಗಿವೆ!!

ಯಾದಗಿರಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಶೌಚಾಲಯದಲ್ಲಿ ಮಗು ಹೆತ್ತು ಬಂದಾಗ ಅಧಿಕಾರಿಗಳು ಎಚ್ಚರವಾದದ್ದು ಮಗುವಿನ ಅಳು ಕೇಳಿ. ಆದಾಗ್ಯೂ ಮಕ್ಕಳ ಸುರಕ್ಷತಾ ದಳಕ್ಕಾಗಲೀ, ಮಕ್ಕಳ ಹಕ್ಕುಗಳ ಸಂರಕ್ಷಣೆ ಕೇಂದ್ರಕ್ಕಾಗಲೀ, ಪೊಲೀಸರಿಗಾಗಲೀ ಮಾಹಿತಿ ನೀಡಲಿಲ್ಲ. ಎಂತಹ ದುರಂತ ನೋಡಿ. ಸ್ವತಃ ಅಧಿಕಾರಿಗಳಿಗೂ ಕಾನೂನಿನ ಭಯವಿಲ್ಲ.

ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರುಗಳೇ ಕಡಿಮೆ ವಯಸ್ಸಿನ ಬಾಲಕಿಯ ಜನ್ಮದಾಖಲೆಯನ್ನು ತಿದ್ದಿ ಬಾಲಗರ್ಭಿಣಿಯಲ್ಲ ಎನ್ನುವ ಪ್ರಮಾಣ ಪತ್ರ ನೀಡಿರುವ ದಾಖಲೆ ಬಹಿರಂಗವಾಗಿದೆ. ಈಗ ವೈದ್ಯರೂ ಸೇರಿ 7 ಮಂದಿಯ ಮೇಲೆ ಮೊಕದ್ದಮೆ ದಾಖಲಾಗಿದೆ.

ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿ ಸಮಸ್ಯೆಗೆ ಕಾರಣಗಳು ಹಲವು. ಬಡತನ, ಕಾರ್ಮಿಕರ ಮಕ್ಕಳಿಗೆ ಇಲ್ಲದ ಸುರಕ್ಷತೆ, ಮನೆಯಲ್ಲಿಯೇ ಮಕ್ಕಳನ್ನು ಬಿಟ್ಟು ಪಾಲಕರು ಕೆಲಸಕ್ಕೆ ಹೋಗುವುದು, ಇವೆಲ್ಲವುಗಳ ಜೊತೆ ಈಗ ಹಲವು ಕ್ರೂರ ಸಮಾಜ ಘಾತಕ ಶಕ್ತಿಗಳನ್ನು ಕೂಡ ಒಂದು ರಾಕೆಟ್ ರೀತಿಯಲ್ಲಿ ಕೈಜೋಡಿಸಿರುವುದು ಇತ್ಯಾದಿಗಳು ಇದಕ್ಕೆ ಕಾರಣವಾಗುತ್ತಿವೆ.

ಅಕ್ಷರಸ್ಥರೇ ಬಾಲ ಗರ್ಭಿಣಿಯರಾಗುತ್ತಿರುವುದು ಸಾಮಾಜಿಕ ಜಾಲತಾಣದಿಂದ ಆಗಿರುವ ದೊಡ್ಡ ದುರಂತ. ಪ್ರೇಮ ಮೋಹದ ಮಾತು, ಮೋಡಿ, ಮಾನಸಿಕ ಅಭಿಷ್ಟೆಗಳಿಗೆ ಒಳಗಾಗಿ ಈ ದುರಂತಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿರುವುದು ಪ್ರಮುಖವಾದರೆ, ಬಾಲಕಿರ ಮತ್ತು ಮಹಿಳೆಯರ ಕಿಡ್ನ್ಯಾಪ್, ವೇಶ್ಯಾವಾಟಿಕೆಗೆ ತಳ್ಳುವ ದಂಧೆ, ಅಬಾರ್ಷನ್ ರಾಕೆಟ್‌ಗಳೆಲ್ಲವೂ ಈ ಅನಿಷ್ಟಕ್ಕೆ ಜೊತೆಗೂಡಿವೆ.

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಅಕ್ಕ, ಪ್ರತಿ ಜಿಲ್ಲೆಯಲ್ಲಿ ಅಕ್ಕ ಪಡೆ ರಚಿಸಿ, ಬಾಲಕಿರು ಮತ್ತು ಪೋಷಕರಿಗೆ ಅರಿವು ಮೂಡಿಸುವುದು, ಬಾಲ್ಯ ವಿವಾಹವನ್ನು ತಡೆಯುವುದು ಹಾಗೂ ಕಾನೂನು ಬಿಗಿಗೊಳಿಸುವ ಭರವಸೆಯನ್ನು ನೀಡಿದರು. ಅಕ್ಕಳ ಜಿಲ್ಲೆಯಲ್ಲಿಯೇ `ಅಕ್ಕ ದಳ’ಆರಂಭವೇನೋ ಆಯಿತು. ಅಕ್ಕ ದಳ ರಚನೆಯ ನಂತರವೇ ಅಲ್ಲವೇ, ಪಂಚಾಯ್ತಿ ಅಧ್ಯಕ್ಷನೇ ಅಪ್ರಾಪ್ತಳನ್ನು ವಿವಾಹವಾದದ್ದು!?

ಲಕ್ಷ್ಮೀ ಹೆಬ್ಬಾಳಕರ ಅವರು, ಬಾಲ್ಯ ವಿವಾಹ ನಿಷೇಧ ವಿಧೇಯಕಕ್ಕೆ `ಅಪ್ರಾಪ್ತರ ನಿಶ್ಚಿತಾರ್ಥವೂ ಅಪರಾಧ’ ಎಂಬ ತಿದ್ದುಪಡಿ ತಂದು ಅಂಗೀಕಾರವನ್ನೇನೋ ಪಡೆದರು. ಇದು ಸ್ವಾಗತಾರ್ಹ ತಿದ್ದುಪಡಿ. ಆದರೆ ಅನುಷ್ಠಾನ ಹೇಗೆ?

ನಿಶ್ಚಿತಾರ್ಥ ಎಂದರೆ ನೋಂದಣಿ ಅಥವಾ ಆಧಾರ ಯಾವುದೂ ಇರಲ್ಲ. ಕೇವಲ ಗಂಡು ಹೆಣ್ಣಿನ ಕುಟುಂಬದ ನಡುವೆ ಮತುಕತೆ ಮತ್ತು ಹೊಂದಾಣಿಕೆ ಒಪ್ಪಂದ ಅಷ್ಟೇ. ಇತ್ತೀಚಿನ ದಿನಗಳಲ್ಲಿ ಮದುವೆಗಿಂತ ಸಾಕಷ್ಟು ಮೊದಲು ನಡೆವ ಹಲವುದ್ದೂರಿ ನಿಶ್ಚಿತಾರ್ಥಗಳು ಸುದ್ದಿಯಾಗುತ್ತವೆ ಎಂಬುದೇನೋ ಹೌದು. ಆದರೆ ಇಂಥವು ಮೇಲ್ವರ್ಗದ ಮತ್ತು ಶ್ರೀಮಂತರ ಕುಟುಂಬಗಳ ಸಂಗತಿ ಮಾತ್ರ. 24 ಗಂಟೆಗಳಲ್ಲೇ ನಿಶ್ಚಿತಾರ್ಥ, ಮದುವೆ, ಶೋಭನ ಎಲ್ಲವನ್ನೂ ಮುಗಿಸುವ ಬಡ ಮಂದಿಗೆ ಬಾಲ್ಯ ವಿವಾಹದ ಕುರಿತ ಜಾಗೃತಿ ಎಲ್ಲಿದೆ? ಇದನ್ನು ನಿಯಂತ್ರಿಸುವ ಸರ್ಕಾರಿ ಜಾಲ ನಮ್ಮಲ್ಲಿ ಎಲ್ಲಿದೆ?

ದುರಂತವೆಂದರೆ ಕರ್ನಾಟಕದಲ್ಲೊಂದೇ 80 ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ದಾಖಲೆ ಅಧಿಕೃತವಾಗಿ ದೊರಕಿದೆ. ಯಾರಿಗೆ ಈ ನಾಡಲ್ಲಿ ಸುರಕ್ಷತೆ ಇದೆ? ಯಾವ ಕಾನೂನು ಅನುಷ್ಠಾನಗೊಂಡಿದೆ? ಅನುಷ್ಠಾನ ಮಾಡದವರ ಮೇಲೆ ಏನು ಕ್ರಮ? ವಸತಿ ಶಾಲೆಯಲ್ಲೇ ಮಕ್ಕಳು ಲೈಂಗಿಕ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದರೆ ಎಲ್ಲಿದೆ ಸುರಕ್ಷೆ? ಹೆಸರಿಗಷ್ಟೇ ಕಾಯ್ದೆ. ಜ್ವಲಂತ ಈ ಬಾಲ್ಯ ವಿವಾಹ- ಬಾಲ ಗರ್ಭಿಣಿ ಸಮಸ್ಯೆ..! ಅಕ್ಕ ಕೇಳವ್ವ ಈ ಅಬಲೆಯರ ಕೂಗನ್ನು !!

Previous articleಸಂಪಾದಕೀಯ: ನೇಪಾಳಕ್ಕೆ ಈಗ ಬೇಕು ಹೊಸ ಆಡಳಿತ ವ್ಯವಸ್ಥೆ
Next articleSSLC; ಅನುತೀರ್ಣ ವಿದ್ಯಾರ್ಥಿಗಳಿಗೆ ಮರು ದಾಖಲಾತಿ, ನೀರಸ ಪ್ರತಿಕ್ರಿಯೆ

LEAVE A REPLY

Please enter your comment!
Please enter your name here