ಅಂಕಣ ಬರಹ: ಅರಣ್ಯಾಧಿಕಾರಿಗಳಿಗಿಂತ ವೀರಪ್ಪನ್ ಎಷ್ಟೋ ವಾಸಿ

0
20

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು… ಅರಣ್ಯ ಅಧಿಕಾರಿಗಳಿಗಿಂತ ಅವನೇ ಎಷ್ಟೋ ವಾಸಿ !
ರಾಜ್ಯ ಅರಣ್ಯ ಮಂತ್ರಿಗಳ ಎದುರೇ ಚಾಮರಾಜನಗರ, ಕೊಳ್ಳೇಗಾಲ ಮತ್ತು ಆಚೆ ಈಚಿನ ಪ್ರದೇಶಗಳ ಜನ ಈ ಮಾತು ಹೇಳಿದಾಗ ಅವರಿಗೂ ಆಘಾತ, ಅಚ್ಚರಿ. ಸಮರ್ಥಿಸಿಕೊಳ್ಳಲೂ ಆಗದ ಅಸಹಾಯಕತೆ.

ಜನ ಕಾರಣ ಬಿಚ್ಚಿಟ್ಟರು. ವೀರಪ್ಪನ್ ಇದ್ದಾಗ ಇಲ್ಲಿನ ಕಾಡುಗಳಲ್ಲಿ ಗಣಿಗಾರಿಕೆ ಇರಲಿಲ್ಲ. ರೆಸಾರ್ಟ್‌ಗಳಿರಲಿಲ್ಲ. ಬೇಕಾಬಿಟ್ಟಿ ಬೇಟೆ ಇರಲಿಲ್ಲ. ಸಫಾರಿ ಹೆಸರಿನಲ್ಲಿ ಸುಲಿಗೆಕೋರರು ಇರಲಿಲ್ಲ. ಮರದ ದಿಮ್ಮಿಗಳನ್ನು ಕಡಿದು ಸಾಗಿಸುವ ಕಳ್ಳರಿರಲಿಲ್ಲ.

ಅವೆಲ್ಲವೂ ಈಗ ರಾಜಾರೋಷ. ಹಾಗಾಗಿಯೇ ಈಗ ಆನೆ, ಹುಲಿ, ಚಿರತೆ, ಕಾಡೆಮ್ಮೆ ಎಲ್ಲವೂ ನಗರಗಳತ್ತ ದಾಳಿ ಇಡುತ್ತಿದ್ದರೆ; ಲಕ್ಷಲಕ್ಷ ಜೇಬು ತುಂಬಿಸುವ ಕಾರ್ಯ ಅಧಿಕಾರಿಗಳಿಂದ. ಎಷ್ಟು ಸಮೃದ್ಧವಾಗಿತ್ತು ನಮ್ಮ ಕಾಡು. ಯಾವ ಪ್ರಾಣಿಯೂ ನಮ್ಮ ಮೇಲೆ ದಾಳಿ ಮಾಡಿಲ್ಲ. ಈಗ ಇಪ್ಪತ್ತು ದಿನಗಳಲ್ಲಿ ಮೂರು ಜನ ಹುಲಿ – ಚಿರತೆ ಬಾಯಿಗೆ ಬಲಿಯಾದರು. ಆನೆಗಳ ಕಾಲ್ತುಳಿತ, ಆಸ್ತಿಪಾಸ್ತಿ ನಾಶ ನಿಯಂತ್ರಿಸಲಾಗದ ಸ್ಥಿತಿ ಬಂತು. ಕಾಡಿನಲ್ಲಿ ಇರಬೇಕಾದ ಪ್ರಾಣಿಗಳೆಲ್ಲ ಹೊಲ, ಕಬ್ಬಿನ ಗದ್ದೆ, ಕಾಫಿ – ಅಡಕೆ – ಬಾಳೆ ತೋಟಗಳಲ್ಲಿ ದಾಂಗುಡಿ ಇಡುತ್ತಿದೆ. ಸತ್ತ ಮೇಲೆ ಬಂದು ಸಾಂತ್ವನ ಪರಿಹಾರ ತಮ್ಮದಾಗಿದೆ. ಸಿಬ್ಬಂದಿ, ಅರಣ್ಯಾಧಿಕಾರಿಗಳು ನಾಲ್ಕು ದಿನ ಆಪರೇಷನ್ ಎಂದು ಕಾರ್ಯಾಚರಣೆ ನಡೆಸಿ ಮರಳಿದರೆ, ಪುನಃ ಬರುವುದು ಮತ್ತೊಂದು ಹುಲಿ ಅಥವಾ ಆನೆ ಜನರನ್ನು ಬಲಿ ಪಡೆದಾಗ!! ಇದು ಜನ ಸಚಿವರಿಗೆ ತರಾಟೆ ತೆಗೆದುಕೊಂಡ ಪರಿ.

ಅತ್ತ ವೀರಪ್ಪನ್ನನನ್ನು ಜನ ಸಚಿವರೆದುರು ಶ್ಲಾಘಿಸುತ್ತಿದ್ದರೆ, ಇತ್ತ ಅರಣ್ಯ ಇಲಾಖೆ ಸಿಬ್ಬಂದಿ- ಅಧಿಕಾರಿಗಳು, ತಮಗೆ ರಕ್ಷಣೆ ಇಲ್ಲ, ಶಸ್ತಾಸ್ತçಗಳಿಲ್ಲ, ಸೌಜನ್ಯಕ್ಕೆ ಸಾಂತ್ವನ ಹೇಳುವವರೂ ಇಲ್ಲ. ಇಲಾಖೆಯಿಂದ ಸಮರ್ಥಿಸಿಕೊಳ್ಳುವವರೂ ಇಲ್ಲ ಎಂದು ಅರಣ್ಯ ಭವನದ ಎದುರು ಇಡೀ ದಿನ ಧರಣಿ ನಡೆಸಿದರು.
ಎರಡೂ ಸಂಗತಿಗಳು ನಿಜವೇ. ವೀರಪ್ಪನ್ ಇದ್ದಾಗ ಅರಣ್ಯದತ್ತ ಕಾಲಿಡದ ಸಿಬ್ಬಂದಿ, ನಂತರ ಅಕ್ರಮಗಳಿಗೆ ತೆರೆದುಕೊಂಡಿದ್ದು ನಿಜ. ಎಲ್ಲೆಡೆ ರೆಸಾರ್ಟ್‌ಗಳು, ಮುಕ್ತ ಗಣಿಗಾರಿಕೆ ಅನಿಯಂತ್ರಿತವಾಯಿತು. ಬಂಡೀಪುರ, ಕೊಳ್ಳೇಗಾಲ, ಚಾಮರಾಜನಗರ ಸುತ್ತಮುತ್ತ ಹಾಗೂ ಪಶ್ಚಿಮ ಘಟ್ಟವನ್ನು ಬಗೆದದ್ದೇ ಬಗೆದದ್ದು. ಯಾರ ನಿಯಂತ್ರಣವೂ ಇಲ್ಲ. ಆದಾಯ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುವ ಈ ದಂಧೆಯಿಂದ ನಗರದ ಜನ ಮೋಜು ಮಸ್ತಿಗಾಗಿ ಅರಣ್ಯ ಸೇರಿದರೆ, ಅಲ್ಲಿನ ಪ್ರಾಣಿಗಳು ನಗರಕ್ಕೆ ದಾಂಗುಡಿ ಇಟ್ಟವು. ಅಷ್ಟೇ!

ವನ್ಯಜೀವಿ ಮತ್ತು ಮಾನವ ಸಂಘರ್ಷ ಕರ್ನಾಟಕದಲ್ಲಿ ಮಾತ್ರವಲ್ಲ. ಇಡೀ ದೇಶ – ಜಗತ್ತಿನಲ್ಲಿ ಇರುವಂಥದ್ದೇ. ಅಂಕಿಸಂಖ್ಯೆಗಳ ಪ್ರಕಾರ, ಕಳೆದ ಐದು ವರ್ಷದಲ್ಲಿ ಆನೆ ದಾಳಿಗೆ 2869 ಜನ ಸಾವನ್ನಪ್ಪಿದ್ದಾರೆ, ಇಡೀ ದೇಶದಲ್ಲಿ. ಒಡಿಶಾದಲ್ಲಿ 624 ಮಂದಿ ಆನೆಗೆ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಲದಲ್ಲಿ 436, ಹಾಸನದಲ್ಲಿ 383 ಹೀಗೆ. ಕರ್ನಾಟಕದಲ್ಲಿ ಇತ್ತೀಚೆಗೆ 20 ದಿನಗಳ ಅವಧಿಯಲ್ಲಿ ಮೂವರು ಹುಲಿಯ ಬಾಯಿಗೆ ಬಲಿಯಾಗಿದ್ದಾರೆ. 2020ರಿಂದ 2025ರ ಮೇ 1ರವರೆಗೆ ಹುಲಿಯ ದಾಳಿಯಿಂದ ಸಾವನ್ನಪ್ಪಿದವರು 395ಕ್ಕೂ ಹೆಚ್ಚು. ಮಹಾರಾಷ್ಟ್ರದಲ್ಲಿ ಒಂದೇ 218 ಮಂದಿ ಹುಲಿಗೆ ತುತ್ತಾಗಿದ್ದಾರೆ.

ವೀರಪ್ಪನ್ ನರಹಂತಕ. ದಂತಚೋರ. ಆದರೆ ಸಾವಿರಾರು ಹೆಕ್ಟೇರ್ ದಂಡಕಾರಣ್ಯವನ್ನು ಮೂರು ದಶಕಗಳವರೆಗೆ ಅನ್ಯರು ದುರುಪಯೋಗ ಪಡಿಸಿಕೊಳ್ಳದಂತೆ ಕಾಡಿನ ರಾಜನಾದ. ಕಾಡನ್ನು ಆಳಿದ. ಅಲ್ಲಿ ಗಣಿಗಾರಿಕೆ, ಸಾರ್ವಜನಿಕರ ಪ್ರವೇಶ ಯಾವುದಕ್ಕೂ ಆಸ್ಪದ ನೀಡಲಿಲ್ಲ. ಕಾನೂನಿನ ದೃಷ್ಟಿಯಿಂದ ಅಕ್ರಮ ಎಸಗಿದರೂ, ತನಗೆ ಅಡ್ಡಿಯಾದವರನ್ನು ಯಾವ ದಯೆ, ದಾಕ್ಷಿಣ್ಯವಿಲ್ಲದೇ ಬಲಿಪಡೆದರೂ, ಪರೋಕ್ಷವಾಗಿ ಉಳಿದದ್ದು ಕಾಡು.

ಅದೇ ಆತನ ಹತ್ಯೆಯ ನಂತರ ಈಗ ನೋಡಿ. ಆ ಪ್ರದೇಶದಲ್ಲೆಲ್ಲ ವನ್ಯಪ್ರಾಣಿಗಳಿಗಿಂತ ಜನರೇ ಹೆಚ್ಚು. ನಗರದ ಸ್ಟಾರ್ ಹೋಟೆಲ್‌ಗಳನ್ನು ನಾಚಿಸುವ ರೆಸಾರ್ಟ್‌ಗಳು, ಹೋಟೆಲ್‌ಗಳು, ಸಫಾರಿ ಎಲ್ಲವೂ. ಬಹುತೇಕ ಎಲ್ಲವೂ ಅಕ್ರಮವೇ. ಇವರ ಹಾವಳಿಯಿಂದಲೇ ರಾಜ್ಯದಲ್ಲಿ ರೆಸಾರ್ಟ್ ನೀತಿಯನ್ನು ಕೂಡ ಜಾರಿಗೆ ತರಲಾಯಿತು. ಆದಾಗ್ಯೂ ನಿಯಂತ್ರಣ ಮಾಡಲು ಆಗಲಿಲ್ಲ.

ದುರಂತ ಎಂದರೆ ವೀರಪ್ಪನ್ ಸಿನೆಮಾ ಕಥೆಯಾದ. ಕಾದಂಬರಿ ವಸ್ತವಾದ. ಹಾಗೆಯೇ ಅರಣ್ಯ ಕಳ್ಳ ಸಾಗಣೆಯೂ ಅತ್ಯಂತ ಲಾಭದಾಯಕ ಮತ್ತು ಸಾಹಸಕರ ಎನ್ನುವ ರೀತಿಯಲ್ಲಿ `ಪುಷ್ಪ’ದಂತಹ ಸಿನೆಮಾಗಳೂ ಬಂದವು. ಜನತೆಗೆ ಅರಣ್ಯ ಮತ್ತು ವನ್ಯಜೀವಿ ನಾಶವೇ ಹಿರೋಯಿಸಂ ಎನಿಸುವಂತಹ ಚಲನಚಿತ್ರಗಳು ಬಂದವು.

ನಗರದ ಬಾರು – ಬೀರು ಎಲ್ಲವೂ ಅಡವಿಯಲ್ಲಿ ಹೇರಳವಾದವು. ಮೋಜು ಮಸ್ತಿಯ ನೆಪದಲ್ಲಿ ಅರಣ್ಯದ ನಡುವೆ ವೇಶ್ಯಾವಾಟಿಕೆ ಹೆಚ್ಚಿ ಇಂಥವುಗಳ ತಾಣವಾದವು. ಹೀಗಾದಾಗ ಪ್ರಾಣಿಗಳಿಗೆ ಎಲ್ಲಿಯ ಬೆಲೆ !?

ರಾಜ್ಯ ಹಾಗೂ ಕೇಂದ್ರ ಸರ್ಕಾರ ದೇಶಾದ್ಯಂತ ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪಿಸಲು ಕೋಟ್ಯಂತರ ರೂಪಾಯಿ ಯೋಜನೆ ಘೋಷಿಸಿದವು. ಆದರೆ ಅವೆಲ್ಲ ಅರಣ್ಯಾಧಿಕಾರಿಗಳ ಜೇಬು ಸೇರಿದವು.

ಕಾಡು ಪ್ರಾಣಿಗಳು ನಗರ ಪ್ರದೇಶ ಪ್ರವೇಶಿಸದಂತೆ ಅಗಲ – ಎತ್ತರದ ಕಂದಕ ತೋಡುವುದು, ದೊಡ್ಡ ಬೇಲಿ ಹಾಕುವುದು, ಅದರಲ್ಲಿ ಕಾಲರ್ ಅಳವಡಿಸುವುದು ಇತ್ಯಾದಿ ಯೋಜನೆಗಳನ್ನು ಅರಣ್ಯ ಇಲಾಖೆ ರೂಪಿಸುತ್ತಿದೆ. ಈ ಯೋಜನೆಗಳು ಹೇಗಿವೆ ಎಂದರೆ ಗುತ್ತಿಗೆದಾರರು ಸೂಚಿಸುವ, ಅವರು ನೀಡುವ ಸಲಹೆಯ ಯಥಾವತ್ ಜಾರಿ ಅಷ್ಟೇ.

ಹಿಂದೆ ಅರಣ್ಯ ಕಟಾವು, ನಂತರ ಗಿಡನೆಡುವಿಕೆ. ಈಗ ವನ್ಯಪ್ರಾಣಿಗಳು ನಗರ ಪ್ರವೇಶಿಸದಂತೆ ಕಾಡಿನ ಸುತ್ತ ನಡೆಯುವ ಕೆಲಸಗಳಿಂದ ಕಿಸೆ ಭರ್ತಿ ಯೋಜನೆಗಳು.
ಕಾಡು ಪ್ರಾಣಿಗಳು ಏಕೆ ನಗರ ಪ್ರವೇಶಿಸುತ್ತಿವೆ ಎಂಬುದಕ್ಕೆ ದೇಶಾದ್ಯಂತ ನೂರಾರು ಅಧ್ಯಯನ ಸಮಿತಿಗಳು, ತಜ್ಞರ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಜಾರ್ಖಂಡ್, ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಎಲ್ಲೆಡೆಯೂ ಅಧ್ಯಯನಗಳು ಜರುಗಿವೆ. ಹತ್ತಾರು ಕೋಟಿಗಳು ಈ ವರದಿಗಳಿಗಾಗಿಯೇ ವಿನಿಯೋಗವಾದವೇ ವಿನಾ ಪಾಲನೆಯಾಗಲಿಲ್ಲ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಕುರಿತು ಸಭೆ ನಡೆಸಿದರು. ಕಾಡಿನಲ್ಲಿಯೇ ನೀರು – ಹುಲ್ಲು ಕೊಡಿ. ಹುಲ್ಲು ಬೆಳೆಸಿ. ಸಫಾರಿಗಳನ್ನು ಬಂದ್ ಮಾಡಿ. ಅಕ್ರಮ ಚಟುವಟಿಕೆ ನಿಲ್ಲಿಸಿ. ವನ್ಯಪ್ರಾಣಿಗಳ ಆಹಾರ ಅಲ್ಲಿಯೇ ದೊರಕುವಂತಾಗಲಿ ಎಂದೆಲ್ಲ ನಿರ್ದೇಶನ ನೀಡಿದರು. ಅದೇ ಮರುದಿನ ಅರಣ್ಯ ಅಧಿಕಾರಿಗಳು, ಬೂಟಿಲ್ಲ, ತುಕ್ಕು ಹಿಡಿದ ಬಂದುಕು. ಆದರೂ ಹೊಡೆಯುವಂತಿಲ್ಲ. ಪ್ರಬಲ ಲಾಠಿ ಇಲ್ಲ. ಯಾವ ಸಂರಕ್ಷಣೆಯೂ ಇಲ್ಲದೇ ಅರಣ್ಯಕ್ಕೆ ಹೋಗುವುದು ಹೇಗೆ? ಇಷ್ಟಾಗಿಯೂ ಅರಣ್ಯಾಧಿಕಾರಿಗಳೇ ಕಾಡು ಪ್ರಾಣಿಗಳಿಗೆ ಬಲಿಯಾದರೆ ಸಾಂತ್ವನ ಹೇಳುವವರಿಲ್ಲ. ಜನರೂ ತಮ್ಮನ್ನೇ ಖಳರನ್ನಾಗಿಸುತ್ತಾರೆ ಎಂದು ಪ್ರತಿಭಟನೆ ನಡೆಸಿದರು.

ಎರಡೂ ಮಾತುಗಳು ಸತ್ಯ. ಕರ್ನಾಟಕದ ಮತ್ತೊಂದು ದುರಂತ ಎಂದರೆ, ಅರಣ್ಯ ಸಚಿವರಾದವರೆಲ್ಲ ಬಹುತೇಕ ಅರಣ್ಯ ವಿರೋಧಿಗಳೇ ಆಗಿದ್ದರು. 1983ರ ನಂತರ ಜೀವಿಜಯ ಬಿಟ್ಟರೆ, ಅರಣ್ಯ ಖಾತೆ ನಿರ್ವಹಿಸಿದವರೆಲ್ಲ ಬಯಲು ನಾಡಿನವರೇ. ಇತ್ತೀಚೆಗೆ ನಿಧನರಾದ ಎಚ್.ವೈ. ಮೇಟಿ ಅರಣ್ಯ ಸಚಿವರಾದಾಗ ಪ್ರಥಮ ಬಾರಿಗೆ ಕಾಳಿ – ಬೇಡ್ತಿ ಕಣಿವೆಯ ಅರಣ್ಯ ಪ್ರದೇಶಕ್ಕೆ ಆಗಮಿಸಿದ್ದರು. ಕಾರಿನಿಂದ ಇಳಿಯಲೂ ಭಯಪಟ್ಟಿದ್ದರು. ಕಾಡಿನಲ್ಲಿಯ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಉಳಿಯಲೂ ಹೆದರಿದರು. ನನಗೆ ಏಕೆ ಈ ಖಾತೆ ಕೊಟ್ಟರೋ ಗೊತ್ತಿಲ್ಲ. ಮರ – ಪ್ರಾಣಿಗಳನ್ನು ನೋಡಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಮತ್ತೊಬ್ಬ ಅರಣ್ಯ ಸಚಿವರಾಗಿದ್ದ ಈ.ಟಿ ಶಂಭುನಾಥ, ಅರಣ್ಯದಂಚಿನ ಹಳ್ಳಿಗಳನ್ನೆಲ್ಲ ಸ್ಥಳಾಂತರ ಮಾಡಿಬಿಡುವ ಯೋಜನೆ ರೂಪಿಸಿದ್ದರು ! ಅರಣ್ಯಕ್ಕೆ ಬೇಸಿಗೆಯಲ್ಲಿ ಬೆಂಕಿ ಇಟ್ಟರೆ ಮಂಗನ ಕಾಯಿಲೆ ಬಾರದು ಎಂದು ಘೋಷಣೆ ಮಾಡಿದ್ದರು. ಈಗಿನ ಸಚಿವ ಈಶ್ವರ ಖಂಡ್ರೆಯವರಿಗೂ ಅಷ್ಟೇ. ಬೀದರ್ – ಕಲಬುರ್ಗಿಯನ್ನು ಹಸಿರೀಕರಣ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಅವರದ್ದು. ಆದರೆ ಅರಣ್ಯ ಇಲಾಖೆಯ ಮತ್ತು ಜನರ ನಡುವಿನ ನೂರಾರು ಸಮಸ್ಯೆಗಳು, ಬದುಕು ಬವಣೆಗಳ ಕುರಿತು ಯೋಚನೆಯಿಲ್ಲ. ಇಡೀ ದೇಶದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಕೊಳೆಯುತ್ತಿವೆ. ಅವಕ್ಕೂ ಪರಿಹಾರವಿಲ್ಲ. ವನ್ಯಪ್ರಾಣಿಗಳ ದಾಳಿಯಿಂದ ಆಗುವ ಹಾನಿಗೆ ಪರಿಹಾರ ನಿಗದಿಯಾಗುತ್ತಿದೆ. ಆದರೆ ಜನರಿಗೆ ತಲುಪುತ್ತಿಲ್ಲ.

ಜನರಿಗೆ ಅರಣ್ಯ ಸಂಪತ್ತಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಈಗ ನಡೆದಿದ್ದರೂ, ಅರಣ್ಯ ಗ್ರಾಮ ಸಂರಕ್ಷಣಾ ಯೋಜನೆ'ಗಳು ಇದ್ದರೂ ಅರಣ್ಯ ಉತ್ಪನ್ನಗಳು ಸ್ಥಳೀಯರಿಗೆ ಲಭ್ಯ ಎಂದು ಸಾರಿದ್ದರೂ ಅವೆಲ್ಲ ಕಾಗದದ ಮೇಲಿವೆ. ಹಾಗಾಗಿಯೇ ಜನ ಕೆರಳಿದ್ದು, ನಿಮ್ಮ ಅರಣ್ಯ ಇಲಾಖೆಗಿಂತ ವೀರಪ್ಪನ್ ಎಷ್ಟೋ ಪಾಲು ವಾಸಿ ಎಂದು. ಕಾಡು - ಅದರ ಉಳಿವು, ಕಾಡಿನಸಹಜ ನ್ಯಾಯ ನಿವಾಸಿ’ಗಳಾದ ವನ್ಯಜೀವಿಗಳ ರಕ್ಷಣೆ ಮತ್ತು ಇವು ನಗರ ಪ್ರವೇಶಿಸದಂತೆ ತಡೆಯುವಿಕೆಗಳ ಬಗ್ಗೆ ವಾಸ್ತವಿಕ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಈ ಜನಾಕ್ರೋಶ ನಾಂದಿ ಹಾಡೀತೇ !?

Previous articleಬಾಗಲಕೋಟೆ: ಮುಧೋಳದಲ್ಲಿ ರೈತ ಸಂಘದಿಂದ ಅಷ್ಟ ದಿಗ್ಬಂಧನ
Next articleರಾಜಘಟ್ಟದಲ್ಲಿ ಗುಮ್ಮಟಾಕಾರದ ಆಕರ್ಷಕ ಅಂಗನವಾಡಿ – ಸೃಜನಶೀಲ ಗ್ರಾಮ ಪಂಚಾಯಿತಿಯ ನೂತನ ಪ್ರಯತ್ನ

LEAVE A REPLY

Please enter your comment!
Please enter your name here