Home Advertisement
Home ಅಂಕಣ ಅಂಕಣ ಬರಹ: ಫ್ರೀಬಿಗಳಿಗೆ ಬೇಕಿನ್ನು ಮಾನದಂಡದ `ಗ್ಯಾರಂಟಿ’!

ಅಂಕಣ ಬರಹ: ಫ್ರೀಬಿಗಳಿಗೆ ಬೇಕಿನ್ನು ಮಾನದಂಡದ `ಗ್ಯಾರಂಟಿ’!

0
3

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಮಹದೇವಪ್ಪ, ಕಾಕಾ ಪಾಟೀಲ ನಿಮಗೂ ಕರೆಂಟ್ ಫ್ರೀ… ಗಿರಿಜಮ್ಮ, ಸುಲೋಚನಮ್ಮ ನಿಮಗೂ ಬಸ್ ಫ್ರೀ… ಎಲ್ಲರಿಗೂ ಹತ್ತು ಕೆಜಿ ಅಕ್ಕಿ ಫ್ರೀ… ಮನೆ ಬಾಗಿಲಿಗೆ 2 ಸಾವಿರ ರೂಪಾಯಿ ಯಜಮಾನಿಗೆ…!

ಎರಡೂ ಮುಕ್ಕಾಲು ವರ್ಷಗಳ ಹಿಂದೆ ರಾಜ್ಯದಲ್ಲಿ ಇದೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಕೂಡಿ ಘೋಷಿಸಿ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಸ್ಕೀಂಗೆ ಈಗ ವಾಸ್ತವತೆಯ ಭಯ ಕಾಡುತ್ತಿದೆ.

ಶ್ರೀಮಂತರಿಗೇಕೆ ಗ್ಯಾರಂಟಿ? ಉಳ್ಳವರು, ಅನುಕೂಲವಂತರು ಸ್ವಪ್ರೇರಣೆಯಿಂದ ಗ್ಯಾರಂಟಿ ಯೋಜನೆಯನ್ನು ಬಿಟ್ಟುಕೊಡಿ ಎಂದು ಆಡಳಿತ ಪಕ್ಷದ ಕೆಲ ಸಚಿವರು, ಕೆಲ ಶಾಸಕರುಗಳೇ ಕೋರಿಕೊಳ್ಳುತ್ತಿದ್ದಾರೆ.

ಗ್ಯಾರಂಟಿಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಸಮಸ್ಯೆಯಾಗುತ್ತಿದೆ ಎಂಬ ಭಯವನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದರೆ; ಎಲ್ಲಿದೆ ದುಡ್ಡು, ಯಾವ ಯೋಜನೆಗೂ ದುಡ್ಡಿಲ್ಲ… ಎಲ್ಲಾನೂ ಫ್ರೀ.. ಯಾರಾದ್ರೂ ಕೆಲಸ ಮಾಡ್ತಾರಾ… ಬಸ್ ತುಂಬಾ ಜನವೇ ಜನ… ಹೆಣ್ಮಕ್ಳೇ, ಹೆಣ್ಮಕ್ಳು… ಕೂತಲ್ಲೇ 2 ಸಾವಿರ ರೂಪಾಯಿ ತಿಂಗಳಾ ರ‍್ತಾವು… ಕೆಲಸಕ್ಕೆಲ್ಲಿದೆ ದುಡ್ಡು… ಇದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆಯವರ ಮಾತು!!

ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಇದರ ಜ್ಞಾನ ಇರಲಿಲ್ಲವೇ? ಇದು ಪ್ರತಿಪಕ್ಷದ ನಾಯಕ ಆರ್.ಅಶೋಕರ ಖಂಡನೆ. ಎಲ್ಲವುಗಳಿಗೆ ಅಣತಿಯಂತಿರುವುದು ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, `ನಿಯಂತ್ರಣವಿಲ್ಲದ ಉಚಿತ ಕೊಡುಗೆಗಳ ವಿತರಣೆಯಿಂದ ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯಾದೀತು. ಆದಾಯದ ಕೊರತೆ, ಹಣಕಾಸಿನ ಅವ್ಯವಸ್ಥೆಗೆ ಕಾರಣವಾದೀತು; ಬಡವರು ಮತ್ತು ಮೂಲಭೂತ ಅಗತ್ಯಗಳನ್ನು ಭರಿಸಲು ಅಸಮರ್ಥರಾದವರಿಗೆ ನೆರವು ನೀಡಿ. ಅದು ಸರ್ಕಾರದ ಕರ್ತವ್ಯ. ಆದರೆ ಉಳ್ಳವರಿಗೇಕೆ ಇಂತಹ ಸೌಲಭ್ಯಗಳು’ ಎಂದರು. ಈ ಮಾತು ದೇಶಾದ್ಯಂತ ಅಧಿಕಾರ ಹಿಡಿದವರಿಗೆ, ಅಧಿಕಾರ ಹಿಡಿಯಲು ಹೊರಟವರಿಗೆ, ಮತ್ತೆ ಮತ್ತೆ ಫ್ರೀಬೀಗಳ ಲೆಕ್ಕಾಚಾರ ರೂಪಿಸುತ್ತಿರುವವರಿಗೆ ಎಚ್ಚರಿಕೆಯ ಗಂಟೆ.

ಇಡ್ಲಿ-ವಡಾ, ದೋಸೆಯನ್ನೂ ಫ್ರೀ ಕೊಟ್ಟು ಇತಿಹಾಸ ಹೊಂದಿರುವ ತಮಿಳುನಾಡಿನಲ್ಲಿ ಈಗ ವಿದ್ಯುತ್ ಫ್ರೀ ಕೊಡಲು ಯೋಜನೆ ರೂಪಿಸಿದ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲು ಏರಿತ್ತು. ಆಂತರಿಕ ಸಂಗತಿ ಎಂದರೆ, `ಈ ಫ್ರೀಬಿಗೆ ಸುಪ್ರೀಂ ಕೋರ್ಟ್‌ ತಡೆ ಒಡ್ಡಿದರೆ ಸಾಕು’ ಎಂದು ಆರ್ಥಿಕ ಪರಿಣಿತರು, ರಾಜಕಾರಣಿಗಳೂ ಪ್ರಾರ್ಥಿಸಿದವರೇ..!

ಮುಖ್ಯಮಂತ್ರಿ ಸಿದ್ದರಾಮಯ್ಯನವರೋ `ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಇದರಿಂದ ಕರ್ನಾಟಕದ ಜನತೆಯ ಆರ್ಥಿಕತೆ ಸದೃಢವಾಗಿದೆ. ಸ್ವಾಭಿಮಾನ ಬೆಳೆದಿದೆ. ಸಮ ಸಮಾಜದ ನಿರ್ಮಾಣಕ್ಕೆ ಪೂರಕವಾಗಿದೆ. ಹಾಗಾಗಿಯೇ ದೇಶದಲ್ಲಿಯೇ ಕರ್ನಾಟಕದ ಜಿಡಿಪಿ ನಂಬರ್ ಒನ್ ಆಗಿದೆ. ಭಾರತದ ಜಿಡಿಪಿಗಿಂತಲೂ ಕರ್ನಾಟಕದ ಜಿಡಿಪಿ ಹೆಚ್ಚು ಎನ್ನುವುದನ್ನು ಟೀಕಾಕಾರರು ಗಮನಿಸಲಿ’ ಎನ್ನುತ್ತಾರೆ.

ಆದರೆ ಈಗ ಅವಾಸ್ತವದ ಕಟ್ಟುಗಳು ಬಿಚ್ಚಿಕೊಳ್ಳುತ್ತಿವೆ. ವಾಸ್ತವ ತೆರೆದುಕೊಳ್ಳುತ್ತಿದೆ. ಎರಡೂವರೆ ವರ್ಷಗಳ ಕಾಲ ರಾಜ್ಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ತುಲನಾತ್ಮಕ ಅಧ್ಯಯನ ಮಾಡಿ ಪರಾಮರ್ಶಿಸುವ ಕಾಲ ಬಂದಿದೆ ಎನಿಸುತ್ತದೆ.

ಪ್ರಶ್ನೆ ಏಳುವುದು ಇಲ್ಲೇ. ಸಶಕ್ತರು, ಉಳ್ಳವರು, ಆರ್ಥಿಕ ಬಲಾಢ್ಯರ ಮನೆಗೂ ಎರಡು ಸಾವಿರ ರೂಪಾಯಿ ಮಾಸಿಕ `ಗೃಹಲಕ್ಷ್ಮಿ’ ಅಗತ್ಯವಿದೆಯೇ? ಎಸಿ, ಫ್ರಿಜ್, ಸಾಕಷ್ಟು ಎಲೆಕ್ಟ್ರಿಕಲ್ ಉಪಕರಣಗಳನ್ನು ಹೊಂದಿರುವ ಮಹಡಿ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕೇ? ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಎಲ್ಲರಿಗೂ ಅಗತ್ಯವಿತ್ತಾ?
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ, ಆಹಾರ ಧಾನ್ಯ ಕೊಡುವುದು ಅಗತ್ಯ. ಆದರೆ ಹತ್ತು ಕೆಜಿ ಎಲ್ಲರಿಗೂ ಏಕೆ? ಸೋರಿಕೆ ಎಷ್ಟು?

ನಿಜ. ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸೈಕಲ್ ಮತ್ತು ಮಧ್ಯಾಹ್ನದ ಬಿಸಿಯೂಟ ಕೊಡುವುದಕ್ಕೆ ಇಡೀ ರಾಜ್ಯ ಮೆಚ್ಚಿಕೊಂಡಿತ್ತು. ರೈತರ ಹೊಲದಲ್ಲಿ ಕೃಷಿ ಹೊಂಡ, ಬದು ನಿರ್ಮಾಣ ಮೊದಲಾದ ಯೋಜನೆಗಳಿಗೆ ಜನ ಭೇಷ್ ಎಂದಿದ್ದರು. ಉತ್ಪಾದನೆಯ ಹೆಚ್ಚಳಕ್ಕಾಗಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ರಿಯಾಯ್ತಿ, ಬೆಳೆ ಸಾಲ ಬಡ್ಡಿ ರಿಯಾಯಿತಿ, ಕೊಟ್ಟಿದ್ದು ದುರುಪಯೋಗ ಆಗಲಿಲ್ಲ, ಯಾರ ವಿರೋಧವೂ ಇರಲಿಲ್ಲ. ಕಲಾವಿದರು, ಅಂಗವಿಕಲರು, ವೃದ್ಧರು, ಅಶಕ್ತರ ಮಾಸಾಶನ ಹೆಚ್ಚಿಸುವುದಕ್ಕೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ. ಹಾಗೆ ನೋಡಿದರೆ, ಕೊಡುತ್ತಿರುವುದು ಕಡಿಮೆ ಎಂದೇ ಎಲ್ಲರೂ ಹೇಳಿದರು!

ಆದರೆ ಎಲ್ಲವೂ ಎಲ್ಲರಿಗೂ ಒಳಗೊಂಡು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿರುವುದಕ್ಕೆ ಅಪಸ್ವರ ಒಂದೇ ಅಲ್ಲ. ಕಟು ವಿಮರ್ಶೆ, ಟೀಕೆಗಳೂ ವ್ಯಕ್ತವಾಗುತ್ತಲೇ ಇವೆ. `ರಾಜ್ಯ ದಿವಾಳಿ ಮಾಡಲಾಗುತ್ತಿದೆ. ಏಕೆ ಬೇಕು ಫ್ರೀಬೀ. ಮಾರಾಟ ಮಾಡಿಕೊಂಡು ಹೋಗುತ್ತಾರೆ’ ಎಂದೆಲ್ಲ ಟೀಕಿಸಿದ್ದ ಪ್ರಧಾನಿ ಮೋದಿಯವರು ಹಾಗೂ ಅವರ ಪಕ್ಷ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಬಿಹಾರ, ಹರಿಯಾಣ, ಜಾರ್ಖಂಡ್, ಆಂಧ್ರ ಹೀಗೆ ಎಲ್ಲ ರಾಜ್ಯಗಳಲ್ಲೂ ಚುನಾವಣೆ ಗೆಲ್ಲಲು ಕರ್ನಾಟಕಕ್ಕಿಂತಲೂ ಹೆಚ್ಚು ಫ್ರೀಬಿ ಘೋಷಿಸಿ ಗೆದ್ದರು.

ಅಲ್ಲಲ್ಲಿ, ಆಯಾ ರಾಜ್ಯಗಳ ಉಚಿತ ಕೊಡುಗೆಗಳ ಅನುಷ್ಠಾನದಲ್ಲಿ ಆಗುತ್ತಿರುವ ತೊಂದರೆ, ಅಡ್ಡಿ, ಟೀಕೆಗಳು ಕರ್ನಾಟಕಕ್ಕಿಂತಲೂ ಅಧಿಕ ಎನ್ನಿ. ಇಲ್ಲಿ ಫ್ರೀಬಿ ಏಕೆ ನಿಲ್ಲಿಸುತ್ತೀರಿ? ಕಂಡೀಷನ್ ಏಕೆ ಹಾಕುತ್ತೀರಿ? ಎನ್ನುವ ಪ್ರತಿಪಕ್ಷದ ವಿಜಯೇಂದ್ರ, ಅಶೋಕ್ ಮೊದಲಾದವರು ಆಯಾ ರಾಜ್ಯಗಳಲ್ಲಿ ವಿಧಿಸುತ್ತಿರುವ ಕಂಡೀಷನ್‌ಗಳಿಗೆ ಮತ್ತು ಅನುಷ್ಠಾನಗೊಳಿಸಲು ಅಸಾಧ್ಯವಾದ ಪರಿಸ್ಥಿತಿ ಬಗ್ಗೆ ಮಾತನಾಡುವುದಿಲ್ಲ.

ನಿಜ. ಅರ್ಹರಲ್ಲದವರಿಗೆ ಮತ್ತು ಅಗತ್ಯವಿಲ್ಲದವರಿಗೆ ಉಚಿತ ಕೊಡುಗೆ ಬೇಕಾಗಿಲ್ಲ. ಹಾಗಂತ ಈಗ ವಿರೋಧಿಸುವವರಾಗಲೀ, ಅಷ್ಟೇ ಅಲ್ಲ, ಎಲ್ಲರಿಗೂ ಏಕೆ ಬೇಕಿತ್ರೀ ಈ 2 ಸಾವಿರ ರೂಪಾಯಿ, ಬಸ್ ಪ್ರಯಾಣ, ಅಕ್ಕಿ ಎಂದೆಲ್ಲ ಪ್ರಶ್ನೆ ಮಾಡುವ ಮಂದಿ ಅದನ್ನು ತಿರಸ್ಕರಿಸುವ ಗೋಜಿಗೂ ಹೋಗುವುದಿಲ್ಲ. ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಘೋಷಿಸಿದಂತೆ ಈಗಾಗಲೇ 26 ತಿಂಗಳಿನಲ್ಲಿ ಪ್ರತಿ ಕುಟುಂಬದ ಯಜಮಾನಿಗೆ 52 ಸಾವಿರ ರೂಪಾಯಿ ನಗದು ನೀಡಲಾಗಿದೆ. ಮಾಸಿಕ 2 ಸಾವಿರ ರೂಪಾಯಿ ಬಡ, ವಸತಿ ರಹಿತ ಮತ್ತು ದುಡಿಮೆ ಮಾಡಲಾಗದ ಅಶಕ್ತೆಗೆ ನಿಜಕ್ಕೂ ಅಗತ್ಯವಿದೆ. ಅದೇ ಹತ್ತಾರು ಸಾವಿರ ರೂಪಾಯಿ ತಿಂಗಳೂ ದುಡಿಯುವ, ನಿತ್ಯ ಸಾವಿರಾರು ರೂ. ವ್ಯಾಪಾರ, ಆರ್ಥಿಕ ಸಂಪನ್ಮೂಲ ಹೊಂದಿರುವ ಮಂದಿಗೆ ಗೃಹಲಕ್ಷ್ಮಿ ಹಣ ಮೋಜು ಮಸ್ತಿಗಾಗಿ, ಅಥವಾ ಪ್ರತಿಷ್ಠೆಗಾಗಿ ಅಷ್ಟೇ ಅಲ್ಲವೇ?

ಬಸ್ ಪ್ರಯಾಣವನ್ನೇ ತೆಗೆದುಕೊಳ್ಳಿ. ಅದಕ್ಕೊಂದು ಮಾನದಂಡ ಬೇಕಿತ್ತು. ಈಗ ಸಹಜ ಟೀಕೆ ಎಂದರೆ `ಮಹಿಳೆಯರು ಮನೆಯಲ್ಲಿ ಕೂರುವುದಿಲ್ಲ; ಪುರುಷರು ಕೆಲಸಕ್ಕೆ ಹೋಗುವುದಿಲ್ಲ, ದುಡಿಮೆ ಇಲ್ಲದ ಸ್ಥಿತಿ ಬಂದಿದೆ’ ಎನ್ನುವುದು. ಸಚಿವ ಎಂ.ಬಿ.ಪಾಟೀಲ, ದೇಶಪಾಂಡೆ, ಪರಮೇಶ್ವರ್ ಮೊದಲಾದವರು ಗ್ಯಾರಂಟಿ ಯೋಜನೆಯ ಮಾನದಂಡ ಬದಲಾಯಿಸಬೇಕು, ಇದನ್ನು ಪರಾಮರ್ಶಿಸಬೇಕು ಎಂಬುದನ್ನು ಖಾಸಗಿಯಾಗಿ ಹೇಳುವ ಮಾತಿನಲ್ಲಿ ತಥ್ಯವಿದೆ. ಕಳಕಳಿಯೂ ಇದೆ.

ಹದಿನೇಳು ಸಾರೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ವಾದ ಸರಣಿ ಮತ್ತು ವಿಶ್ಲೇಷಣೆಯಲ್ಲಿ ಹುರುಳಂತೂ ಇದೆ. ತಮ್ಮ ಪಾಲಿನ ತೆರಿಗೆಯ ಹಣವನ್ನು ಕೇಂದ್ರ ಸರ್ಕಾರ ನೀಡಿದ್ದರೆ ಗ್ಯಾರಂಟಿ ಅನುಷ್ಠಾನದಲ್ಲಿ ಯಾವ ಸಮಸ್ಯೆಯೂ ಆಗದು ಎನ್ನುವುದು ಅವರು ಅಂಕೆ ಸಂಖ್ಯೆಗಳ ಮೂಲಕ ಹೇಳುವ ಮಾತು. ಗ್ಯಾರಂಟಿ ಯೋಜನೆ ಟೀಕಿಸುವ ಮತ್ತು ಸ್ವಾಗತಿಸುವ ಪ್ರತಿಪಕ್ಷದ ಶಾಸಕರು, ಸಂಸದರು, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಸೊಲ್ಲಲ್ಲು ಏಕೆ ಎತ್ತುತ್ತಿಲ್ಲ? ಹಣ ಕೊಡಿಸಲಿ ಎನ್ನುವ ಸಿದ್ದರಾಮಯ್ಯ ಸವಾಲಿಗೆ ಉತ್ತರ ಕೊಡುವವರಿಲ್ಲ.

ಡಬಲ್ ಎಂಜಿನ್ ಸರ್ಕಾರ ಬಂದಿಲ್ಲ ಎನ್ನುವುದಕ್ಕೋ ಏನೋ, ಕರ್ನಾಟಕವಂತೂ ಅನುದಾನ ಮತ್ತು ನೆರವಿನ ವಿಷಯದಲ್ಲಿ ಕೇಂದ್ರದಿಂದ ಸಾಕಷ್ಟು ಅಸಹಕಾರವನ್ನು ಎದುರಿಸುತ್ತಿದೆ. ಕೇವಲ ಅನುದಾನವಷ್ಟೇ ಅಲ್ಲ. ರಾಜ್ಯದ ಯೋಜನೆಗಳು, ನೀತಿ ನಿರೂಪಣೆಗಳು, ಸಾಲಸೌಲಭ್ಯಗಳು ಕೂಡ ಇದೇ ಅಸಹಕಾರಕ್ಕೆ ತುತ್ತಾಗಿವೆ. ಇಡೀ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಮತ್ತು ನೈಸರ್ಗಿಕ ವಿಕೋಪಗಳಿಂದ 15 ಸಾವಿರ ಕೋಟಿ ಹಾನಿಯಾಗಿದೆ ಎಂದರೆ ಕೊಟ್ಟಿದ್ದು 384.40 ಕೋಟಿ ಅಷ್ಟೇ. ಇಷ್ಟು ಕಡಿಮೆ ಮೊತ್ತ ಕೊಡುವ ಮುನ್ನ ಕೇಂದ್ರ ತಂಡ ಇಡೀ ರಾಜ್ಯ ಸುತ್ತಿದ್ದೇ ಸುತ್ತಿದ್ದು..!

ಸಿದ್ದರಾಮಯ್ಯ ನಾಳೆ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ. ಎಲ್ಲರ ನಿರೀಕ್ಷೆ, ಗ್ಯಾರಂಟಿಗೊಂದು ಕಡಿವಾಣ ಅಥವಾ ಮಾನದಂಡ ವಿಧಿಸಿಯಾರು ಎನ್ನುವುದು. ಗ್ಯಾರಂಟಿಗೆ ವಾಸ್ತವಿಕ ನೆಲೆಗಟ್ಟು, ಚಿಂತನೆ ಮತ್ತು ಪರಾಮರ್ಶೆಗಳೆಲ್ಲ ಈಗ ಅಗತ್ಯ. ಹೀಗಾಗಿ ಉಳ್ಳವರು ಫ್ರೀಬೀಸ್ ಬಿಟ್ಟುಕೊಡಿ ಎನ್ನುವ ಕೋರಿಕೆ ಈಡೇರುವ ಕಾಲ ಇದಲ್ಲ. ಔದಾರ್ಯದ ಕಾಲಘಟ್ಟ ಉಳಿದಿಲ್ಲ. ನಿರೀಕ್ಷಿಸಲೂ ಆಗದು. ಹಾಗಂತ ಕಡಿವಾಣ ಹಾಕದಿದ್ದರೆ ಯೋಜನೆಗೊಂದು ಶಿಸ್ತು ಮೂಡದು. ಬಜೆಟ್‌ ಅಂತೂ ನಮ್ಮ ಮುಂದಿದೆ!