೨೦೦೧ ರ ಗಣರಾಜ್ಯೋತ್ಸವದ ದಿನ. ಅಂದು ನಮ್ಮ ಕ್ಯಾಂಪಸ್‌ನಲ್ಲಿ ಸಂಭ್ರಮದ ವಾತಾವರಣ. ಅಂದು ಪರೇಡ್ ನಡೆಯುವುದು. ಮಕ್ಕಳು ಚೆಂದವಾಗಿ ಸೂಟ್ ಧರಿಸಿಕೊಂಡು, ತಮ್ಮ ತಮ್ಮ “ಹೌಸ್”ಗಳ ಪ್ರಕಾರ ಸರದಿಯಲ್ಲಿ “ಮಾರ್ಚ್ ಪಾಸ್ಟ್” ಮಾಡಲು ಸಿದ್ಧರಾಗಿದ್ದರು. ಯಾವ ಹೌಸ್‌ಗೆ ಪ್ರಶಸ್ತಿ ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದರು. ಅಂದು ಬೆಳಿಗ್ಗೆಯೇ ಏಳೂವರೆಗೆ ಎಲ್ಲರೂ ಮೈದಾನದಲ್ಲಿ ತಮಗೆ ನಿಯಮಿತವಾದ ಜಾಗೆಗಳಲ್ಲಿ ನಿಂತರು. ದೈಹಿಕ ಶಿಕ್ಷಣ ನಿರ್ದೇಶಕರು ನೀಡಿದ ಆಜ್ಞೆಯಂತೆ ಪಥ ಸಂಚಲನಮಾಡುತ್ತ ಬಂದು ಮುಖ್ಯ ಅತಿಥಿಗಳು ನಿಂತಿದ್ದ ಸ್ಥಳಕ್ಕೆ ಬಂದೊಡನೆ ಅವರಿಗೆ ಗೌರವದ ಸಲಾಂ ನೀಡಿ ಮುಂದೆ ನಡೆದರು. ಎಲ್ಲವೂ ತುಂಬ ಶಿಸ್ತಿನಿಂದ, ವ್ಯವಸ್ಥಿತವಾಗಿ ನಡೆದಿತ್ತು. ಸುಮಾರು ಎಂಟೂವರೆಯ ಹೊತ್ತಿಗೆ ಮಕ್ಕಳೆಲ್ಲ ತಿಂಡಿಗಾಗಿ ಊಟದ ಮನೆಯನ್ನು ಸೇರಿದರು. ನಮ್ಮ ಡೈರೆಕ್ಟರ್, ನಾನು ಮತ್ತು ನಮ್ಮ ಅತಿಥಿಗಳು ನನ್ನ ಕಛೇರಿಯಲ್ಲಿ ಕುಳಿತಿದ್ದೆವು. ಸುಮಾರು ಒಂಭತ್ತು ಗಂಟೆಯ ಹೊತ್ತಿಗೆ ನೆಲ ಕೊಂಚ ಗಡಗಡ ನಡುಗಿದಂತಾಯಿತು. ನಿಂತಿತು. ಮತ್ತೊಂದು ನಿಮಿಷಕ್ಕೆ ಮತ್ತೆ ಅದೇ ಅನುಭವ. ಆದರೆ ಈ ಬಾರಿ ಅದು ಎಂಟು-ಹತ್ತು ಸೆಕೆಂಡುಗಳಷ್ಟು ಅಲುಗಿದಂತೆ ಭಾಸವಾಯಿತು. ತಕ್ಷಣವೇ ದೈಹಿಕ ಶಿಕ್ಷಣ ಅಧ್ಯಾಪಕರಿಗೆ ಫೋನ್ ಮಾಡಿ ಎಲ್ಲ ಮಕ್ಕಳು, ಶಿಕ್ಷಕರು, ಸಿಬ್ಬಂದಿಯವರೆಲ್ಲರೂ ಮೈದಾನಕ್ಕೆ ಬರಲು ಸೂಚಿಸಿದೆವು. ಮುಂದಿನ ಐದು ನಿಮಿಷದಲ್ಲಿ ಎಲ್ಲರೂ ಮೈದಾನದಲ್ಲೇ ಇದ್ದೆವು. ಅದು ಒಂದು ಭೂಕಂಪದ ಅನುಭವ. ಅಷ್ಟು ಬಲವಾದದ್ದೇನೂ ಅಲ್ಲ. ಆದರೂ ಕಟ್ಟಡಗಳು ನಡುಗಿದ್ದವು.
ನಂತರ ಎಲ್ಲವೂ ಸರಿಯಾಯಿತೆಂದು ಮಕ್ಕಳನ್ನು ಅವರವರ ವಸತಿಗಳಿಗೆ ಕಳುಹಿಸಿದೆವು. ಆದರೆ ಸುಮಾರು ಒಂಭತ್ತೂವರೆಯ ಹೊತ್ತಿಗೆ ಹುಡುಗನೊಬ್ಬ ದೊಡ್ಡ ದನಿಯಲ್ಲಿ ಅರಚುತ್ತ ನನ್ನ ಛೇಂಬರ್ ಬಳಿಗೆ ಓಡಿ ಬಂದ. ಅವನ ಎರಡೂ ಕಣ್ಣುಗಳಲ್ಲಿ ನೀರು! ಆ ನೀರಿನಲ್ಲಿ ಮಡುಗಳಲ್ಲಿ ವರ್ಣಿಸಲಾಗದ ಆತಂಕ ತೇಲುತ್ತಿದೆ. ಬಂದವನೇ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡು, “ಎಲ್ಲವೂ ಮುಗಿದು ಹೋಯಿತು ಸರ್. ಭುಜ್‌ನಲ್ಲಿಯ ನಮ್ಮ ಮನೆ ಕುಸಿದು ಹೋಗಿದೆಯಂತೆ. ಅಮ್ಮ, ಅಪ್ಪ ಇಬ್ಬರಿಗೂ ಏನಾಗಿದೆಯೋ ತಿಳಿಯದು. ಇಡೀ ಭುಜ್ ಪುಡಿಪುಡಿಯಾಗಿದೆಯಂತೆ” ಎಂದು ಚೀರಿದ.
“ಯಾರೋ ನಿನಗೆ ಇದನ್ನು ಹೇಳಿದ್ದು?”
“ಸರ್, ಈಗ ನನ್ನ ಸೋದರಮಾವ ಸುರೇಂದ್ರನಗರದಿಂದ ಫೋನ್ ಮಾಡಿದ್ದ. ಅಲ್ಲಿಯೂ ಭಾರೀ ಹಾನಿಯಾಗಿದೆ. ಭುಜ್‌ನಲ್ಲಿ ಯಾವ ಫೋನೂ ಕೆಲಸ ಮಾಡುತ್ತಿಲ್ಲ. ಚಿಂತೆ ಮಾಡಬೇಡ. ನಾನು ವಿಚಾರಿಸಿ ತಿಳಿಸುತ್ತೇನೆ” ಎಂದು ಹೇಳಿದ ಸರ್. ಇಡೀ ಮನೆಯೇ ಕುಸಿದಿದ್ದರೆ ಅಪ್ಪ, ಅಮ್ಮ ಹೇಗೆ ಉಳಿಯುತ್ತಾರೆ ಸಾರ್? ನಾನು ತಕ್ಷಣ ಹೊರಡಬೇಕು ಸರ್” ಎಂದು ಒಂದೇ ಸಮನೆ ಬಿಕ್ಕುತ್ತಿದ್ದ.
ನಾವು ತಕ್ಷಣವೇ ಟಿ.ವಿ. ಹಾಕಿ ನೋಡಿದರೆ ಆ ಭಯಂಕರ ಪ್ರಸಂಗದ ನೇರ ವರದಿಯಾಗುತ್ತಿತ್ತು. ಇಡೀ ಭುಜ್ ನಗರ ನೆಲಸಮವಾದಂತಿತ್ತು. ಯಾರು ಬದುಕಿದರು, ಯಾರು ತೀರಿಹೋದರು ಎನ್ನುವುದನ್ನು ಪಟ್ಟಿಮಾಡಲು ಯಾರಿಗೆ ಪುರುಸೊತ್ತಿದೆ? ಎಲ್ಲರೂ ಉಳಿದಿರುವವರನ್ನು ಬದುಕಿಸಲು ಹೋರಾಡುತ್ತಿದ್ದರು.
ನಾವೀಗ ಒಂದು ವಿಶೇಷವಾದ ಸಂಕಟದ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಾಗಿರಬೇಕಿತ್ತು. ನಮ್ಮ ಬಹಳಷ್ಟು ಜನ ಮಕ್ಕಳು ಗುಜರಾತಿನವರು. ಅದರಲ್ಲೂ ಹೆಚ್ಚಿನ ಮಕ್ಕಳು ಈ ಪ್ರದೇಶದಿಂದಲೇ ಬಂದವರು. ಅಹಮದಾಬಾದ್, ರಾಜಕೋಟ್, ಜಾಮ್‌ನಗರ, ಸುರೇಂದ್ರನಗರ, ಬಾನಸಕಾಂಟಾ ಇವುಗಳು ಭೂಕಂಪಕ್ಕೆ ನಲುಗಿದ ಪ್ರದೇಶಗಳಾಗಿದ್ದವು. ತಕ್ಷಣವೇ ಗುಜರಾತಿನ ಈ ಪ್ರದೇಶದ ಮಕ್ಕಳ ಅಡ್ರೆಸ್, ಮನೆಗಳ ಫೋನ್ ನಂಬರ್, ಮೊಬೈಲ್ ನಂಬರ್ ಎಲ್ಲವನ್ನು ಐದೇ ನಿಮಿಷದಲ್ಲಿ ತರಿಸಿಕೊಂಡು, ಸುಮಾರು ಹತ್ತು ಜನ ಶಿಕ್ಷಕರನ್ನು ಬೇರೆ ಬೇರೆ ತರಗತಿಗಳಲ್ಲಿ ಕೂಡ್ರಿಸಿ, ಪ್ರತಿಯೊಬ್ಬರಿಗೂ ಒಂದೊಂದು ಪ್ರದೇಶದ ಫೋನ್ ನಂಬರುಗಳನ್ನು ಕೊಟ್ಟು ಸತತವಾಗಿ ಫೋನ್ ಪ್ರಯತ್ನಿಸಲು ಹೇಳಿದೆವು. ಅಲ್ಲಿ ವಿಷಯ ತಿಳಿದ ಮೇಲೆ ನಮಗೆ ಅವರು ಹೇಳಬೇಕು. ವಿಷಯದ ತೀವ್ರತೆಯನ್ನು ತಿಳಿದು ನಾವು ಮಕ್ಕಳಿಗೆ ಆ ವಿಷಯ ತಿಳಿಸಬೇಕು. ಇದು ವ್ಯವಸ್ಥೆ. ಸುಮಾರು ಹತ್ತೂವರೆಯ ಹೊತ್ತಿಗೆ ನಮ್ಮ ಆಫೀಸ್ ಮುಂದಿನ ಸ್ಥಿತಿ ತುಂಬ ದಾರುಣವಾಗಿತ್ತು. ಎಲ್ಲ ಗುಜರಾತಿನ ಮಕ್ಕಳು, ವಿಷಯ ತಿಳಿಯದೆ, ಏನಾಗಿದೆಯೋ ಎಂಬ ಆತಂಕದಿಂದ ಅಳುತ್ತಿದ್ದಾರೆ, ಉಳಿದ ವಿದ್ಯಾರ್ಥಿಗಳು ಇವರನ್ನು ಸಂತೈಸುತ್ತ ಅಳುತ್ತಿದ್ದರು. ಅವರಿಗೆ ಸಮಾಧಾನ ಹೇಳುವುದು ತುಂಬ ಕಷ್ಟದ ವಿಷಯವಾಗಿತ್ತು. ಶಿಕ್ಷಕರು, ಶಿಕ್ಷಕಿಯರು ಬಹುವಾಗಿ ಪ್ರಯತ್ನಿಸುತ್ತಿದ್ದರು.
ಸುಮಾರು ಮಧ್ಯಾನ್ಹ ಹನ್ನೆರಡರ ಹೊತ್ತಿಗೆ ಸ್ವಲ್ಪ ಸ್ವಲ್ಪ ಚಿತ್ರಣ ಗೋಚರವಾಗಿತ್ತು. ನಮ್ಮ ಅನೇಕ ಮಕ್ಕಳ ಮನೆಗಳಿಗೆ ಹಾನಿಯಾಗಿದ್ದರೂ ಜೀವ ಹಾನಿಯಾಗಿರಲಿಲ್ಲ. ಮೊದಲು ಅಳುತ್ತ ಬಂದ ಹುಡುಗನ ತಂದೆ-ತಾಯಿಯರು ಪವಾಡಸದೃಶವಾದ ರೀತಿಯಲ್ಲಿ ಪಾರಾಗಿದ್ದರು. ಅವರಿಬ್ಬರೂ ದೇವಸ್ಥಾನಕ್ಕೆ ಹೋಗಲು ಕಾರಿನಿಂದ ಹೊರಟ ಎರಡೇ ನಿಮಿಷದಲ್ಲಿ ಪೂರ್ತಿ ಮನೆ ಕುಸಿದಿತ್ತು. ದೇವಸ್ಥಾನದ ಕರೆ ಅವರನ್ನು ಉಳಿಸಿತ್ತು. ಸಂಜೆಯ ಹೊತ್ತಿಗೆ ಮಕ್ಕಳಿಗೆ ಹಿರಿಯರ ಜೀವದ ಬಗ್ಗೆ ಚಿಂತೆ ಇಲ್ಲದೆ ಹೋದರೂ, ತಮ್ಮ ಮನೆಗಳ, ಉಳಿದ ವಸ್ತುಗಳ ಹಾನಿಯ ಬಗ್ಗೆ ಚಿಂತೆ ಇತ್ತು. ಮುಂದೆ ನಾಲ್ಕಾರು ದಿನಗಳಲ್ಲಿ ಬದಲಾದ ಸ್ಥಿತಿಗೆ ಮಕ್ಕಳೆಲ್ಲ ಹೊಂದಿಕೊಂಡರು. ದೂರದ ಭುಜ್‌ನಲ್ಲಿ ಆದ ಭೂಕಂಪ, ಬೆಂಗಳೂರನ್ನು ನಡುಗಿಸಿತ್ತು, ದೈಹಿಕವಾಗಿ, ಮಾನಸಿಕವಾಗಿ. ಪ್ರಪಂಚ ಎಷ್ಟು ಸಣ್ಣದು?
ಆಗ ನನಗೆ ನೆನಪಾದದ್ದು ನನ್ನ ಪುಣೆಯ ವೈದ್ಯ ಮಿತ್ರ ಹೇಳಿದ ಘಟನೆ. ಅದು ಆದದ್ದು ಸೆಪ್ಟೆಂಬರ್ ೩೦, ೧೯೯೩. ಭಾರತದ ಇತಿಹಾಸದಲ್ಲೊಂದು ಕರಾಳ ದಿನ. ಅಂದು ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಮಹಾರಾಷ್ಟ್ರದಲ್ಲಿ ಭೂಕಂಪವಾಯಿತು. ಅಪಾರವಾದ ಜೀವಹಾನಿ, ಆಸ್ತಿ ಹಾನಿಯಾಯಿತು. ಈ ಭೂಕಂಪದ ಕೇಂದ್ರಬಿಂದು ಲಾತೂರ ಎಂಬ ಪುಟ್ಟ ಪಟ್ಟಣದ ಸುತ್ತಮುತ್ತ. ಅಲ್ಲಿಯ ಮನೆಗಳು ಮಣ್ಣು ಬಳಸಿ ಕಲ್ಲಿನಿಂದ ಕಟ್ಟಿದ್ದವುಗಳು. ಭೂಕಂಪದ ಕಲ್ಪನೆಯಿಲ್ಲದ ಜನರಿಗೆ ಈ ಕಲ್ಲುಗಳೇ ಪ್ರಾಣಕ್ಕೆ ಮುಳುವಾಗಿದ್ದವು. ಮನೆಗಳು ಕುಸಿದಾಗ, ಕಲ್ಲುಗಳ ಕೆಳಗೇ ಕುಸಿದು ಸತ್ತವರು ಅನೇಕರು. ನನ್ನ ಗೆಳೆಯ ವೈದ್ಯ, ವಿಷಯ ತಿಳಿದೊಡನೆ ಹೆಂಡತಿ ಮತ್ತಿಬ್ಬರು ಸ್ನೇಹಿತರನ್ನು ಕರೆದುಕೊಂಡು, ಔಷಧಿ, ಸಾಮಗ್ರಿಗಳನ್ನು ತುಂಬಿಕೊಂಡು ತನ್ನ ಕಾರಿನಲ್ಲೇ ಲಾತೂರಿಗೆ ಹೋದ. ಅಲ್ಲಿ ಹೋದಾಗ ಅವನು ಕಂಡದ್ದು, ಟಿ.ವಿ, ಪೇಪರುಗಳಲ್ಲಿ ಕಂಡದ್ದಕ್ಕಿಂತ ಹೆಚ್ಚು ಭಯಂಕರವಾಗಿತ್ತು. ತಕ್ಷಣ ತನ್ನ ಕಾರ್ಯ ಪ್ರಾರಂಭಿಸಿದ. ಎರಡು ಟೆಂಟ್ ಹಾಕಿಕೊಂಡು ಇನ್ನೂ ಬದುಕಿದವರು, ಬದುಕಲು ಸಾಧ್ಯವಿರುವವರಿಗೆ ಶುಶ್ರೂಷೆ ಪ್ರಾರಂಭಿಸಿದ. ಹೆಣಗಳನ್ನು ಯಾರಾದರೂ ಎಳೆಯುತ್ತಾರೆ. ಆದರೆ ಬದುಕಿದವರು ಹೆಣವಾಗಬಾರದಲ್ಲ. ಗಾಯಗೊಂಡವರ, ಒದ್ದಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಆದರೆ ಸಹಾಯಕ್ಕೆ ಕೈಗಳು ಕಡಿಮೆ. ಯಾರಾದರೂ ಸ್ವಯಂಸೇವಕರು ಸಿಕ್ಕಾರೆಯೇ ಎಂದು ನೋಡುವಾಗ ಅಲ್ಲೊಬ್ಬ ಸುಮಾರು ಐವತ್ತು ವರ್ಷದ ಮನುಷ್ಯ ಕಂಡ. ಕೊಳಕು ಧೋತರ, ಹರಿದ ಅಂಗಿ, ಕುರುಚಲು ಗಡ್ಡ, ಗುಳಿಬಿದ್ದ ದೀನವಾದ ಕಣ್ಣುಗಳು. ವೈದ್ಯ ಅವನನ್ನು ಕರೆದು, “ಬಾರಪ್ಪಾ ಇಲ್ಲಿ, ಸಹಾಯ ಮಾಡುತ್ತೀಯಾ? ದಿನಕ್ಕೆ ನೂರು ರೂಪಾಯಿ ಕೊಡುತ್ತೇನೆ. ಬಾ, ಈ ರೋಗಿಗಗಳನ್ನು ಎತ್ತಿ ಎತ್ತಿ ಈ ಕಡೆಗೆ ಮಲಗಿಸಬೇಕು. ಆದೀತೇ?” ಎಂದು ಕೇಳಿದ. ಆತ ಹತ್ತಿರಕ್ಕೆ ಬಂದು, “ಆತ್ರೀ ಸರ್. ಆದರ ರೂಪಾಯಿ ಬ್ಯಾಡ್ರೀ” ಎಂದು ಮೆಲುದನಿಯಲ್ಲಿ ಹೇಳಿದ. ವೈದ್ಯ ಹೇಳಿದ ಪ್ರತಿಯೊಂದು ಕೆಲಸವನ್ನು ಮಾಡಿದ. ಹೇಸಿಕೊಳ್ಳದೆ ರಕ್ತ ತೊಳೆದ, ಹೊಲಸು ಬಳಿದ. ಆತ ಒಂದು ಮಾತೂ ಆಡುತ್ತಿರಲಿಲ್ಲ.
ಮರುದಿನ ಮುಂದಿನ ಬೀದಿಗೆ ಬಂದಾಗ ಸ್ವಯಂಸೇವಕರು ಕುಸಿದ ಮನೆಯಿಂದ ದೇಹಗಳನ್ನು ತೆಗೆಯುತ್ತಿದ್ದರು. ಒಳಗಿದ್ದ ಎಲ್ಲರೂ ಸತ್ತು ಹೋಗಿದ್ದಾರೆ ಎಂದು ಭಾವಿಸಿದ್ದರು. ಆದರೆ ಈ ವೈದ್ಯ ಗಮನಿಸಿದ, ಒಬ್ಬ ತರುಣ ಮತ್ತು ಮುದುಕನೊಬ್ಬನಿಗೆ ಕುಟುಕು ಜೀವವಿದೆ. ತಕ್ಷಣ ಸಹಾಯ ದೊರಕಿದರೆ ಬದುಕಿಯಾರು. ತಕ್ಷಣ, ತನ್ನ ಪಕ್ಕದಲ್ಲಿದ್ದ ಈ ಮನುಷ್ಯನನ್ನು ಕರೆದುಕೊಂಡು ಅಲ್ಲಿಗೆ ಧಾವಿಸಿ, ಇಬ್ಬರೂ ಸೇರಿ ಮೈಮೇಲೆ ಅರಿವಿಲ್ಲದವರಂತೆ ಅವರನ್ನು ಎತ್ತಿಕೊಂಡು ಬಂದು ಶುಶ್ರ‍್ರೂಷೆ ಪ್ರಾರಂಭಿಸಿದರು. ತರುಣನ ಪ್ರಾಣ ಜಾರಿಹೋಗುತ್ತ್ತಿರುವಂತೆ ತೋರಿತು. ನಿದ್ರೆಗೆಟ್ಟು, ಸುಸ್ತಾಗಿ ದಣಿವಾಗಿದ್ದ ವೈದ್ಯ ಹತಾಶೆಯಿಂದ ಅರಚಿದ “ಯಾರೂ ಸಾಯಬಾರದು, ಯಾರೂ ಸಾಯಬಾರದು” ತಕ್ಷಣ ಪ್ರತಿದ್ವನಿ ಎಂಬಂತೆ ಜೋರಾದ ದು:ಖದಿಂದ ಭಾರವಾದ ಕೂಗು ಮೇಲೆದ್ದು ಬಂದಿತು “ಹೌದು, ಯಾರೂ ಸಾಯಬಾರದು” ಇವನಿಗೆ ಸಹಾಯಕನಾಗಿ ಸೇರಿದ ವ್ಯಕ್ತಿ ನೆಲದ ಮಣ್ಣನ್ನು ತಲೆಯ ಮೇಲೆ ಹಾಕಿಕೊಳ್ಳುತ್ತ ಹುಚ್ಚನಂತೆ ಅಳುತ್ತಿದ್ದಾನೆ. ಇದುವರೆಗೂ ಕಷ್ಟಪಟ್ಟು ತಡೆಹಿಡಿದಿದ್ದ, ಮಡುಗಟ್ಟಿದ ನೋವು, ದು:ಖ ಕಟ್ಟೊಡೆದು ಹರಿದಿತ್ತು. ಅವನನ್ನು ಸಮಾಧಾನ ಮಾಡಿ ಕೇಳಿದಾಗ ತಿಳಿದಿದ್ದು ಅವನ ಹೆಸರು ತುಕಾರಾಮ ಧುಳೆ. ಎರಡು ದಿನಗಳ ಹಿಂದೆಯೇ, ಇಲ್ಲಿಯೇ ಇದೇ ನೆಲದಲ್ಲಿ ತನ್ನ ಮನೆ ಕುಸಿದು ಹೆಂಡತಿ ಮತ್ತು ಎದೆ ಎತ್ತರಕ್ಕೆ ಬೆಳೆದ ಎರಡು ಮಕ್ಕಳನ್ನು ಕಳೆದುಕೊಂಡಿದ್ದಾನೆ. ಇನ್ನೂ ಕಳೆದುಕೊಳ್ಳಲು ಅವನ ಬಳಿ ಏನೂ ಇಲ್ಲ. ಆದರೂ ಆತ ಅಲ್ಲಿಯೇ ಇದ್ದಾನೆ. ತನ್ನ ನೀಗಲಾರದ ದು:ಖವನ್ನು ಮುಚ್ಚಿಟ್ಟುಕೊಂಡು ಮತ್ತಾರೂ ಸಾಯಬಾರದು ಎಂದು ಒದ್ದಾಡುತ್ತಿದ್ದಾನೆ. ತನ್ನ ಸಂಸಾರವೇ ಹೋಯಿತು. ತನಗೇಕೆ ಉಳಿದವರ ಚಿಂತೆ ಎಂದು ನಿರಾಶನಾಗಿಲ್ಲ.
ಅಷ್ಟರಲ್ಲಿ ಪಕ್ಕದ ಟೆಂಟಿನಿಂದ ಹೆಣ್ಣಿನ ಚೀತ್ಕಾರ ಕೇಳಿಸಿತು. ಅದರ ಹಿಂದೆಯೇ ನುಗ್ಗಿ ಬಂದ ಮಗುವಿನ ಅಳು. ಎಲ್ಲರೂ ಅಲ್ಲಿಗೆ ಧಾವಿಸಿದರು. ಅಲ್ಲೊಬ್ಬ ೩೦-೩೨ರ ತರುಣಿ ತುಂಬು ಗರ್ಭಿಣಿ. ಆಕೆಯನ್ನು ಕಲ್ಲುಗಳ ಅವಶೇಷಗಳ ಅಡಿಯಿಂದಲೇ ಎತ್ತಿಕೊಂಡು ಬಂದಿದ್ದಾರೆ. ಆಕೆಗೆ ವೈದ್ಯೆ ಹೆರಿಗೆ ಮಾಡಿಸಿದ್ದಾರೆ. ನಮಗೆ ಕೇಳಿಸಿದ ಮಗುವಿನ ಅಳು, ಪುಟ್ಟ ಚಕ್ರವರ್ತಿ ಈ ಪ್ರಪಂಚಕ್ಕೆ ಕಾಲಿಡುವಾಗ ಮೊಳಗಿದ ಕಹಳೆ, ದುಂದುಭಿ. ಮಗುವನ್ನು ಒರೆಸಿ, ಟಾವೆಲ್ಲಿನಲ್ಲಿ ಸುತ್ತಿ ತಾಯಿಯ ಕೈಗೆ ಕೊಟ್ಟರು. ಆಕೆಯ ತಲೆ, ಹಣೆಗಳಿಗೆ ಕಲ್ಲು ಬಡಿದು ರಕ್ತ ಸೋರಿ ಮರಗಟ್ಟಿದೆ. ಬಲಗೈ ತೋಳು ಮುರಿದಿದೆ. ಆಕೆಯ ಸಂಬಂಧಿಗಳು ಯಾರು ಬದುಕಿದ್ದಾರೋ ಸತ್ತಿದ್ದಾರೋ ತಿಳಿಯದು. ಆದರೆ ಎಡಗೈಯಲ್ಲಿ ಮಗುವನ್ನು ಹಿಡಿದ ತಾಯಿಯ ಮುಖದಲ್ಲಿ ಅದೇನು ಕಾಂತಿ! ಶಾಂತಿ! ಕಣ್ಣಿನ ಸುತ್ತ ಕರೆಕಟ್ಟಿದ ಕಣ್ಣೀರಿನ ಪ್ರವಾಹದೊಂದಿಗೆ ಆಕೆಯ ತುಟಿಯ ಮೇಲೆ ವರ್ಣಿಸಲಸದಳವಾದ ನಗು. ಆಕೆಯ ಕಣ್ಣಿಂದ ಪ್ರಪಂಚದ ಒಲವಿನ ಹೊನಲು ಹರಿದು ಮಗುವನ್ನು ಸುತ್ತಿ ರಕ್ಷಿಸುತ್ತಿದೆ. ಇದೊಂದು ಪವಾಡ.
ಸಾವಿನ ಗರ್ಭದಿಂದಲೇ ಬದುಕಿನ ಪುಷ್ಪ ಅರಳುತ್ತದೆ.