ನೈತಿಕ ಪೊಲೀಸ್‌ಗಿರಿಗೆ ಕಾದಿದೆ ಮಾರಿಹಬ್ಬ

0
12

ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್‌ಗಿರಿ ನಡೆಯೋಲ್ಲ…’
ಮುಖ್ಯಮಂತ್ರಿಯಾದ ನಂತರ ನಡೆಸಿದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿದ್ದರಾಮಯ್ಯ ಅಸಂವಿಧಾನಿಕ ಮತ್ತು ಕಾನೂನುಬಾಹಿರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ (ಮಾರಲ್ ಪೊಲೀಸಿಂಗ್) ನಿಗ್ರಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಂತೂ ನಾಲ್ಕು ವರ್ಷಗಳಿಂದ ಪೊಲೀಸ್ ಇಲಾಖೆಯೇ ಕೇಸರಿಮಯವಾಗಿದೆ. ಕೇಸರಿ ಬಟ್ಟೆ ತೊಟ್ಟು ಪೊಲೀಸಿಂಗ್ ಮಾಡಿದವರಿದ್ದಾರೆ. ಕೆಲವು ಜಾತಿಗಳಿಗೆ ರಕ್ಷಣೆ ಇಲ್ಲದಂತಾಯಿತು. ಸ್ವಾತಂತ್ರ್ಯ- ಸಂವಿಧಾನ, ಕಾನೂನು ಸುವ್ಯವಸ್ಥೆ ಎಲ್ಲವೂ ಅವರೆದುರು ತಲೆಬಾಗಿವೆ ಎಂದು ಆಕ್ರೋಶವನ್ನೇ ವ್ಯಕ್ತಪಡಿಸಿದರು.
ಹೌದು. ನೈತಿಕ ಪೊಲೀಸ್‌ಗಿರಿ ಹುಟ್ಟು ಬೆಳವಣಿಗೆ, ಜೊತೆಗೆ ಇದು ಉಂಟು ಮಾಡಿರುವ ಸಮಸ್ಯೆಗಳ ಬಗ್ಗೆ ಸದ್ಯಕ್ಕಂತೂ ವಿಮರ್ಶೆ ಮಾಡಬೇಕಾದ ಕಾಲ. ನಾವು ಬದುಕುವ, ಬದ್ಧವಾಗಿರುವ ಕಾನೂನು ಮಿತಿಯಲ್ಲಿ ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಸಂವಿಧಾನಬದ್ಧವಾಗಿಯೇ ಬಂದಿರುವುದು ನಿಜ. ಆದರೆ, ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ಕಟ್ಟು ಪಾಡುಗಳು, ಪರಂಪರೆ-ಸಂಪ್ರದಾಯಗಳ ನಂಬಿಕೆಯಲ್ಲಿರುವ ಕಟ್ಟುಪಾಡು ಮತ್ತು ಆಚರಣೆಯ ಭಿನ್ನತೆ ನಡುವೆ ಉಂಟಾದ ಸಂಘರ್ಷದಿಂದಾಗಿ ನೈತಿಕ ಪೊಲೀಸ್‌ಗಿರಿ ಜನ್ಮತಾಳಿದೆ.
ಸಾಂವಿಧಾನಿಕವಾಗಿ ಕಾನೂನು ಕೈಗೆ ತೆಗೆದುಕೊಳ್ಳುವುದು ಅಪರಾಧ. ಆದರೆ ನಮ್ಮ ಧರ್ಮವನ್ನು, ವ್ಯವಸ್ಥೆಯನ್ನು, ಪರಂಪರೆ ಸಂಪ್ರದಾಯಗಳ ಮೇಲೆ ಪ್ರಹಾರವಾದಾಗ ಹಾಗೂ ಆಸೆ, ಆಮಿಷಗಳಿಂದ ಅಸ್ತಿತ್ವಕ್ಕೆ ಧಕ್ಕೆ ನಡೆಸಿದಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳಲೇ ಬೇಕಲ್ಲ… ನಿಯಂತ್ರಿಸಿಕೊಳ್ಳುತ್ತೇವೆ ಎನ್ನುತ್ತ ಅದಕ್ಕೊಂದು ಪರ್ಯಾಯ ಗುಂಪನ್ನು ರಚಿಸಿಕೊಂಡಿರುವುದು ಈಗ ನೈತಿಕ ಪೊಲೀಸ್ ಎನ್ನುವ ಅಗ್ಗಳಿಕೆಯನ್ನು ಪಡೆದುಕೊಂಡಿದೆ.
ನೈತಿಕ ಪೊಲೀಸ್‌ಗಿರಿ'ಯ ವಿರುದ್ಧ ಮುಖ್ಯಮಂತ್ರಿಯವರೇನೋ ಆಕ್ರೋಶ ವ್ಯಕ್ತಪಡಿಸಿದರು. ನಿಯಂತ್ರಿಸಿ ಎಂದರು. ಆದರೆ ಸುಲಭವೇ? ಇನ್ನಷ್ಟು ಸಂಘರ್ಷಕ್ಕೆ ಕಾರಣವಾದೀತೆ? ಈಗಂತೂ ಧಾರ್ಮಿಕ ಮುಖಂಡರು, ಧಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳ ರಕ್ಷಣೆ ಇರುವಾಗ. ಹಾಗೇ ಈ ನೈತಿಕ ಪೊಲೀಸ್‌ಗಿರಿ ಹುಟ್ಟಲೂ ಕೂಡ ಅನೇಕ ಕಾರಣಗಳಿವೆ. ಜಾತಿ, ಸಂಪ್ರದಾಯ, ಧರ್ಮ ಹಾಗೂ ನೈತಿಕ ಆಚರಣೆ ಇವುಗಳ ನಡುವಿನ ಭಿನ್ನತೆ ಮತ್ತು ಸಂಘರ್ಷಗಳು ಇವೆಲ್ಲಕ್ಕೆ ಮೂಲ. ಒಂದು ಧರ್ಮದ ಯುವಕ ಮತ್ತೊಂದು ಧರ್ಮೀಯ ಯುವತಿಯ ಜೊತೆ ಪ್ರೀತಿ-ಪ್ರೇಮ, ವೈವಾಹಿಕ ಸಂಬಂಧಗಳು ನಡೆಯುವುದು, ಅವರ ವಿಭಿನ್ನ ಆಹಾರ ಪದ್ದತಿ, ಆಚರಣೆಗಳು, ವಿಶಿಷ್ಟ ಪ್ರಾಣಿ ಹತ್ಯೆ, ಮತಾಂತರ ಪ್ರಕ್ರಿಯೆ ಇವೆಲ್ಲ ಒಂದಕ್ಕೊಂದು ಸೇರಿಕೊಂಡು ಸಂಘರ್ಷ ಹುಟ್ಟು ಹಾಕಿದ್ದು, ಅದೀಗ ವೈಷ್ಯಮದ ರೂಪಕ್ಕೆ ಸಮಾಜದಲ್ಲಿ ತಿರುಗಿದೆ. ಧರ್ಮ ಮತ್ತು ಜಾತಿಗಳ ನಡುವಿನ ವೈಷಮ್ಯ ಪ್ರತ್ಯೇಕ ರಕ್ಷಣಾ ಪಡೆ ರಚಿಸಿಕೊಳ್ಳುವ ಹಂತ ತಲುಪಿರುವುದೇ ದೇಶಾದ್ಯಂತ ಈ ಮಾರಲ್ ಪೊಲೀಸಿಂಗ್‌ಗೆ ಕಾರಣವಾಗಿದೆ. ವ್ಯಾಲಂಟೈನ್ ಡೇ ಆಚರಣೆ, ಶಾಲೆ ಕಾಲೇಜುಗಳ ಉತ್ಸವ, ಮಕ್ಕಳ ಪಾರ್ಟಿ, ಎರಡು ಧರ್ಮೀಯರ ನಡುವೆ ಲವ್, ಸಾರ್ವಜನಿಕ ಹಬ್ಬ ಹರಿದಿನಗಳಲ್ಲಿ ಆಚರಣೆಗಳ ನಡುವಿನ ಭಿನ್ನತೆ ಇತ್ಯಾದಿಗಳು ಸೇರಿಕೊಂಡು ಇಂದು ಕರ್ನಾಟಕದ ಮಟ್ಟಿಗೆ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಮಡಿಕೇರಿ, ಚಿಕ್ಕಮಗಳೂರು ಬಾಗಲಕೋಟೆ, ಶಿವಮೊಗ್ಗ, ಮೊದಲಾದ ಭಾಗಗಳಲ್ಲಿ ಕೋಮು ಸಂಘರ್ಷ, ವೈಷಮ್ಯಕ್ಕೆ ಕಾರಣವಾದವು. ಹೋಳಿ ಆಚರಿಸಿದರೆ ಗಲಾಟೆ, ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ, ಬಕ್ರೀದ್, ಮೊಹರಮ್, ಕ್ರಿಸ್‌ಮಸ್, ಇತ್ತೀಚಿಗಂತೂ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಜಾತ್ರೆ, ಉರುಸ್ ಎಲ್ಲಕ್ಕೂ ಕೂಡ ದೊಂಬಿ ಗಲಾಟೆಗಳೇ ನಡೆಯುವಂತಾಯಿತು. ಹಾಗಂತ ಇದೇ ಕಾರಣಕ್ಕಾಗಿಯೇ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಇತ್ಯಾದಿ ಶಾಸನಗಳು ಹಿಂದಿನ ಸರ್ಕಾರದ ಶಾಸನ ಸಭೆಯಲ್ಲಿ ಅಂಗೀಕಾರಗೊಂಡವು. ಹಿಜಾಬ್ ವಿವಾದವಂತೂ ಸರ್ವೋಚ್ಚ ನ್ಯಾಯಾಲಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ. ಕಾನೂನು ಮೀರಿ ನಡೆಯಬಾರದು; ಆಕ್ಷೇಪಗಳೇನಿದ್ದರೂ ಕೂಡ ಅದನ್ನು ಕಾನೂನು ರೀತಿ ಪರಿಹರಿಸಿಕೊಳ್ಳಬೇಕು ಎನ್ನುವುದು ಸರಿ. ಆದರೆ ಕಾನೂನು ಪಾಲಕರೇ ನಿಷ್ಕ್ರಿಯರಾದರೆ, ಅಥವಾ ಯಾವುದೋ ಒತ್ತಡಕ್ಕೆ ಮಣಿದರೆ? ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಲ್ಲ? ನಮ್ಮ ಸಮಾಜವನ್ನು ಕಾಪಾಡಿಕೊಳ್ಳಬೇಕಲ್ಲ ಎನ್ನುವ ವಾದ ನೈತಿಕ ಪೊಲೀಸ್‌ಗಿರಿ ಪ್ರತಿಪಾದಕರದ್ದು. ಇದಕ್ಕಾಗಿಯೇ ಶ್ರೀರಾಮ ಸೇನೆ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಇತ್ಯಾದಿ ಸಂಘಟನೆಗಳು ಹುಟ್ಟಿಕೊಂಡಂತೆ, ಮುಸ್ಲಿಂ ಧರ್ಮೀಯ ಅನ್ಯ ಸಂಘಟನೆಗಳೂ ಕೂಡ ತಲೆ ಎತ್ತಿವೆ. ಎಸ್‌ಡಿಪಿಐ, ಪಿಎಫ್‌ಐ, ಲವ್ ಜಿಹಾದ್ ಇತ್ಯಾದಿಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸಿವೆ. ಸಮಾಜದಲ್ಲಿ ತ್ವೇಷಮಯ ಸ್ಥಿತಿ ಸೃಷ್ಟಿಸಿವೆ. ಈಗಂತೂ ಸಿನೆಮಾ, ಚಿತ್ರಕಲೆ, ಡ್ರೆಸ್, ಯೂನಿಫಾರ್ಮ್, ಪಠ್ಯ, ವ್ಯಾಪಾರಗಳಲ್ಲೂ ಕೂಡ ನೈತಿಕ ಪೊಲೀಸಿಂಗ್ ಸೋಂಕು ಹಬ್ಬಿದೆ. ಇದನ್ನು ಅರಿತೂ ಕೆಲವರು ಕುಮ್ಮಕ್ಕು ನೀಡುವಂತೆ, ಚಪ್ಪಲಿಯಲ್ಲಿ ದೇವರ ಚಿತ್ರ, ದೇವತೆಗಳ ನಗ್ನ, ಅಶ್ಲೀಲ ಚಿತ್ರ, ಸಿನಿಮಾಗಳಲ್ಲಿ ಅವಹೇಳನ ಅಥವಾ ಅಸಭ್ಯತೆ ಪ್ರದರ್ಶನ ಇತ್ಯಾದಿ ಉದ್ದೇಶಪೂರ್ವಕ ಎಂಬಂತೆ ಢಾಳಾಗಿ ಗೋಚರಿಸಿದವು. ಹಿಂದೂ ಧರ್ಮದ ಜಾತ್ರೆ ಉತ್ಸವಗಳಲ್ಲಿ ವ್ಯಾಪಾರ ನಡೆಸಿದ ಅನ್ಯ ಧರ್ಮೀಯರ ವಿರುದ್ಧ ದಾಂಧಲೆ ಎಬ್ಬಿಸಿದ ಘಟನೆಗಳು ಇತ್ತೀಚೆಗೆ ನಡೆದವು. ಪಾರ್ಕ್ಗಳಲ್ಲಿ ಎರಡು ಕೋಮಿನ ಯುವಕ ಯುವತಿ ಮಾತನಾಡಿದ್ದಕ್ಕೂ ದೊಡ್ಡ ಅವಾಂತರ ನಡೆದವು. ಸಾನಿಯಾ ಮಿರ್ಜಾ ಆಟದ ವೇಳೆ ತೊಡುವ ಸ್ಕರ್ಟ್ ಬಗ್ಗೆ ಆ ಧರ್ಮದ ಮಂದಿ ಫತ್ವಾ ಹೊರಡಿಸುವ ಮಟ್ಟಕ್ಕೆ ಹೋದರು. ಧಾರ್ಮಿಕ ಬೋಧನೆಗಳು ಔಷಧ, ಪ್ರಸಾದ ಇತ್ಯಾದಿಗಳ ಮೇಲೂ ಜಾತಿ ಧರ್ಮದ ಟ್ರೇಡ್ ಮಾರ್ಕ್ ಬೀಳುವಂತೆ ಮಾಡಿದವು. ತಮ್ಮ ಧರ್ಮ ಸಂಪ್ರದಾಯ, ಪರಂಪರೆ, ತಮ್ಮ ಜನರ ರಕ್ಷಣೆಗಷ್ಟೇ ಸೀಮಿತವಾಗಿದ್ದರೆ, ಬಹುಶಃ ಇಂದು ಜನಸಾಮಾನ್ಯ ಅಥವಾ ಸರ್ಕಾರ ನೈತಿಕ ಪೊಲೀಸ್‌ಗಿರಿಯ ಬಗ್ಗೆ ಮಾತನಾಡುತ್ತಿರಲಿಲ್ಲವೇನೋ? ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಹಫ್ತಾ ವಸೂಲಿ, ಬೆದರಿಕೆ, ಹತ್ಯೆ, ಗೂಂಡಾಗಿರಿ ಎಲ್ಲವೂ ಅತಿರೇಕಕ್ಕೆ ಹೋಗಿರುವುದರಿಂದ ಮರ್ಯಾದಾ ಹತ್ಯೆಗಿಂತಲೂ ಅತೀ ಭೀಭತ್ಸ ಘಟನೆಗಳು ರಾಜ್ಯದಲ್ಲಿ ನಡೆದವು ಕೆಲವು ಕುಟುಂಬಗಳು ಆತ್ಮಹತ್ಯೆಗೆ ಮೊರೆ ಹೋಗಿರುವುದು, ಹಲ್ಲೆ, ಹಿಂಸೆ ವ್ಯಾಪಕ ದೂರುಗಳೂ ಕೇಳಿಬರುವಂತಾಗಿದೆ. ನೈತಿಕ ಪೊಲೀಸ್‌ಗಿರಿ ಪರಾಕಾಷ್ಠೆ ತಲುಪಿದ್ದು ಗೋಸಾಗಣೆ ನಿಷೇಧ ಮತ್ತು ಕಸಾಯಿಖಾನೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ನಡೆದ ಅವಾಂತರಗಳಲ್ಲಿ. ಒಂದು ಪ್ರದೇಶದಿಂದ ಇನ್ನೊಂದು ಕಡೆ ಗೊಡ್ಡು ದನ ಮಾರಾಟ, ಸಾಗಣೆವೇಳೆ ಘರ್ಷಣೆ ನಡೆಯುವಂತಾಯಿತು. ಪೊಲೀಸ್ ಇಲಾಖೆ ಸಂಪೂರ್ಣ ನಿಸ್ಸಹಾಯಕವಾಯಿತು. ವಿಶೇಷವಾಗಿ ಕೇರಳ ಕರ್ನಾಟಕ, ಗೋವಾ ಕರ್ನಾಟಕ, ಮಹಾರಾಷ್ಟ್ರ ಕರ್ನಾಟಕ ಈ ಗಡಿ ಭಾಗಗಳಲ್ಲಿ ಮಾಂಸ ಮಾರಾಟ ಸಾಕಷ್ಟು ದಾಂಧಲೆ ಸೃಷ್ಟಿಸಿದವು. ಕಸಾಯಿ ಖಾನೆಗಳ ಮೇಲೆ, ಉದ್ಯಮಿಗಳ ಮೇಲೆ ಸಂಘಟನೆಗಳು ದಾಳಿ ನಡೆಸಿ ಘರ್ಷಣೆಗೆ ಇಳಿದವು. ಅದೇ ವ್ಯವಹಾರ ಕುದುರಿದಾಗ ಎಲ್ಲ ಮಾಮೂಲಿಯಾದವು!. ಗೋ ಮಾಂಸ ರಫ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ದಾಖಲೆ ವ್ಯವಹಾರವಾಗಿವೆ! ಗೋ ಹತ್ಯೆ ನಿಷೇಧದ ನಂತರ ತೀರ ತೊಂದರೆಗೆ ಒಳಗಾದವ ರೈತ. ವಯಸ್ಸಾದ ದನಗಳ ಸಾಕಲೂ ಆಗದ ದಾರುಣ ಸ್ಥಿತಿಯಲ್ಲಿ ರೈತನಿದ್ದರೆ, ಸಾಗಾಟ ಮತ್ತು ಮಾರಾಟಕ್ಕೆ ಪರವಾನಗಿಯೇ ಇಲ್ಲದೇ ಕೊಂಡೊಯ್ಯುವಾತ ಸಮಸ್ಯೆಯನ್ನು ಎದುರಿಸಬೇಕಾಯಿತು. ದಕ್ಷಿಣ ಕನ್ನಡದಲ್ಲಿ ಗೋ ಸಾಗಣೆ ಸಂದರ್ಭದಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದಾಗ ಸರಣಿ ಅಪಘಾತ ಮತ್ತು ಹಲ್ಲೆಗಳು ನಡೆದವು. ಪ್ರಶ್ನಿಸುವವರು ಧರ್ಮ ವಿರೊಧಿಗಳು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಬಂದರೆ, ಮತೀಯ ಗಲಭೆಗಳನ್ನು ಹುಟ್ಟು ಹಾಕಿ ಅಶಾಂತಿ ಸೃಷ್ಟಿಸಿ ರಾಷ್ಟ್ರವಿರೋಧಿ ಅಥವಾ ಭಯೋತ್ಪಾದಕ ಶಕ್ತಿಗಳ ಸಂಪರ್ಕ ಹೊಂದಿರುವ ಪ್ರಕರಣಗಳೂ ಬೆಳಕಿಗೆ ಬಂದವು. ನೈತಿಕ ಪೊಲೀಸ್‌ಗಿರಿ ಇನ್ನು ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿಗಳು ಸೂಚನೆಯ ಹಿಂದೆ ಇತ್ತೀಚಿಗೆ ನಡೆದ ಚುನಾವಣೆಯ ಕೆಮಿಸ್ಟ್ರಿ ಕಾರಣ. ಕಾಂಗ್ರೆಸ್ ನೈತಿಕ ಪೊಲೀಸ್‌ಗಿರಿ ಅಥವಾ ಕೇಸರಿಕರಣವನ್ನು ವಿರೋಧಿಸಿದ್ದರಿಂದಲೇ ಅದಕ್ಕೆ ದೊರಕಿದ ಮತ ಬೆಂಬಲವೇ ಕಾರಣ. ನೈತಿಕ ಪೊಲೀಸ್‌ಗಿರಿ ವಿರೋಧಿಸಿದಾಗ ಎಲ್ಲ ಸಮಾಜ ಸಂಘಟನೆಗಳು ಒಂದಾದವು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧವನ್ನು ಪ್ರಸ್ತಾಪಿಸುತ್ತಿದ್ದಂತೆಯೇದೇಶಭಕ್ತ’ ಸಂಘಟನೆ ನಿಷೇಧ ಹಾಗೂ ಮುಸ್ಲಿಂ ತುಷ್ಟೀಕರಣಕ್ಕೆ ಮಾಡಲಾಗುತ್ತಿದೆ ಎಂದು ಬೊಬ್ಬೆ ಹೊಡೆಯಲಾಯಿತು. ಇದೇ ಚುನಾವಣಾ ವಿಷಯವಾಗಿ ಸ್ವತಃ ಪ್ರಧಾನಿ ಮೋದಿಯವರೇ ಎಲ್ಲೆಡೆ ಮತ ಹಾಕುವಾಗ ಜೈ ಬಜರಂಗಬಲಿ ಎಂದು ಮತ ಹಾಕಿ ಎಂದರು. ಪ್ರಚಾರದ ಪ್ರತಿ ಭಾಷಣದಲ್ಲೂ ಜೈ ಬಜರಂಗಬಲಿ ಎಂದು ಘೋಷಣೆ ಕೂಗಿಸಿದರು. ಇಷ್ಟಕ್ಕೂ ಆದ ಪರಿಣಾಮ ಅನ್ಯ ಸಮುದಾಯವೆಲ್ಲ ಒಕ್ಕಟ್ಟಾಯಿತು. ಮತಬ್ಯಾಂಕ್ ಕ್ರೊಢೀಕರಣಗೊಂಡಿತು. ಕಾಂಗ್ರೆಸ್ ಗೆಲುವಿಗೆ ಇದೂ ಕಾರಣವಾಯಿತು.
ದೇಶದ ಹಲವೆಡೆ ನೈತಿಕ ಪೊಲೀಸ್‌ಗಿರಿ ಅವಾಂತರ- ವಿವಾದಗಳು ಹುಟ್ಟಿಕೊಂಡಿವೆ. ಸರ್ವೋಚ್ಚ ನ್ಯಾಯಾಲಯದವರೆಗೂ ವಿಷಯ ಹೋಗಿದೆ. ಹಲವು ಹೈಕೋರ್ಟಗಳು ಕಾನೂನಿನಲ್ಲಿ ಇದಕ್ಕೆ ಅವಕಾಶವೇ ಇಲ್ಲ, ಶಿಕ್ಷಿಸಿ ಎಂದು ಸ್ಪಷ್ಟ ನಿರ್ದೇಶನವನ್ನು ನೀಡಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕು ಬಾಧ್ಯತೆ ಪ್ರಶ್ನಿಸುವ ಅಧಿಕಾರ ಕೊಟ್ಟವರು ಯಾರು ಎಂದು ಕೇಳಿವೆ.
ಇಷ್ಟಂತೂ ನಿಜ. ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಅಥವಾ ಸೂಚಿಸಿದ ನಿರ್ಧಾರದಿಂದ ನೈತಿಕ ಪೊಲೀಸ್‌ಗಿರಿ ನಿಯಂತ್ರಣಕ್ಕೆ ಬರುತ್ತದೆ ಎಂದು ಅಭಿಪ್ರಾಯಪಡುವುದು ಕಷ್ಟಸಾಧ್ಯ. ಆದರೆ ಇನ್ನಷ್ಟು ಸಂಘರ್ಷಗಳಿಗೂ ಇದು ಕಾರಣವಾದೀತೇನೋ? ನೈತಿಕತೆ ಮತ್ತು ಧರ್ಮ ಎಲ್ಲೆ ಮೀರಿದರೆ ಇಂತಹ ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ ಎಂಬುದನ್ನು ಮರೆಯದಿರೋಣ. ಶಾಂತಿಯ ತೋಟದಲ್ಲಿ ಶಾಂತಿ ಹುಡುಕುವ ಪ್ರಯತ್ನದಲ್ಲಿ ತಪ್ಪಿಲ್ಲವಲ್ಲ…

Previous articleವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ತಪ್ಪಿದ ದುರಂತ
Next articleಕಾರು-ದ್ವಿಚಕ್ರವಾಹನ ಮಧ್ಯೆ ಡಿಕ್ಕಿ: ಕಾರ್ಮಿಕ ಸಾವು