ಶಿವಕುಮಾರ ಹಳ್ಯಾಳ
ಧಾರವಾಡ ಕೃಷಿ ಮೇಳ 2025ಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರತಿ ವರ್ಷ ನಡೆಯುವ ಕೃಷಿ ಮೇಳದಲ್ಲಿ ಹೊಸ ಬಗೆಯ ತಳಿಗಳನ್ನು ಸಂಶೋಧಿಸಿ ರೈತರಿಗೆ ಪರಿಚಯಿಸುವುದು ವಾಡಿಕೆ. ಅದರಂತೆ ಈ ಬಾರಿಯೂ ಕೃಷಿ ವಿಶ್ವವಿದ್ಯಾಲಯ 10 ವಿವಿಧ ಬಗೆಯ ಹೊಸ ತಳಿ ಪರಿಚಯಿಸುತ್ತಿದೆ.
ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳ-2025 ಅನ್ನು ಸೆಪ್ಟೆಂಬರ್ 13 ರಿಂದ 16 ರವರೆಗೆ ‘ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’ ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದೆ. ಸುಮಾರು 20 ಲಕ್ಷ ರೈತರು ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ.
ಹೊಸ ತಳಿಗಳು: ಮೇಳದಲ್ಲಿ ನವಣೆ ತಳಿ ಡಿಎಫ್‌ಟಿ-3 (ಡಿಎಚ್ಎಫ್‌ಟಿ 201-3), ಸಾಮೆ ತಳಿ ಡಿಎಲ್‌ಟಿಎಂ-5 (ಡಿಎಲ್‌ಎಂ 22-3), ಉದಲು ತಳಿ ಡಿಬಿಆರ್‌ಬಿಎಂ -5 (ಡಿಬಿಎಂ47-3), ರಾಗಿ ತಳಿ ಡಿಎಫ್‌ಎಂ-3 (ಡಿಎಫೆಂ 19-3), ಹಾರಕ ತಳಿ ಡಿಕೆಎಂ-1 (ಡಿಕೆಎಂ 350-2), ಬರಗು ತಳಿ ಡಿಪಿಆರ್ ಎಂ -5 (ಡಿಎಚ್‌ಪಿಎಂ 60-4)/(ಪಿಎಂವಿ-466), ಎಳ್ಳು ತಳಿ ಡಿಎಸ್‌ಎಂ 4 (ಡಿಎಸ್-51), ಸೂರ್ಯಕಾಂತಿ ತಳಿ ಆರ್‌ಎಸ್‌ಎಫ್‌ಎಚ್-700, ಬೆಂಡೆ ತಳಿ ಡಿಓವಿ-1 (ಬಿ-2105), ಟೊಮ್ಯಾಟೊ ಡಿಟಿಎಂವಿ -5 (ಡಿಟಿಓವಿ -5) ಆವಿಷ್ಕಾರಗೊಂಡ ತಳಿಗಳು.
ಕಡಿಮೆ ಅವಧಿ, ಹೆಚ್ಚು ಇಳುವರಿ, ಕೀಟ ಬಾಧೆಯಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಿನ ರೋಗ ನಿರೋಧಕ ಶಕ್ತಿ ಸೇರಿದಂತೆ ವಿಷ ವಿವಿಧ ಗುಣಗಳನ್ನು ಹೊಂದಿರುವ ಈ ತಳಿಗಳು ರೈತ ಸ್ನೇಹಿಯಾಗಿವೆ. ‘ರೈತರ ಆರ್ಥಿಕ ಸ್ವಾಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿವೆ ಎನ್ನುತ್ತಾರೆ ಕೃಷಿ ವಿವಿ ವಿಜ್ಞಾನಿಗಳು.
ಸೆ. 13 ರಿಂದ 16 ರವರೆಗೆ ದಿನ ನಡೆಯಲಿರುವ ಕೃಷಿ ಮೇಳ 2025ಕ್ಕೆ ಕೃಷಿ ವಿಶ್ವವಿದ್ಯಾಲಯ ಸಜ್ಜಾಗಿದೆ. ‘ರೈತರ ವಿಶ್ವವಿದ್ಯಾಲಯ’ ಎಂದೇ ಪ್ರಖ್ಯಾತಿ ಪಡೆದಿರುವ ವಿವಿ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ರೈತರನ್ನು ಸ್ವಾಗತಿಸಲು ಸಜ್ಜಾಗಿದೆ.
ಏನಿದೆ ಈ ಬಾರಿಯ ಮೇಳದಲ್ಲಿ?
ವಿಸ್ತಾರವಾದ ಪ್ರದರ್ಶನ: 700ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸಲಾಗುತ್ತದೆ.
ಕೃಷಿ ಸಂಪನ್ಮೂಲಗಳು: ಉತ್ತಮ ಗುಣಮಟ್ಟದ ಬೀಜಗಳು, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಲಭ್ಯವಿರಲಿವೆ.
ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ: ಸಣ್ಣ ಹಿಡುವಳಿದಾರರಿಗೆ ಸೂಕ್ತವಾದ ಉಪಕರಣಗಳಿಂದ ಹಿಡಿದು ಬೃಹತ್ ಯಂತ್ರಗಳವರೆಗೆ, ಕೃಷಿ ಕಾರ್ಯಗಳನ್ನು ಸುಲಭಗೊಳಿಸುವ ನೂತನ ತಂತ್ರಜ್ಞಾನಗಳನ್ನು ಇಲ್ಲಿ ಕಾಣಬಹುದು.
ತಜ್ಞರ ಸಲಹೆ: ಕೃಷಿ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವಿವಿಧ ವಿಷಯಗಳ ತಜ್ಞರು ಉಪಸ್ಥಿತರಿರುತ್ತಾರೆ. ಮುಂಗಾರು ಮತ್ತು ಹಿಂಗಾರು ಬೆಳೆಗಳ ಕುರಿತು ರೈತರು ತಮ್ಮ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ಮೇಳವು ರೈತರಿಗೆ ನೂತನ ಕೃಷಿ ಪದ್ಧತಿಗಳು, ಮಾರುಕಟ್ಟೆ ಮಾಹಿತಿ ಮತ್ತು ತಂತ್ರಜ್ಞಾನದ ಕುರಿತು ಸಮಗ್ರ ಅರಿವನ್ನು ಒದಗಿಸುವ ಉತ್ತಮ ವೇದಿಕೆಯಾಗಿದೆ.