ಮೈಸೂರು: ನಿಯಮ ಗಾಳಿಗೆ ತೂರಿ ರಸ್ತೆ ಮುಚ್ಚಿ, ರೈತರಿಗೆ, ಗ್ರಾಮಸ್ಥರಿಗೆ ಸಂಕಟ ತಂದ ಕಂಪನಿ

0
41

ಮೈಸೂರು ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ತೆಂಡೇಕೆಯ ಬಳಿಯಿರುವ ಮೆಗಾ ಫುಡ್ ಪೇವರಿಚ್ ಕಂಪನಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮೀಣ ರಸ್ತೆಯನ್ನು ಮುಚ್ಚಿ ಗ್ರಾಮಸ್ಥರಿಗೆ ತೊಂದರೆ ನೀಡಿರುವುದಲ್ಲದೆ ಸರ್ಕಾರಿ ಕಟ್ಟೆಯನ್ನು ಅತಿಕ್ರಮಿಸಿ ದುರ್ವತನೆ ಪ್ರದರ್ಶಿಸಿದೆ. ರೈತರು ಮತ್ತು ಸುತ್ತಮುತ್ತಲ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಫೇವರಿಚ್ ಫುಡ್ ಕಂಪನಿಯ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಶಾಸಕ ಹೆಚ್.ಟಿ.ಮಂಜು ಆಗ್ರಹಿಸಿದರು.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮೈಸೂರು –ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಿಂದ ಬಣ್ಣೇನಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆಯನ್ನು ನಿರ್ಮಿಸಲಾಗಿದೆ. ಸದರಿ ರಸ್ತೆಯಲ್ಲಿ ಬಣ್ಣೇನಹಳ್ಳಿ ಗ್ರಾಮಸ್ಥರು ನೂರಾರು ವರ್ಷಗಳಿಂದ ಸಂಚರಿಸುತ್ತಿದ್ದಾರೆ. ಸಣ್ಣ ಕೈಗಾರಿಕೆಗಳ ಅಭಿವೃದ್ದಿಯ ದೃಷ್ಠಿಯಿಂದ ಕೆ.ಐ.ಡಿ.ಬಿ ವತಿಯಿಂದ ಸುಮಾರು 300ಕ್ಕೂ ಅಧಿಕ ಎಕರೆಯಷ್ಟು ಭೂಮಿಯನ್ನು ಭೂ ಸ್ವಾಧೀನ ಮಾಡಿಕೊಂಡು ಆಹಾರ ಉತ್ಪನ್ನಗಳ ಘಟಕ ಮತ್ತು ಶಿಥಲೀಕರಣ ಘಟಕ ನಿರ್ಮಾಣಕ್ಕಾಗಿ ಮೆಗಾ ಫೇವರಿಚ್ ಫುಡ್ ಕಂಪನಿಗೆ ಭೂಮಿ ನೀಡಲಾಗಿತ್ತು.

ಆದರೆ, ಕಳೆದೊಂದು ದಶಕದ ಹಿಂದೆ ಬಣ್ಣೇನಹಳ್ಳಿಎಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಮೆಗಾ ಫೇವರಿಚ್ ಫುಡ್ ಕಂಪನಿ ಬಣ್ಣೇನಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಕಟ್ಟೆಯನ್ನು ಅನಧಿಕೃತವಾಗಿ ಮುಚ್ಚಿದೆಯಲ್ಲದೆ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ಸಾರ್ವಜನಿಕರಿಗೆ ಓಡಾಡದಂತೆ ಅಡ್ಡಲಾಗಿ ತಡೆಗೋಡೆಯನ್ನು ನಿರ್ಮಿಸಿದೆ. ಅಕ್ರಮವಾಗಿ ರಸ್ತೆ ಮುಚ್ಚಿ ಗ್ರಾಮ್ಭಿಣರಿಗೆ ತೊಂದರೆ ನೀಡಿರುವುದಲ್ಲದೆ ಸರ್ಕಾರಿ ಕಟ್ಟೆಯನ್ನು ಅತಿಕ್ರಮಿಸಿ ಅಲ್ಲಿಗೆ ತನ್ನ ಕಲುಷಿತ ತ್ಯಾಜ್ಯ ನೀರನ್ನು ಬಿಡುತ್ತಿದೆ. ಇದರಿಂದ ಸರ್ಕಾರಿ ಕಟ್ಟೆಸಂಪೂರ್ಣ ಕಲುಷಿತಗೊಂಡಿದ್ದು ಕಟ್ಟೆಯ ನೀರು ಜನ-ಜಾನುವಾರುಗಳ ಬಳಕೆಗೆ ಯೋಗ್ಯವಾಗಿಲ್ಲ.

ಈ ಬಗ್ಗೆ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ರಾಜ್ಯ ವಿಧಾನ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದರಲ್ಲದೆ ಕಳೆದ ವಾರ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಹೇಮಗಿರಿ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ಮತ್ತು ಮೆಗಾ ಫುಡ್ ಫೇವರಿಚ್ ಕಂಪನಿಯ ಕಲುಷಿತ ನೀರನ್ನು ಪ್ರದರ್ಶಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೇಮಗಿರಿ ಸಕ್ಕರೆ ಕಾರ್ಖಾನೆಯ ಹಾರುಬೂದಿ ಸಮಸ್ಯೆಯ ಬಗ್ಗೆಯೂ ಶಾಸಕರು ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದರು. ಶಾಸಕರ ಆಕ್ರೋಶದ ಹಿನ್ನೆಯಲ್ಲಿಂದು ಬೆಂಗಳೂರಿನಿಂದ ಕೆ.ಐ.ಡಿ.ಬಿ ಅಧಿಕಾರಿಗಳು ಬಣ್ಣೇನಹಳ್ಳಿಯ ಬಳಿಯಿರುವ ಮೆಗಾ ಫುಡ್ ಫೇವರಿಚ್ ಕಂಪನಿ ಅತಿಕ್ರಮಿಸಿ ನಿರ್ಮಿಸುತ್ತಿರುವ ಸಾರ್ವಜನಿಕ ರಸ್ತೆ ಮತ್ತು ಕಲುಷಿತ ನೀರಿನಿಂದ ಆವೃತ್ತವಾಗಿರು ಕಟ್ಟೆಯ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕರು ಫುಡ್ ಪಾರ್ಕ್‍ನವರಿಂದ ಆಗಿರುವ ಸಾರ್ವಜನಿಕ ರಸ್ತೆಯ ಅತಿಕ್ರಮಣ ಮತ್ತು ಕಲುಷಿತ ನೀರಿನ ಸಮಸ್ಯ ಬಗ್ಗೆ ನಾನು ಕಳೆದು ಒಂದು ವರ್ಷದ ಹಿಂದೆಯೇ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಶಾಸನ ಸಭೆಯಲ್ಲಿಯೂ ಇದರ ಬಗ್ಗೆ ಮಾತನಾಡಿದ್ದೇನೆ. ನಾನು ಪತ್ರ ಬರೆದು ಒಂದು ವರ್ಷದ ಅನಂತರ ನೀವು ಪರಿಶೀಲನೆ ಬಂದಿದ್ದೀರಿ. ಬಣ್ಣೆನಹಳ್ಳಿ ಗ್ರಾಮದ ಸರ್ವೆ ನಂಬರ್ 21 ರಲ್ಲಿ ಮೈಸೂರು ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಅಶೋಕನಗರದಿಂದ ಬಣ್ಣೇನಹಳ್ಳಿಗೆ ಹೋಗುವ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಲು ಸರ್ಕಾರದಿಂದ ನಾಲ್ಕು ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗ ರಸ್ತೆಯ ಸೇವಾ ರಸ್ತೆಯನ್ನು ಫೇವರಿಜ್ ಮೆಗಾ ಫುಡ್ ಫ್ಯಾಕ್ಟರಿ ಅವರು ಭಾಗಶಃ ಅತಿಕ್ರಮಿಸಿಕೊಂಡಿದ್ದಾರೆ. ಜೊತೆಗೆ ಫ್ಯಾಕ್ಟರಿಯಿಂದಹೊರ ಬರುವ ಮಾಲಿನ್ಯ ತ್ಯಾಜ್ಯ ನೀರನ್ನು ಸಮೀಪದ ಕೆರೆಕಟ್ಟೆಗಳಿಗೆ ಹರಿಸಲಾಗುತ್ತಿದೆ ಎಂದರು.

ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಿಸಿ ಜನ ಸಂಚಾರ ಮಾಡದಂತೆ ತಡೆಗೋಡೆ ನಿರ್ಮಿಸಿದ್ದರೂ ಅದನ್ನು ತೆರವು ಮಾಡಿ ಕಂಪನಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಸ್ವಾತ್ಯಂತ್ರ ಬಂದ ಅನಂತರ ರಾಜ್ಯದಲ್ಲಿ ಒಂದೇ ಒಂದು ಹೊಸ ಕೆರೆಯನ್ನು ನಿರ್ಮಿಸಿಲ್ಲ. ಆದರೆ ನಮ್ಮ ಹಿರಿಯರು ಕಟ್ಟಿದ ಕೆರೆಗಳನ್ನು ನಾಶ ಮಾಡಲಾಗುತ್ತಿದೆ. ಕೆರೆ ಕಟ್ಟೆಗಳನ್ನು ಯಾವುದೇ ಕಾರಣಕ್ಕೂ ನಾಶ ಮಾಡದಂತೆ ಹಲವಾರು ಬಾರಿ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಆದರೆ ಫೇವರಿಚ್ ಕಂಪನಿ ಇಲ್ಲಿ ಇದ್ದ ಕಟ್ಟೆಯನ್ನು ಮುಚ್ಚಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ. ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕೇ ಹೊರತು ಯಾವುದೂ ಒಂದು ಕಂಪನಿಯ ಪರ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ನಾನು ಯಾವುದೇ ಕಾರ್ಖಾನೆಗಳಿಗೂ ವಿರೋಧಿಯಲ್ಲ. ಆದರೆ ಕಾರ್ಖನೆ ನಡೆಸುವವರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ತಮ್ಮ ಸುತ್ತಲ ಜನ ಸಮುದಾಯಕ್ಕೆ ಯಾವುದೇ ರೀತಿಯ ಕಿರುಕುಳ ನೀಡಬಾರದೆಂದರು. ಸ್ಥಳದಲ್ಲಿ ಹಾಜರಿದ್ದ ನೂರಾರು ಗ್ರಾಮಸ್ಥರು ಫೇವರಿಚ್ ಕಂಪನಿಯ ವಿರುದ್ದ ಆರೋಪಗಳ ಸುರಿಮಳೆಯನ್ನೆ ಸುರಿಸಿದರು.

 ಸರ್ವಾಧಿಕಾರಿಯಂತೆ ಜನರ ಮೇಲೆ ದಬ್ಬಳಿಕೆ ಮಾಡುತ್ತಿರುವ ಫುಡ್ ಪಾರ್ಕ್ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರೆ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ಗ್ರಾಮಸ್ಥರಿಗೆ ಆಗಿರುವ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸುತ್ತಾ ಶಾಸಕರ ಮುಂದೆ ಮೂಕ ಪ್ರೇಕ್ಷಕರಾಗಿ ನಿಂತರು. ತೊಂದರೆಗಳನ್ನು ನಿವಾರಿಸುವ ಸಂಬಂಧ ಎಲ್ಲಾ ಇಲಾಖೆಗಳ ತಜ್ಞರನ್ನು ಒಳಗೊಂಡು ತಂಡದೊಂದಿಗೆ ಇನ್ನು ಎರಡು ವಾರದಲ್ಲಿ ಸಮಗ್ರ ತನಿಖೆ ಮಾಡಿ ಇಲ್ಲಿ ಆಗಿರುವ ಅನ್ಯಾಯಕ್ಕೆ ಪರಿಹಾರವನ್ನು ಖಂಡಿತ ಕೊಡುತ್ತೇವೆ ಮತ್ತು ಫೇವರಿಚ್ ಕಂಪನಿಯ ನಿಯಮಗಳ ಉಲ್ಲಂಘನೆ, ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವುದು ಮತ್ತು ಸರ್ಕಾರಿ ಕಟ್ಟೆಯನ್ನು ಅತಿಕ್ರಮಿಸಿ ಕಲುಷಿತಗೊಳಿಸಿರುವ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿಯನ್ನು ನೀಡುತ್ತೇವೆ ಎಂದು ಅಧಿಕಾರಿಗಳು ಸ್ಥಳದಲ್ಲಿದ್ದ ಶಾಸಕ ಹೆಚ್.ಟಿ.ಮಂಜು ಮತ್ತು ಸಾರ್ವಜನಿಕರಿಗೆ ಭರವಸೆ ನೀಡಿದರು.

Previous articleಧೂಳೆಬ್ಬಿಸಿದ ಕಾಂತಾರ-1 ಟ್ರೇಲರ್: ಕೆಲವೇ ತಾಸಲ್ಲಿ ಕೋಟಿ ಕೋಟಿ ಹಿಟ್ಸ್
Next articleಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ನಿಯಮಕ್ಕೆ ಹೈಕೋರ್ಟ್ ತಡೆ

LEAVE A REPLY

Please enter your comment!
Please enter your name here