ಎರಡು ವರ್ಷದಲ್ಲಿ ಬಳಕೆದಾರರನ್ನು 20 ಕೋಟಿಗೆ ಹೆಚ್ಚಿಸುವ ಗುರಿ – ರೆಪೊ ದರ ಇಳಿಕೆಯಿಂದ ಸಾಲದ ಬಡ್ಡಿ 7.90%ಕ್ಕೆ ಇಳಿಕೆ
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಗ್ರಾಹಕರಿಗೆ ಇನ್ನಷ್ಟು ಸುಗಮ, ವೇಗವಾದ ಮತ್ತು ಸುರಕ್ಷಿತ ಡಿಜಿಟಲ್ ಸೇವೆ ಒದಗಿಸುವ ಉದ್ದೇಶದಿಂದ ಯೋನೊ ಆ್ಯಪ್‌ನ ಹೊಸ ಆವೃತ್ತಿ ‘ಯೋನೊ 2.0’ ಅನ್ನು ಇಂದು (ಸೋಮವಾರ) ಅಧಿಕೃತವಾಗಿ ಬಿಡುಗಡೆ ಮಾಡಲಿದೆ.
ಈ ಕುರಿತು ಮಾತನಾಡಿದ ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ, ಪ್ರಸ್ತುತ ಯೋನೊ ಆ್ಯಪ್‌ಗೆ ಸುಮಾರು 10 ಕೋಟಿ ಬಳಕೆದಾರರು ಇದ್ದು, ಹೊಸ ಆವೃತ್ತಿಯ ಬಿಡುಗಡೆ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆಯನ್ನು 20 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೈಡ್ರೋಜನ್ ಕಾರ್ ಯುಗಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ
ಯೋನೊ 2.0 ವಿಶೇಷತೆಗಳು: ಯೋನೊ 2.0 ಆ್ಯಪ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಗ್ರಾಹಕರಿಗೆ ಉತ್ತಮ ಯೂಸರ್ ಎಕ್ಸ್‌ಪೀರಿಯನ್ಸ್, ವೇಗವಾದ ವ್ಯವಹಾರಗಳು, ಹೆಚ್ಚು ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಬ್ಯಾಂಕ್‌ಗೆ ಬಲಿಷ್ಠ ಹಾಗೂ ಭವಿಷ್ಯೋನ್ಮುಖ ಡಿಜಿಟಲ್ ವೇದಿಕೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಮುಂದಿನ ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಎಲ್ಲಾ ನೂತನ ಹಾಗೂ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಯೋನೊ 2.0 ಸಂಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.
ಸಾಲದ ಬಡ್ಡಿದರದಲ್ಲಿ ಇಳಿಕೆ: ಇನ್ನೊಂದೆಡೆ, ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಹಣಕಾಸು ನೀತಿ ಸಮಿತಿ (MPC) ಇತ್ತೀಚೆಗೆ ರೆಪೊ ದರವನ್ನು ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ, ಎಸ್‌ಬಿಐ ಕೂಡ ಗ್ರಾಹಕರಿಗೆ ಲಾಭವಾಗುವಂತೆ ಕ್ರಮ ಕೈಗೊಂಡಿದೆ. ರೆಪೊ ದರ ಆಧಾರಿತ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿ ಶೇ 7.90ಕ್ಕೆ ಇಳಿಸಲಾಗಿದೆ
ಇದನ್ನೂ ಓದಿ: ಟ್ರೈಫೋಲ್ಡ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದ
ಈ ಪರಿಷ್ಕೃತ ಬಡ್ಡಿದರವು ಸೋಮವಾರದಿಂದಲೇ ಜಾರಿಗೆ ಬರಲಿದ್ದು, ಮನೆ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ರೆಪೊ ಲಿಂಕ್‌ಡ್ ಸಾಲಗಳನ್ನು ಪಡೆದಿರುವ ಗ್ರಾಹಕರಿಗೆ ನೇರ ಲಾಭ ದೊರೆಯಲಿದೆ.
ಡಿಜಿಟಲ್ ಬ್ಯಾಂಕಿಂಗ್‌ಗೆ ಮತ್ತಷ್ಟು ವೇಗ: ಯೋನೊ 2.0 ಬಿಡುಗಡೆ ಹಾಗೂ ಬಡ್ಡಿದರ ಇಳಿಕೆ, ಎಸ್‌ಬಿಐ ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಬಲಪಡಿಸುವ ಜೊತೆಗೆ, ಗ್ರಾಹಕ ಸ್ನೇಹಿ ಬ್ಯಾಂಕ್ ಎಂಬ ತನ್ನ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.























