ಸಂ.ಕ.ಸಮಾಚಾರ, ವಿಜಯಪುರ: ಹೋಬಳಿಯಾದ್ಯಂತ ಉತ್ತಮವಾಗಿ ಮಳೆಯಾಗಿರುವ ಕಾರಣ, ರೈತರು ಹೊಲಗಳಲ್ಲಿ ಬಿತ್ತನೆ ಮಾಡಿರುವ ರಾಗಿ ಪೈರುಗಳು ಉತ್ತಮವಾಗಿ ಬೆಳೆದು ನಿಂತಿದ್ದು ಮಳೆ ಕಡಿಮೆಯಾದರೆ, ಹೊಲಗಳಲ್ಲಿನ ಪೈರುಗಳಿಗೆ ಸೈನಿಕ ಹುಳುಗಳ ಕಾಟ ಶುರುವಾಗಲಿದೆ ಎನ್ನುವ ಆತಂಕದಲ್ಲಿ ರೈತರು, ರಾಗಿ ಹೊಲಗಳಿಗೆ ರಾಸಾಯನಿಕ ಔಷಧಿಗಳು ಸಿಂಪಡಣೆ ಮಾಡಲು ಮುಂದಾಗಿದ್ದಾರೆ.
ಇತ್ತೀಚೆಗೆ ಮೋಡ ಕವಿದ ವಾತಾವರಣವಿದೆ ಆದರೆ, ಮಳೆ ಕಡಿಮೆಯಾಗುತ್ತಿದ್ದಂತೆ ರಾಗಿ ಬೆಳೆಗಳಲ್ಲಿ ಸೈನಿಕ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ರೈತರು, ರಾಗಿ ಹೊಲಗಳಿಗೆ ರಾಸಾಯನಿಕ ಔಷಧಿಗಳು ಸಿಂಪಡಣೆ ಮಾಡುವ ಮೂಲಕ ಬೆಳೆಗಳ ರಕ್ಷಣೆಗೆ ಮುಂದಾಗಿದ್ದಾರೆ.
ಮಳೆ ಕೈಕೊಟ್ಟರೆ, ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಉಷ್ಣಾಂಶ ಜಾಸ್ತಿಯಾದರೆ, ರಾಗಿ ಪೈರುಗಳಿಗೆ ಸೈನಿಕ ಹುಳುವಿನ ಕಾಟದ ಜೊತೆಯಲ್ಲಿ ಬೆಂಕಿ ರೋಗವೂ ತಗಲುವ ಸಾಧ್ಯತೆ ಹೆಚ್ಚಿದೆ. ಹೀಗಾದರೆ ಈ ಬಾರಿ ಬೆಳೆಯು ಕೈಕೊಡುವ ಸಾಧ್ಯತೆಯಿರುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹುಳುಗಳು ಕಂಡುಬಂದ ಕೂಡಲೇ ನೂವಾನ್ ಔಷಧವನ್ನು ಒಂದು ಲೀಟರ್ ನೀರಿಗೆ ಎರಡೂವರೆ ಎಂ.ಎಲ್.ನಷ್ಟು ಹಾಕಿ ಹೊಲಕ್ಕೆ ಸಿಂಪಡಣೆ ಮಾಡಬಹುದು. ಇದಲ್ಲದೆ ಕ್ಲೋರೋಪೈರಿಪಾಸ್ ಔಷಧವನ್ನು ಒಂದು ಲೀಟರ್ ನೀರಿಗೆ 3-4 ಎಂ.ಎಲ್.ನಷ್ಟು ಹಾಕಿ ಸಿಂಪಡಣೆ ಮಾಡಬೇಕೆಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈತ ಮುನಿರಾಜು ಮಾತನಾಡಿ, “ರಾಗಿ ಬೆಳೆ ರಾಸಾಯನಿಕ ಔಷಧಿಗಳಿಂದ ಮುಕ್ತವಾಗಿತ್ತು. ಎಲ್ಲ ಬೆಳೆಗಳಿಗೂ ಔಷಧ ಸಿಂಪಡಣೆ ಮಾಡುತ್ತಿದ್ದ ರೈತರು ಈಗ ರಾಗಿ ಬೆಳೆಗೂ ಔಷಧ ಸಿಂಪಡಿಸುವ ಕಾಲ ಬಂದಿದೆ” ಎಂದು ಹೇಳಿದ್ದಾರೆ.