ನವದೆಹಲಿ: ಹಲವು ವಾರಗಳಿಂದ ನಾಗಾಲೋಟ ಮುಂದುವರೆಸಿರುವ ಬೆಳ್ಳಿ ಬೆಲೆ ಗುರುವಾರ ಕೇಜಿಗೆ 4 ಲಕ್ಷ ರೂ. ಗಡಿ ದಾಟಿದೆ. ಇದೇ ವೇಳೆ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು 10 ಗ್ರಾಂ ಚಿನ್ನಕ್ಕೆ 1.89 ಲಕ್ಷ ರೂ. ಆಗಿದೆ.
ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಪ್ರಕಾರ, ಬೆಳ್ಳಿ ದರದಲ್ಲಿ ಒಂದೇ ದಿನ 19,500 ರೂ. ಹೆಚ್ಚಳವಾಗುವ ಮೂಲಕ ಕೇಜಿಗೆ 4,04,500 ರೂ.ಗೆ ತಲುಪಿದೆ. ಬುಧವಾರ ಕೇಜಿಗೆ ಬೆಳ್ಳಿಗೆ 3,85,000ಗೆ ಮಾರುಕಟ್ಟೆ ಮುಕ್ತಾಯವಾಗಿತ್ತು.
ಇನ್ನು ಚಿನ್ನದ ಬೆಲೆಯಲ್ಲೂ ಸತತ ಹೆಚ್ಚಳವಾಗುತ್ತಿದ್ದು, 99.9 ಶುದ್ಧ ಚಿನ್ನ 12,000 ರೂ. ಏರಿಕೆಯಾಗುವ ಮೂಲಕ 10 ಗ್ರಾಂಗೆ 1,83,000 ರೂ.ಗೆ ತಲುಪಿದೆ. ಈ ಏರಿಕೆಯೊಂದಿಗೆ ಬೆಳ್ಳಿ ಬೆಲೆ 4 ಲಕ್ಷ ರೂ. ಗಡಿ ದಾಟಿರುವುದು ಇದೇ ಮೊದಲು. ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಸುರಕ್ಷಿತ ತಾಣಗಳಿಗೆ ನಿರಂತರ ಬೇಡಿಕೆಯೇ ಈ ಏರಿಕೆಗೆ ಕಾರಣ ಎನ್ನಲಾಗಿದೆ.
10 ದಿನದಲ್ಲಿ 1 ಲಕ್ಷ ರೂ. ಹೆಚ್ಚಳ: ಕಳೆದ 10 ದಿನಗಳಿಂದ ಬೆಳ್ಳಿ ಬೆಲೆಯಲ್ಲಿ 1 ಲಕ್ಷ ರೂ. ಹೆಚ್ಚಳವಾಗಿದೆ. ಡಿಸೆಂಬರ್ 19ರಂದು ಬೆಳ್ಳಿ ಬೆಲೆ 3 ಲಕ್ಷ ರೂ. ಗಡಿ ದಾಟಿತ್ತು. ಗುರುವಾರ 4 ಲಕ್ಷ ರೂ. ತಲುಪುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಇದಕ್ಕೂ ಮೊದಲು ಬೆಳ್ಳಿ ಬೆಲೆ 2 ಲಕ್ಷ ರೂ. ಆಗಲು ಒಂದು ತಿಂಗಳು ಮಾತ್ರ ತೆಗೆದುಕೊಂಡಿತ್ತು.
ಈ ನಡುವೆ ಚಿನ್ನದ ಖರೀದಿ 2024ಕ್ಕೆ ಹೋಲಿಸಿದಲ್ಲಿ, 2025ರಲ್ಲಿ 11% ಕುಸಿತ ಆಗಿರುವುದಾಗಿ ವಿಶ್ವ ಚಿನ್ನ ಮಂಡಳಿ ವರದಿ ತಿಳಿಸಿದೆ. ಮಾರಾಟವಾದ ಚಿನ್ನದ ಪ್ರಮಾಣ ಕಡಿಮೆಯಾದರೂ, ಖರೀದಿಯಾದ ಮೌಲ್ಯ ಶೇ.30ರಷ್ಟು ಜಾಸ್ತಿಯಾಗಿದೆ. 2024ರಲ್ಲಿ 5,75,930 ಕೋಟಿ ರೂ. ಚಿನ್ನ ಖರೀದಿಯಾಗಿತ್ತು.























