ದೀಪಾವಳಿಗೆ ಜಿಎಸ್ಟಿ ಕೊಡುಗೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಅದರಂತೆ ದಿನನಿತ್ಯ ಬಳಕೆಯ ಬಹುತೇಕ ವಸ್ತುಗಳ ಮೇಲೆ ತೆರಿಗೆ ತಗ್ಗಲಿದೆ. ಯಾವೆಲ್ಲ ವಸ್ತುಗಳ ಬೆಲೆ ಕಡಿಮೆಯಾಗಲಿದೆ, ಯಾವುದು ಜಾಸ್ತಿಯಾಗಲಿದೆ? ಸರ್ಕಾರದ ಮೇಲೆ ಬೀಳುವ ಹೊರೆ ಎಷ್ಟು? ಅವರು ತೆರಿಗೆ ನಷ್ಟವನ್ನು ತುಂಬಿಕೊಳ್ಳಲು ಕಂಡುಕೊಂಡಿರುವ ದಾರಿ ಯಾವುದು? ಇವೆಲ್ಲದರ ಸುತ್ತ ವರದಿ.
ಕಾರು, ಬೈಕ್ ಅಗ್ಗ: ಆಟೋಮೊಬೈಲ್ ಕ್ಷೇತ್ರಕ್ಕೆ ಪ್ರಸ್ತಾವಿತ ಜಿಎಸ್ಟಿಯಲ್ಲಿ ಉತ್ತೇಜನ ನೀಡಲಾಗಿದೆ. ಈಗಿರುವ ಕಾರುಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರ ಜೊತೆಗೆ ಇಂಜಿನ್ ಮಾದರಿಯನ್ನು ಅನುಸರಿಸಿ 1ರಿಂದ 22 ಪರ್ಸೆಂಟ್ ಹೆಚ್ಚುವರಿ ತೆರಿಗೆ ನಿಗದಿಯಾಗಿದೆ. ಅಂದರೆ, ಕಾರುಗಳ ಮೇಲೆ 29ರಿಂದ 50 ಪರ್ಸೆಂಟ್‌ವರೆಗೆ ತೆರಿಗೆ ಇದೆ. ಪ್ರಸ್ತಾವಿತ ಜಿಎಸ್ಟಿಯಲ್ಲಿ 28% ಸ್ಲ್ಯಾಬ್ ತೆಗೆದುಹಾಕುತ್ತಿರುವುದರಿಂದ ಅದನ್ನು 18%ಗೆ ಇಳಿಸಲಾಗುತ್ತದೆ. ಜೊತೆಗೆ ಇಂಜಿನ್ ಮಾದರಿ ಅನುಸರಿಸಿ ವಿಧಿಸುವ ಹೆಚ್ಚುವರಿ ತೆರಿಗೆಗೆ ಅಂತ್ಯ ಬೀಳಲಿದೆ. ಆದರೆ ಲಕ್ಷುರಿ ಕಾರುಗಳನ್ನು 40% ತೆರಿಗೆ ಸ್ಲ್ಯಾಬ್‌ಗೆ ವರ್ಗಾಯಿಸುವ ಸಾಧ್ಯತೆ ಇದೆ.
ಬೈಕ್‌ಗಳ ಮೇಲೂ 28% ತೆರಿಗೆ ಇದೆ. 350 ಸಿಸಿಗಿಂತಲೂ ಹೆಚ್ಚು ಶಕ್ತಿಯ ಇಂಜಿನ್‌ಗಳ ಮೇಲೆ ಶೇ.3ರಷ್ಟು ಹೆಚ್ಚುವರಿ ತೆರಿಗೆ ಇದೆ. 350 ಸಿಸಿಗಿಂತಲೂ ಕಡಿಮೆ ಬಲದ ಇಂಜಿನ್ ಹೊಂದಿರುವ ಬೈಕ್‌ಗಳನ್ನು 18% ಸ್ಲಾಬ್‌ಗೆ ಇಳಿಸಲಾಗುತ್ತದೆ. ಹೆಚ್ಚು ಬಲದ ಇಂಜಿನ್‌ಗೆ ಹೆಚ್ಚು ತೆರಿಗೆ ಹೊಡೆತ ಇದೆ.
ಇವಿ ಕಾರು ವಲಯಕ್ಕೆ ಹೊಡೆತ: ಈ ತೆರಿಗೆ ಸುಧಾರಣೆಯಿಂದ ವಿದ್ಯುತ್ ಕಾರುಗಳ ವಲಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಎಚ್‌ಎಸ್‌ಬಿಸಿ ವರದಿ ಹೇಳಿದೆ. ಐಸಿಇ ವಾಹನಗಳು ಅಥವಾ ಪೆಟ್ರೋಲ್ ಕಾರುಗಳ ಬಲೆ ಇಳಿಸುವುದರಿಂದ ಸಣ್ಣ ಕಾರುಗಳ ಬೆಲೆ ಸುಮಾರು ಶೇ. 8ರಷ್ಟು ಹಾಗೂ ದೊಡ್ಡ ಕಾರುಗಳ ಬೆಲೆ ಶೇಕಡ 3-5ರಷ್ಟು ತಗ್ಗಲಿದೆ. ಇದು ಇವಿ ವಲಯದ ಮೇಲೆ ಪರಿಣಾಮ ಬೀರಲಿದೆ.
ವಿಮಾ ಕ್ಷೇತ್ರಕ್ಕೆ ಲಾಭ: ಜೀವ ವಿಮೆ ಮತ್ತು ಆರೋಗ್ಯ ವಿಮೆಗಳಿಗೆ ಜಿಎಸ್‌ಟಿ ತಗ್ಗಿಸಲು ಬಹುತೇಕ ರಾಜ್ಯಗಳಿಗೆ ಪ್ರಸ್ತಾವ ಇಟ್ಟಿವೆ. ಈಗ ವಿಮೆಗೆ ಶೇ. 18ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಅದನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಆಗ್ರಹ ಇದೆ.
85,000 ಕೋಟಿ ಆದಾಯ ನಷ್ಟ: ಹೊಸ ಜಿಎಸ್‌ಟಿಯಿಂದ ಸರ್ಕಾರದ ಆದಾಯಕ್ಕೆ 85,000 ಕೋಟಿ ರೂ. ನಷ್ಟವಾಗಲಿದೆ ಎಂದು ಎಸ್‌ಬಿಐ ವರದಿ ಅಂದಾಜಿಸಿದೆ. ಆದರೆ ಇದರಿಂದ ಗ್ರಾಹಕರು ಹೆಚ್ಚುವರಿಯಾಗಿ 1.98 ಲಕ್ಷ ಕೋಟಿ ರೂ. ಬಳಕೆ ಮಾಡಿಕೊಳ್ಳಬಹುದೆಂದು ಹೇಳಿದೆ. ಆದಾಯ ತೆರಿಗೆ ಕಡಿತದಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ನಷ್ಟವಾಗಲಿದೆ. ಆದರೆ ಇದರಿಂದ 3.33 ಲಕ್ಷ ಕೋಟಿ ರೂ. ಹೆಚ್ಚುವರಿಯಾಗಿ ಗ್ರಾಹಕರು ಖರ್ಚು ಮಾಡುತ್ತಿದ್ದಾರೆ. ಈಗ ಜಿಎಸ್‌ಟಿ ಕಡಿತದಿಂದ ಹೆಚ್ಚುವರಿ ಗ್ರಾಹಕರು ಖರ್ಚು ಮಾಡುವ ಅಂದಾಜು ಹಣ ಒಟ್ಟು 5.31 ಲಕ್ಷ ಕೋಟಿ ರೂ. ಆಗುತ್ತದೆ. ಇದರಿಂದ 52,000 ಕೋಟಿ ರೂ. ಜಿಎಸ್‌ಟಿ ಹೆಚ್ಚುವರಿಯಾಗಿ ಬರುತ್ತದೆ. ತೆರಿಗೆ ಹಣದಲ್ಲಿ ಸರ್ಕಾರ ಅತ್ಯುತ್ತಮವಾಗಿ ನಿರ್ವಹಿಸಿರುವುದರಿಂದ ಉಳಿದ ಹಣವನ್ನು ನಿಭಾಯಿಸಲು ಸಾಧ್ಯವಾಗುತ್ತದೆ.
ಟ್ರಂಪ್ ತೆರಿಗೆ ಹೊಡೆತದ ಪರಿಣಾಮ: ಜಿಎಸ್‌ಟಿ ದರ ಪರಿಷ್ಕರಣೆಗೆ ಇನ್ನೊಂದು ಕಾರಣ ಇದೆ. ಅದು ಭಾರತೀಯ ವಸ್ತುಗಳ ಮೇಲೆ ಟ್ರಂಪ್ ಹೇರಿರುವ 50% ತೆರಿಗೆ. ಅದರಿಂದ ಭಾರತೀಯ ತಯಾರಕರ ರಫ್ತು ತಗ್ಗಲಿದೆ. ಅದರಿಂದ ಸಹಜವಾಗಿಯೇ ಉತ್ಪಾದನೆ ಕಡಿಮೆಯಾಗಲಿದೆ, ಜಿಡಿಪಿಯೂ ಕುಸಿತ ಕಾಣಲಿದೆ. ಹೀಗಾಗಿ ಸ್ಥಳೀಯ ಬಳಕೆಯನ್ನು ಹೆಚ್ಚಿಸುವುದು ಸರ್ಕಾರದ ಮುಂದಿರುವ ಮತ್ತೊಂದು ದಾರಿ. ಅದಕ್ಕಾಗಿಯೇ ತೆರಿಗೆ ತಗ್ಗಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದರಿಂದ ಟ್ರಂಪ್ ತೆರಿಗೆ ಹೊಡೆತದಿಂದ ಸ್ವಲ್ಪ ಮಟ್ಟಿಗೆ ಬಚಾವಾಗಬಹುದು.
ಲಾಭ ಪಡೆಯಲಿರುವ ವಲಯಗಳು: ಜವಳಿ, ರಸಗೊಬ್ಬರ, ಮರುಬಳಕೆ ಇಂಧನಗಳು, ಆಟೋಮೊಬೈಲ್, ಕರಕುಶಲ, ಕೃಷಿ, ಜೀವವಿಮೆ ಮತ್ತು ಆರೋಗ್ಯ ವಿಮೆ.
ಟ್ರಂಪ್ ತೆರಿಗೆ ಹೊಡೆತದ ಪರಿಣಾಮ: ಜಿಎಸ್‌ಟಿ ದರ ಪರಿಷ್ಕರಣೆಗೆ ಇನ್ನೊಂದು ಕಾರಣ ಇದೆ. ಅದು ಭಾರತೀಯ ವಸ್ತುಗಳ ಮೇಲೆ ಟ್ರಂಪ್ ಹೇರಿರುವ 50% ತೆರಿಗೆ. ಅದರಿಂದ ಭಾರತೀಯ ತಯಾರಕರ ರಫ್ತು ತಗ್ಗಲಿದೆ. ಅದರಿಂದ ಸಹಜವಾಗಿಯೇ ಉತ್ಪಾದನೆ ಕಡಿಮೆಯಾಗಲಿದೆ, ಜಿಡಿಪಿಯೂ ಕುಸಿತ ಕಾಣಲಿದೆ. ಹೀಗಾಗಿ ಸ್ಥಳೀಯ ಬಳಕೆಯನ್ನು ಹೆಚ್ಚಿಸುವುದು ಸರ್ಕಾರದ ಮುಂದಿರುವ ಮತ್ತೊಂದು ದಾರಿ. ಅದಕ್ಕಾಗಿಯೇ ತೆರಿಗೆ ತಗ್ಗಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದರಿಂದ ಟ್ರಂಪ್ ತೆರಿಗೆ ಹೊಡೆತದಿಂದ ಸ್ವಲ್ಪ ಮಟ್ಟಿಗೆ ಬಚಾವಾಗಬಹುದು.
ಏನೇನು ಕಡಿಮೆ?: ತುಪ್ಪ, ಬೆಣ್ಣೆ, ಪ್ಯಾಕ್ ಆಗಿರುವ ಆಹಾರ, ಹಣ್ಣಿನ ಜ್ಯೂಸ್, 1000 ರೂ. ಗಿಂತ ಕಡಿಮೆ ಬೆಲೆಯ ಚಪ್ಪಲಿ, ಟೂತ್ ಪೇಸ್ಟ್, ಛತ್ರಿ, ಕುಕ್ಕರ್, ಹೊಲಿಗೆ ಯಂತ್ರ, ಬೈಸಿಕಲ್, ಏರ್ ಕಂಡೀಷನರ್, ಡಿಶ್ ವಾಟರ್, 32 ಇಂಚ್ ವರೆಗಿನ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸಿಮೆಂಟ್, ಕಾರು, ಬೈಕ್, ಜೀವ ವಿಮೆ, ಆರೋಗ್ಯ ವಿಮೆ, ಮೊಬೈಲ್ ಬಿಲ್, ಬಟ್ಟೆ, ರಸಗೊಬ್ಬರ ಇತ್ಯಾದಿ.
ಯಾವುದು ತುಟ್ಟಿ?: ತಂಬಾಕು ಉತ್ಪನ್ನ, ಗುಟ್ಕಾ, ಪಾನ್ ಮಸಾಲಾ ಇತ್ಯಾದಿ