ನವದೆಹಲಿ: ದೇಶದಲ್ಲಿ ಮಂಗಳವಾರ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡರೆ ಮತ್ತೊಂದಡೆ ಚಿನ್ನ ಮತ್ತು ಬೆಳ್ಳಿ ದರ ದಾಖಲೆ ಏರಿಕೆ ದಾಖಲಿಸಿದೆ.
ಚಿನ್ನ ಒಂದೇ ದಿನ 10 ಗ್ರಾಂಗೆ 2700 ರೂ. ಏರಿಕೆ ಕಂಡಿದ್ದು, ದೆಹಲಿಯಲ್ಲಿ 1,18,900 ರೂ. ತಲುಪಿದೆ ಎಂದು ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ತಿಳಿಸಿದೆ. 99.9 ಶುದ್ಧ ಬಂಗಾರ 1,16,200 ರೂ.ಗೆ ಮುಟ್ಟಿದೆ. ಇದು ದಾಖಲೆಯ ಬೆಲೆಯಾಗಿದೆ. ಅಮೆರಿಕದ ವೀಸಾ ಶುಲ್ಕ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಬೆಳ್ಳಿ ಬೆಲೆಯೂ ಗಗನಕ್ಕೇರಿದ್ದು, ಕೆಜಿಯೊಂದಕ್ಕೆ 3220 ರೂ. ಹೆಚ್ಚಳವಾಗಿದೆ. ಇದರಿಂದ 1,39,600 ರೂ.ಗೆ ತಲುಪಿದೆ. ಕಳೆದ ವರ್ಷ ಡಿಸೆಂಬರ್ 31ರಿಂದ ಇಲ್ಲಿಯವರೆಗೆ ಬೆಳ್ಳಿ 55.63%ನಷ್ಟು ಹೆಚ್ಚಳ ಕಂಡಿದೆ.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಈ ದಿನ ಪ್ರತಿ ಡಾಲರ್‌ಗೆ 88.75 ರೂ. ತಲುಪಿದ್ದು, ಇದು ದಾಖಲೆಯಾಗಿದೆ. ಸೋಮವಾರದ 88.31ರಷ್ಟಿದ್ದ ರೂಪಾಯಿ ಮೌಲ್ಯ ಮಂಗಳವಾರ ಬೆಳಗ್ಗೆ 88.49 ರೂ.ಗೆ ಕುಸಿದಿತ್ತು.
ಸೆ.11ರಂದು ರೂಪಾಯಿ ಮೌಲ್ಯ 88.47 ರೂ.ಗೆ ಇಳಿದಿರುವುದು ಇದುವರೆಗಿನ ದಾಖಲೆ ಕನಿಷ್ಟ ದರವಾಗಿತ್ತು. ಅಮೆರಿಕದ ವ್ಯಾಪಾರ ಸುಂಕ ಹಾಗೂ ಎಚ್1-ಬಿ ವೀಸಾ ನಿಯಮಗಳ ಗೊಂದಲವು ರೂಪಾಯಿ ಮೌಲ್ಯದ ಮೇಲೆ ಒತ್ತಡ ಬಿದ್ದಿದೆ.