ಯೂರಿಯಾ ಗೊಬ್ಬರ ಬೇಡಿಕೆ ಹೆಚ್ಚಳಕ್ಕೆ ಕಾರಣ, ರೈತರ ಆತಂಕಗಳು

0
27

ಬೆಂಗಳೂರು: ಕರ್ನಾಟಕದಲ್ಲಿ ಗೊಬ್ಬರದ ಸಮಸ್ಯೆ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಏಪ್ರಿಲ್‌, ಮೇ ತಿಂಗಳಿನಲ್ಲಿಯೇ ಉತ್ತಮವಾಗಿ ಮಳೆಯಾಗಿತ್ತು. ಆದ್ದರಿಂದ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದರು. ಆದರೆ ಈಗ ಗೊಬ್ಬರದ ಸಮಸ್ಯೆ ಉಂಟಾಗಿದ್ದು, ರೈತರು ಆತಂಕಗೊಂಡಿದ್ದಾರೆ.

ರೈತರು ತಾವು ಬೆಳೆಯುವ ಬೆಳೆಗಳ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಬಳಸಬೇಕು. ಯೂರಿಯಾ ರಸಗೊಬ್ಬರಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಹೇಳಿದೆ. ಈ ವರ್ಷ ಪೂರ್ವ ಮುಂಗಾರು ಮಳೆಯು ಉತ್ತಮವಾಗಿ ಬಂದ ಕಾರಣ ಹೆಚ್ಚಿನ ಪ್ರದೇಶದಲ್ಲಿ ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಉತ್ಸುಕತೆ ತೋರಿದ ಪರಿಣಾಮವಾಗಿ ಬಿತ್ತನೆ ಹೆಚ್ಚಾಗಿದೆ.

ಡ್ಯಾಂಗಳಿಂದ ಕಾಲುವೆಗಳಿಗೆ ಮುಂಚಿತವಾಗಿ ನೀರು ಹರಿಸಲಾಗಿದೆ. ಸಂಯುಕ್ತ ಗೊಬ್ಬರಗಳಿಗೆ ಹೋಲಿಕೆ ಮಾಡಿದಲ್ಲಿ ಯೂರಿಯಾ ರಸಗೊಬ್ಬರದ ಬೆಲೆ ಕಡಿಮೆಯಿರುವುದರಿಂದ ಸಮತೋಲನವಾಗಿ ರಸಗೊಬ್ಬರಗಳನ್ನು ಬಳಸದೇ ಕೇವಲ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿರುವುದು ಕಂಡುಬಂದಿದೆ ಎಂದು ಇಲಾಖೆ ತಿಳಿಸಿದೆ.

ವಿಜ್ಞಾನಿಗಳು ಹಾಗೂ ಇಲಾಖೆಯಿಂದ ಶಿಫಾರಸ್ಸು ಮಾಡಲಾದ ಪ್ರಮಾಣಕ್ಕಿಂತ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಹಾಗೂ ಕೆಲವು ರೈತರು ಬೆಳೆಯ ವಿವಿಧ ಹಂತಗಳಲ್ಲಿ ಬಳಕೆಗೆ ಬೇಕಾದ ರಸಗೊಬ್ಬರಗಳನ್ನು ಮುಂಗಡವಾಗಿ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ಆದ್ದರಿಂದ ಕೊರತೆ ಕಂಡುಬಂದಿದೆ.

ಯೂರಿಯಾಗೆ ಬೇಡಿಕೆ, ದಾಸ್ತಾನು: ಮಾಸಿಕ ಯೂರಿಯಾ ರಸಗೊಬ್ಬರದ ಬೇಡಿಕೆ, ಸರಬರಾಜು, ವಿತರಣೆ ಮತ್ತು ದಾಸ್ತಾನು ಇಲಾಖೆಯು ರೂಪಿಸಿದ ಯೋಜನೆ ಅನುಸಾರ ಇದ್ದರೂ ಸಹ ಹಲವು ಜಿಲ್ಲೆಯ ರೈತರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಪದೇ ಪದೇ ಬರುತ್ತಿರುವುದನ್ನು ಕೃಷಿ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.

ಮುಂಗಾರು ಪೂರ್ವ ಮತ್ತು ಪ್ರಸಕ್ತ ಮುಂಗಾರಿನಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಪರಿವೀಕ್ಷಕರು ಅನಿರೀಕ್ಷಿತ ಭೇಟಿ ನೀಡಿ ರಸಗೊಬ್ಬರದ ದಾಸ್ತಾನಿನ ಜೊತೆಗೆ ರಸಗೊಬ್ಬರ ನಿಯಂತ್ರಣ ಆದೇಶ 1985ರಡಿಯ ಎಲ್ಲಾ ಅಂಶಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿ ರಸಗೊಬ್ಬರಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ದಾಸ್ತಾನು ಮತ್ತು ವಿತರಣೆಯಲ್ಲಿ ರಸಗೊಬ್ಬರ ವಿತರಕರು ಪಾಲಿಸಬೇಕಾದ ಅಗತ್ಯ ಕ್ರಮಗಳ ಕುರಿತು ಪರವಾನಿಗೆ ಹೊಂದಿರುವುದು, ಬಿಲ್ಲುಗಳನ್ನು ಕಡ್ಡಾಯವಾಗಿ ನೀಡುವ ಬಗ್ಗೆ, ಹೆಚ್ಚಿನ ದರಕ್ಕೆ ಮಾರಾಟ ಮಾಡದಿರುವ ಬಗ್ಗೆ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಸಭೆಗಳಲ್ಲಿ ಅಗತ್ಯ ಎಚ್ಚರಿಕೆ ಮತ್ತು ಸೂಚನೆಗಳನ್ನು ಸಹ ನೀಡಲಾಗಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳನ್ವಯ ಯೂರಿಯಾ ಗೊಬ್ಬರದ ಅವೈಜ್ಞಾನಿಕ ಬಳಕೆಯ ದುಷ್ಪರಿಣಾಮಗಳು ಮತ್ತು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ನ್ಯಾನೋ ರಸಗೊಬ್ಬರಗಳನ್ನು (ವಿಶೇಷವಾಗಿ ನ್ಯಾನೋ ಯೂರಿಯಾ ಮತ್ತು ಡಿ.ಎ.ಪಿ) ಪರ್ಯಾಯವಾಗಿ ಬಳಸುವ ಕುರಿತು ಅರಿವು ಮೂಡಿಸಲಾಗುತ್ತಿದೆ.

ಬೆಳೆಗಳ ಪದ್ಧತಿಯಲ್ಲಿ ಆದ ಹೆಚ್ಚಿನ ಬದಲಾವಣೆ, ಯೂರಿಯಾ ರಸಗೊಬ್ಬರದ ಕಡಿಮೆ ಬೆಲೆ ಮತ್ತು ಸಂಯುಕ್ತ ಗೊಬ್ಬರಗಳ ಹೆಚ್ಚಿನ ಬೆಲೆ ಮುಂಚಿತವಾಗಿ ಆಗಮಿಸಿದ ಮುಂಗಾರು ಹಾಗೂ ತುಂಗಭದ್ರ ನದಿ ನೀರು ಮತ್ತು ರೈತರ ಅವೈಜ್ಞಾನಿಕವಾಗಿ ಬಳಸುತ್ತಿರುವ ಪ್ರಮಾಣದ ಕಾರಣ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚುತ್ತಿರುತ್ತದೆ.

ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಬೇಡಿಕೆಯನ್ನು ಸಹ ಈಗಾಗಲೇ ಮಾಹೆ ಹಾಗೂ ಸರಬರಾಜುದಾರರು ರೂಪಿಸಿಕೊಂಡಿರುವ ಗುರಿಗಳನ್ವಯ ದಾಸ್ತಾನು ಮಾಡಿ ಸೂಕ್ತ ರೀತಿಯಲ್ಲಿ ವಿತರಿಸಲಾಗುತ್ತದೆ ಹಾಗೂ ಈ ಸಮಯದಲ್ಲಿ ಯಾವುದೇ ಕೃಷಿ ಪರಿಕರ ಮಾರಾಟಗಾರರು ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ್ದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ರೈತರಿಗೆ ರಸಗೊಬ್ಬರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಅಥವಾ ಕೃತಕ ಅಭಾವ ಸೃಷ್ಟಿಸುವ ಪ್ರಸಂಗಗಳು ಕಂಡುಬಂದಲ್ಲಿ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಕರೆ ನೀಡಲಾಗಿದೆ.

Previous articleಮಾಲೆಗಾಂವ್‌ ಸ್ಫೋಟ ಪಕ್ರರಣ: ಸಾಧ್ವಿ ಪ್ರಜ್ಞಾ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆ
Next articleDaya Nayak: ಕನ್ನಡಿಗ, ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನಿವೃತ್ತಿ

LEAVE A REPLY

Please enter your comment!
Please enter your name here