ಆನಂದ್ ಹೊಸೂರ್
ಸಂ.ಕ. ಸಮಾಚಾರ ಸಾಲಿಗ್ರಾಮ: ಹವಾಮಾನ ವೈಪರೀತ್ಯದಿಂದ ಭತ್ತ ತೆನೆಬಿಡುವ ಮೊದಲೇ ಈ ಭಾಗದಲ್ಲಿ ಎಲೆಸುರುಳಿ ಹಾಗೂ ಕೊಳವೆ ಹುಳುಗಳ ಬಾಧೆ ಕಾಡಲಾರಂಭಿಸಿದೆ. ಇದೇ ವೇಳೆ ಮಳೆ ಬಾರದಿರುವುದ ಮಳೆಯಾಶ್ರಿತ ಬೆಳೆಗಳು ನೀರಿಲ್ಲದೆ ಬಾಡುತ್ತಿವೆ. ಇದು ರೈತರನ್ನು ಕಂಗಾಲಾಗಿಸಿದೆ.
ಸಾಲಿಗ್ರಾಮ ತಾಲೂಕಿನ ಕಾವೇರಿ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಈಗಾಗಲೇ ಬಹುತೇಕ ಭತ್ತದ ನಾಟಿ ಕಾರ್ಯ ಮುಗಿದು ಕಳೆ ತೆಗೆಯುವುದರ ಜೊತೆಗೆ ಗೊಬ್ಬರ ಹಾಕಲಾಗಿದೆ. ಗದ್ದೆಗಳಲ್ಲಿ ಭತ್ತದ ಪೈರುಗಳು ಹಚ್ಚ ಹಸಿರಿನಿಂದ ಎಲ್ಲೆಡೆ ನಳನಳಿಸುತ್ತಿದೆ. ಹೆಚ್ಚಿನ ಇಳುವರಿಯ ಭರವಸೆಯೂ ಮೂಡಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಪೈರಿಗೆ ಹುಳ ಬಾಧೆ ಕಾಡುತ್ತಿದೆ.
ಇದಲ್ಲದೆ, ಮುಂಗಾರಿನ ವಾಡಿಕೆ ಮಳೆ ಕೊರತೆಯಿಂದ ವಾಣಿಜ್ಯ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿರುವುದು ರೈತರ ಚಿಂತೆಗೆ ದೂಡಿದೆ. ಹಸಿರು ಹುಳುಗಳ ಬಾಧೆ ಭತ್ತದ ಪೈರುಗಳಲ್ಲಿ ಗರಿ ಸುತ್ತುವ ಹಸಿರು ಹುಳುಗಳು ಹಿಂದಿನ ವರ್ಷಗಳಿಗಿಂತಲೂ ಅಧಿಕವಾಗಿ ಕಾಣಿಸಿಕೊಂಡಿವೆ. ಒಂದು ಭಾಗದ ಹುಳುಗಳು ಅಕ್ಕಪಕ್ಕದ ಗದ್ದೆಗಳಿಗೂ ವ್ಯಾಪಿಸುತ್ತಿವೆ. ಇದರಿಂದ ರೈತರು ರೋಸಿ ಹೋಗುವಂತಾಗಿದೆ.
ಭತ್ತದ ಎಲೆಗಳು ನಾಶ ಗದ್ದೆಗಳ ಕೆಲ ಭಾಗದಲ್ಲಿ ಗರಿಗಳನ್ನು ತಿಂದು ನಾಶಪಡಿಸುತ್ತಿರುವುದರರಿಂದ ರೈತರಿಗೆ ದಿಕ್ಕೇ ತೋಚದಾಗಿದೆ. ಹುಳುಗಳನ್ನು ಹತೋಟಿಗೆ ತರುವ ಸಲುವಾಗಿ ಗದ್ದೆಗಳಲ್ಲಿ ನೋಡಿದಲ್ಲೆಲ್ಲ ರೈತರು ಔಷಧ ಸಿಂಪಡಿಸುತ್ತಿರುವುದು ಕಣ್ಣಿಗೆ ಬೀಳುತ್ತಿದೆ. ಆದರೂ ಸಾಕಷ್ಟು ಭಾಗದಲ್ಲಿ ಹುಳುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಕಾವೇರಿ ಅಚ್ಚುಕಟ್ಟು ನೀರಾವರಿ ನಾಲಾ ವ್ಯಾಪ್ತಿಯ ಪ್ರದೇಶದಲ್ಲಿ ಎಲೆಸುರುಳಿ ಹಾಗೂ ಕೊಳವೆ ಹುಳುಗಳ ಬಾಧೆ ಹೆಚ್ಚಾಗಿದೆ. ಇದರಿಂದಾಗಿ ಇಳುವರಿ ಕಡಿಮೆಯಾಗಿ ನಷ್ಟವಾಗಬಹುದೇನೋ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ವಾಡಿಕೆ ಮಳೆ ಕಡಿಮೆ: ಸಾಲಿಗ್ರಾಮ ತಾಲೂಕಿನ ವಾಡಿಕೆ ಮಳೆ ಶೇ. 242 ಮಿ.ಮಿ ನಷ್ಟಿದ್ದರೆ, ಶೇ. 195 ಮಿ.ಮಿ ಮಳೆಯಾಗಿದೆ. ಶೇ. 19 ಮಿ.ಮಿ ರಷ್ಟು ಕೊರತೆಯಾಗಿರುವುದು ರೈತರಲ್ಲಿ ಬರದ ಭೀತಿ ಉಂಟು ಮಾಡಿದೆ. ಅತಿ ಕಡಿಮೆ ಮಳೆ ಚುಂಚನಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆ ಶೇ 260 ಮಿ.ಮಿ ಮಳೆ ಆಗಬೇಕಿತ್ತು. ಆದರೆ ಶೇ.140 ಮಿಮಿ ಮಳೆಯಾಗಿದ್ದು ಶೇ.46 ರಷ್ಟು ಕಡಿಮೆ ಮಳೆಯಾಗಿದೆ.
ಕಸಬಾ ಹೋಬಳಿಯಲ್ಲೂ ಕೂಡ ಕಡಿಮೆ ಮಳೆಯಾಗಿರುವ ವರದಿಯಾಗಿದೆ. ಬಾಡುತ್ತಿವೆ ಬೆಳೆ ಮತ್ತೊಂದೆಡೆ ಮಳೆ ಆಶ್ರಿತ ಪ್ರದೇಶದಲ್ಲಿ ಬಿದ್ದ ಮಳೆಗೆ ರೈತರು ಜೋಳ, ರಾಗಿ, ತಂಬಾಕು ಸೇರಿದಂತೆ ಇನ್ನಿತರ ಹಲವು ರೀತಿಯ ವಾಣಿಜ್ಯ ಬೆಳೆ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಇಲ್ಲದೆ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವುದರ ಜತೆಗೆ ಬಿಸಿಲ ಝಳ ಜಾಸ್ತಿಯಾಗಿ ಪೈರಿನ ಗರಿಗಳು ಒಣಗಲಾರಂಭಿಸುತ್ತಿವೆ.
“ಭತ್ತದ ಪೈರಿಗೆ ಯಾವುದೇ ತರಹದ ರೋಗ ಕಾಣಿಸಿಕೊಂಡಿಲ್ಲ, ಬದಲಿಗೆ ಮಳೆಯ ಕೊರತೆಯಿಂದ ಎಲೆಸುರುಳಿ ಹಾಗೂ ಕೊಳವೆ ಹುಳ ಬಾಧೆಯಿಂದ ಗರಿಗಳಲ್ಲಿ ಬಿಳಿ ಕಟಗಳು ಕಾಣಿಸುತ್ತಿವೆ. ಅದು ರೋಗ ಅಲ್ಲ. ಕೃಷಿ ಇಲಾಖೆಯಲ್ಲಿ ಸುಮಾರು 300 ಲೀ ನಷ್ಟು ಔಷಧಿಗಳು ದಾಸ್ತಾನು ಇದೆ. ಸಾಮಾನ್ಯ ಔಷಧಿ ಸಿಂಪಡಿಸಿ ಹುಳುಗಳ ಬಾಧೆ ಹತೋಟಿಗೆ ತರಬಹು” ಎಂದು ಪ್ರಸನ್ನ ಕೃಷಿ ಅಧಿಕಾರಿ ಕೃಷ್ಣರಾಜನಗರ ಹೇಳಿದ್ದಾರೆ.