ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ, ಅದರಲ್ಲೂ ವಿಶೇಷವಾಗಿ ರನ್ ಮಷೀನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಈಗ ಒಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಫೈನಲ್ ಪಂದ್ಯದ ಕೊನೆಯ ಹಂತದಲ್ಲಿ, ಗುಜರಾತ್ ಟೈಟನ್ಸ್ ವಿರುದ್ಧ ರನ್ ಗಳಿಸುವಾಗ ಕೊಹ್ಲಿ ಹ್ಯಾಮ್‌ಸ್ಟ್ರಿಂಗ್ (Hamstring) ಗಾಯಕ್ಕೆ ತುತ್ತಾಗಿದ್ದರು. ಗಾಯದ ನಡುವೆಯೂ ಅದ್ಭುತವಾಗಿ ಆಡಿದ್ದ ಕೊಹ್ಲಿ, 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ ಈಗ ಅದೇ ಗಾಯದ ಸಮಸ್ಯೆಯಿಂದಾಗಿ ಅವರು ಮುಂಬರುವ ಹೋಮ್ ಸೀರೀಸ್‌ನಿಂದ ದೂರ ಉಳಿಯಬೇಕಾಗಿ ಬಂದಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
ಇನ್ನು ಜೂನ್ 13 ರಿಂದ ಆರಂಭವಾಗಲಿರುವ ಈ ಮೂರು ಪಂದ್ಯಗಳ ಏಕದಿನ ಸರಣಿಗೆ ಮತ್ತೊಂದು ಆತಂಕವೂ ಎದುರಾಗಿದೆ. ಮಾಜಿ ನಾಯಕ ಹಾಗೂ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅವರ ಆಟವೂ ಕೂಡ ಫಿಟ್‌ನೆಸ್ ಮೇಲೆ ಅವಲಂಬಿತವಾಗಿದೆ. ಹಾಗಾಗಿ ರೋಹಿತ್ ಶರ್ಮಾ ಈ ಸರಣಿಯಲ್ಲಿ ಆಡುವುದು ಇನ್ನು ಅನುಮಾನವಾಗಿಯೇ ಉಳಿದಿದೆ. ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದ ಮುಕ್ತಾಯದ ನಂತರ ಈ ಒಡಿಐ ಸರಣಿ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದರು. ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದ ಕೊಹ್ಲಿ, 16 ಇನ್ನಿಂಗ್ಸ್‌ಗಳಲ್ಲಿ 56.25 ರ ಸರಾಸರಿಯಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 675 ರನ್ ಚಚ್ಚಿದ್ದರು. ಸದ್ಯ 37 ವರ್ಷದ ಈ ದಿಗ್ಗಜ ಆಟಗಾರ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದು, ಕೇವಲ ಏಕದಿನ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದ್ದಾರೆ. ಒಡಿಐ ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ಕೊಹ್ಲಿ, 299 ಇನ್ನಿಂಗ್ಸ್‌ಗಳಲ್ಲಿ 58.71 ರ ಸರಾಸರಿಯಲ್ಲಿ ಬರೋಬ್ಬರಿ 14,797 ರನ್ ಬಾರಿಸಿದ್ದಾರೆ. ಇದರಲ್ಲಿ ವಿಶ್ವದಾಖಲೆಯ 54 ಶತಕಗಳು ಹಾಗೂ 77 ಅರ್ಧಶತಕಗಳು ಸೇರಿವೆ.
ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಕೊಹ್ಲಿ ಕೇವಲ ಏಕದಿನ ಮಾದರಿಯನ್ನಷ್ಟೇ ಆಡುತ್ತಿದ್ದು, ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿಯೂ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ 240 ರನ್ ಗಳಿಸಿ ಭಾರತದ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು. ಇಂತಹ ಭೀಕರ ಫಾರ್ಮ್‌ನಲ್ಲಿರುವ ಕಿಂಗ್ ಕೊಹ್ಲಿ ಗಾಯದ ಕಾರಣದಿಂದ ಅಫ್ಘಾನಿಸ್ತಾನ ಸರಣಿಯಿಂದ ಹೊರಬಿದ್ದಿರುವುದು ಟೀಮ್ ಇಂಡಿಯಾಗೆ ಖಂಡಿತಾ ದೊಡ್ಡ ಹಿನ್ನಡೆಯಾಗಿದೆ. ಕೊಹ್ಲಿ ಆದಷ್ಟು ಬೇಗ ಗುಣಮುಖರಾಗಿ ಮೈದಾನಕ್ಕೆ ಮರಳಲಿ ಎಂಬುದೇ ಸದ್ಯ ಅಭಿಮಾನಿಗಳ ಪ್ರಾರ್ಥನೆಯಾಗಿದೆ.






















