Home Advertisement
Home ಸುದ್ದಿ ದೇಶ ಕಲ್ಲಂಗಡಿ ಹಣ್ಣು ತಿಂದ ಇಡೀ ಕುಟುಂಬ ನಿಗೂಢ ಸಾವು: ಈ ದುರಂತದ ಹಿಂದಿನ ಸತ್ಯವೇನು ಗೊತ್ತಾ?

ಕಲ್ಲಂಗಡಿ ಹಣ್ಣು ತಿಂದ ಇಡೀ ಕುಟುಂಬ ನಿಗೂಢ ಸಾವು: ಈ ದುರಂತದ ಹಿಂದಿನ ಸತ್ಯವೇನು ಗೊತ್ತಾ?

0
129

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕಲ್ಲಂಗಡಿ ಹಣ್ಣು ತಿಂದ ಇಡೀ ಕುಟುಂಬವೊಂದು ಮೃತಪಟ್ಟಿರುವ ದಾರುಣ ಘಟನೆ ಬೆಚ್ಚಿಬಿಳುವಂತೆ ಮಾಡಿದೆ. ಪೈಧುನಿ ಪ್ರದೇಶದ ನಿವಾಸಿಗಳಾದ ಅಬ್ದುಲ್ಲಾ ದೋಕಾಡಿಯಾ (40), ಪತ್ನಿ ನಸ್ರೀನ್ (35), ಪುತ್ರಿಯರಾದ ಆಯೇಷಾ (16) ಮತ್ತು ಜೈನಾಬ್ (13) ಈ ದುರಂತಕ್ಕೆ ಬಲಿಯಾದ ದುರ್ದೈವಿಗಳು.

ಏಪ್ರಿಲ್ 25ರ ಶನಿವಾರ ರಾತ್ರಿ ದೋಕಾಡಿಯಾ ಕುಟುಂಬವು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗಾಗಿ ಬಿರಿಯಾನಿ ಊಟದ ಪಾರ್ಟಿ ಏರ್ಪಡಿಸಿತ್ತು. ರಾತ್ರಿ ಸುಮಾರು 10:30ಕ್ಕೆ ಅತಿಥಿಗಳೆಲ್ಲಾ ನಿರ್ಗಮಿಸಿದ ನಂತರ, ಕುಟುಂಬದ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಸೇವಿಸಿದ್ದರು. ಆದ್ರೆ ಮರುದಿನ ಮುಂಜಾನೆ 5:30ರ ಸುಮಾರಿಗೆ ನಾಲ್ವರಿಗೂ ತೀವ್ರವಾಗಿ ವಾಂತಿ, ಹೊಟ್ಟೆ ನೋವು ಮತ್ತು ಭೇದಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಕೌಟುಂಬಿಕ ವೈದ್ಯರಿಂದ ಚಿಕಿತ್ಸೆ ಪಡೆದರೂ ಸುಧಾರಣೆ ಕಾಣದ ಕಾರಣ, ನಂತರ ಫ್ಯಾಮಿಲಿಯನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು.

ಸರಣಿ ಸಾವುಗಳ ಆಘಾತ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 26ರ ಬೆಳಿಗ್ಗೆ ಕಿರಿಯ ಮಗಳು ಜೈನಾಬ್ ಮೊದಲು ಮೃತಪಟ್ಟರೆ, ಅಂದು ರಾತ್ರಿಯ ವೇಳೆಗೆ ತಂದೆ ಅಬ್ದುಲ್ಲಾ ಕೊನೆಯುಸಿರೆಳೆದರು. ನಂತರದ ಗಂಟೆಗಳಲ್ಲಿ ತಾಯಿ ನಸ್ರೀನ್ ಮತ್ತು ಹಿರಿಯ ಮಗಳು ಕೂಡ ಸಾವನ್ನಪ್ಪಿದ್ದಾರೆ. ಈ ಸರಣಿ ಸಾವುಗಳು ಇಡೀ ಪ್ರದೇಶದಲ್ಲಿ ಆತಂಕ ಮತ್ತು ದಿಗ್ಭ್ರಮೆ ಮೂಡಿಸಿವೆ.

ನಿಗೂಢವಾದ ಸಾವಿನ ಕಾರಣ: ಪ್ರಾಥಮಿಕ ತನಿಖೆಯ ಪ್ರಕಾರ ಇದು ‘ಫುಡ್ ಪಾಯಿಸನಿಂಗ್’ ಅಥವಾ ಆಹಾರ ವಿಷಾಕ್ತಗೊಂಡ ಪ್ರಕರಣ ಎನ್ನಲಾಗುತ್ತಿದೆ. ವಿಚಿತ್ರವೆಂದರೆ, ಇವರ ಜೊತೆ ಬಿರಿಯಾನಿ ಸೇವಿಸಿದ ಅತಿಥಿಗಳು ಆರೋಗ್ಯವಾಗಿದ್ದಾರೆ. ಹೀಗಾಗಿ ಇವರು ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲೇನಾದರೂ ವಿಷಕಾರಿ ಅಂಶವಿತ್ತೇ ಅಥವಾ ಹಣ್ಣಿನ ಮೇಲೆ ಸಿಂಪಡಿಸಿದ ರಾಸಾಯನಿಕಗಳು ಈ ದುರಂತಕ್ಕೆ ಕಾರಣವಾಯಿತೇ ಎಂಬ ಅನುಮಾನ ಮತ್ತು ಗೊಂದಲದ ಪ್ರಶ್ನೆಗಳು ಎದ್ದಿವೆ. ಸದ್ಯಕ್ಕೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಆಹಾರದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ.