Home Advertisement
Home ಸಿನಿ ಮಿಲ್ಸ್ ಮೂರು ಸಮುದ್ರಗಳ ಸಂಗಮದಲ್ಲಿ ‘ಸೀಟಿ’ಯ ಅಬ್ಬರ: ಕನ್ಯಾಕುಮಾರಿಯಲ್ಲಿ ವಿಜಯ್ ಕಮಾಲ್!

ಮೂರು ಸಮುದ್ರಗಳ ಸಂಗಮದಲ್ಲಿ ‘ಸೀಟಿ’ಯ ಅಬ್ಬರ: ಕನ್ಯಾಕುಮಾರಿಯಲ್ಲಿ ವಿಜಯ್ ಕಮಾಲ್!

0
13

ದಕ್ಷಿಣ ಭಾರತದ ಭೂತುದಿ ಕನ್ಯಾಕುಮಾರಿಯಲ್ಲಿ ಈ ಬಾರಿ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ತಮಿಳು ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಚುನಾವಣಾ ಕಣಕ್ಕೆ ಧುಮುಕಿರುವುದು ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಸಮುದ್ರದ ಅಲೆಗಳ ಅಬ್ಬರದ ನಡುವೆ ಈಗ ‘ದಳಪತಿ’ ಪಕ್ಷದ ‘ಸೀಟಿ’ ಚಿಹ್ನೆಯ ಸದ್ದು ಜೋರಾಗಿ ಕೇಳಿಬರುತ್ತಿದೆ.

ಹಾಗೇ ಕನ್ಯಾಕುಮಾರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಹಿಂದೆ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಮೇಲುಗೈ ಸಾಧಿಸಿತ್ತು. ಆದ್ರೆ ಈ ಬಾರಿ ಟಿವಿಕೆ ಪಕ್ಷದ ಪ್ರವೇಶದಿಂದ ‘ತ್ರಿಕೋನ ಸ್ಪರ್ಧೆ’ ಏರ್ಪಟ್ಟಿದೆ. ವಿಜಯ್ ರೋಡ್‌ಶೋಗೆ ಹರಿದುಬಂದ ಜನಸಾಗರವು ಯುವಜನತೆ ಮತ್ತು ಮಹಿಳಾ ಮತದಾರರು ಹೊಸ ಬದಲಾವಣೆಯನ್ನು ಬಯಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ನೇರವಾಗಿ ಡಿಎಂಕೆ ಮತ್ತು ಕಾಂಗ್ರೆಸ್‌ನ ವೋಟ್ ಬ್ಯಾಂಕ್‌ಗೆ ಕನ್ನ ಹಾಕುವ ಸಾಧ್ಯತೆಯಿದೆ.

ಅಷ್ಟೇ ಅಲ್ಲದೇ.. ಜಿಲ್ಲೆಯಲ್ಲಿ ಶೇ. 46ರಷ್ಟಿರುವ ಕ್ರೈಸ್ತ ಸಮುದಾಯ, ಅದರಲ್ಲೂ ವಿಶೇಷವಾಗಿ ಮೀನುಗಾರ ಸಮುದಾಯದ ಮತಗಳು ನಿರ್ಣಾಯಕ. ಇಲ್ಲಿಯವರೆಗೆ ಡಿಎಂಕೆ-ಕಾಂಗ್ರೆಸ್ ಪರವಾಗಿದ್ದ ಈ ಮತಗಳು ಈಗ ವಿಜಯ್ ಅವರತ್ತ ವಾಲುತ್ತಿವೆ. “ನಟ ವಿಜಯ್ ಪೂರ್ಣ ಹೆಸರು ‘ಜೋಸೆಫ್ ವಿಜಯ್ ಚಂದ್ರಶೇಖರ್’ ಎಂಬುದು ಈಗ ಹೆಚ್ಚು ಚರ್ಚೆಯಾಗುತ್ತಿದೆ. ಇದು ಅಲ್ಪಸಂಖ್ಯಾತ ಮತದಾರರೊಂದಿಗೆ ಭಾವನಾತ್ಮಕ ನಂಟು ಬೆಸೆಯಲು ಸಹಕಾರಿಯಾಗಿದೆ,” ಎನ್ನಲಾಗುತ್ತಿದೆ. ಕೊಲಚಲ್ ಭಾಗದಲ್ಲಿ ಮೀನುಗಾರರಿಗಾಗಿ ವಿಜಯ್ ಘೋಷಿಸಿರುವ ಯೋಜನೆಗಳು ಯುವ ಮೀನುಗಾರರನ್ನು ಆಕರ್ಷಿಸಿವೆ.

ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವು ನಾಗರ್‌ಕೋಯಿಲ್ ಮತ್ತು ಕನ್ಯಾಕುಮಾರಿ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಟಿವಿಕೆ ಪಕ್ಷವು ಕ್ರೈಸ್ತ ಮತಗಳನ್ನು ವಿಭಜಿಸಿದರೆ ಅದು ತಮಗೆ ಲಾಭವಾಗಬಹುದು ಎಂಬುದು ಬಿಜೆಪಿಯ ಆಸೆ. ಆದ್ರೆ ಟಿವಿಕೆ ಅಭ್ಯರ್ಥಿ ಡಾ. ಪ್ರೇಮ್ ಅಲೆಕ್ಸ್ ಲಾರೆನ್ಸ್ ಪ್ರಕಾರ, “ಸ್ಪರ್ಧೆ ಇರುವುದು ಕೇವಲ ಟಿವಿಕೆ ಮತ್ತು ಬಿಜೆಪಿ ನಡುವೆ ಮಾತ್ರ, ಕಾಂಗ್ರೆಸ್ ಚಿತ್ರಣದಲ್ಲಿಲ್ಲ.”

ಸದ್ಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಎಫ್‌ಸಿಆರ್‌ಎ ತಿದ್ದುಪಡಿಯಂತಹ ವಿಷಯಗಳನ್ನು ಮುನ್ನೆಲೆಗೆ ತಂದು ಬಿಜೆಪಿಯನ್ನು ಎದುರಿಸಲು ಮುಂದಾಗಿದ್ದಾರೆ. ವಿಜಯ್ ವರ್ಚಸ್ಸು ಕೇವಲ ಅಲೆಯೋ ಅಥವಾ ಸುನಾಮಿಯೋ ಎಂಬುದು ಮೇ 4ರ ಫಲಿತಾಂಶದಂದು ತಿಳಿಯಲಿದೆ.