ಬಾಳೆಹಣ್ಣು ಪ್ರತಿಯೊಬ್ಬರ ಅಚ್ಚುಮೆಚ್ಚಿನ ಹಣ್ಣು. ಇದು ಸುಲಭವಾಗಿ ಹಾಗೂ ಎಲ್ಲಾ ಕಾಲದಲ್ಲೂ ಸಿಗುವ ನೈಸರ್ಗಿಕ ಹಣ್ಣಾಗಿದೆ. ವೈದ್ಯರು ಮತ್ತು ಆರೋಗ್ಯ ತಜ್ಞರು ಪ್ರತಿದಿನ ಊಟದ ನಂತರ ಅಥವಾ ಉಪಹಾರದ ಸಮಯದಲ್ಲಿ ಒಂದು ಬಾಳೆಹಣ್ಣು ತಿನ್ನಲು ಸಲಹೆ ನೀಡುತ್ತಾರೆ.
ಯಾಕೆಂದರೆ ಬಾಳೆಹಣ್ಣು ಕೇವಲ ರುಚಿಕರ ಮಾತ್ರವಲ್ಲ, ಇದು ನಮ್ಮ ದೇಹಕ್ಕೆ ಅಗತ್ಯವಿರುವ ಹಲವಾರು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಜೀರ್ಣಕ್ರಿಯೆ ಸುಧಾರಣೆಯಿಂದ ಹಿಡಿದು ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವವರೆಗೂ ಬಾಳೆಹಣ್ಣಿನ ಪಾತ್ರ ಬಹಳ ದೊಡ್ಡದು.
ಬಾಳೆಹಣ್ಣು ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?:
ಪೌಷ್ಟಿಕಾಂಶಗಳ ಆಗರ: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ನಾರಿನಂಶ (ಫೈಬರ್) ಹೇರಳವಾಗಿದೆ. ಇವೆಲ್ಲವೂ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ರಕ್ತದೊತ್ತಡ ನಿಯಂತ್ರಣ: ಇದರಲ್ಲಿರುವ ಅಧಿಕ ಪೊಟ್ಯಾಸಿಯಮ್ ಅಂಶವು ನಮ್ಮ ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಪಾರ್ಶ್ವವಾಯು (Stroke) ಬರುವ ಅಪಾಯ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆಗೆ ರಾಮಬಾಣ: ಬಾಳೆಹಣ್ಣಿನಲ್ಲಿರುವ ಪೆಕ್ಟಿನ್ (Pectin) ಎಂಬ ನಾರಿನಂಶವು ಕರುಳಿನ ಚಲನೆಯನ್ನು ಸುಗಮಗೊಳಿಸಿ, ಮಲಬದ್ಧತೆಯಂತಹ ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ತ್ವರಿತ ಶಕ್ತಿ: ಆಯಾಸವಾದಾಗ ಬಾಳೆಹಣ್ಣು ತಿಂದರೆ ತಕ್ಷಣ ಶಕ್ತಿ ಸಿಗುತ್ತದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆ (ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್) ದೇಹಕ್ಕೆ ಚೈತನ್ಯ ನೀಡುತ್ತದೆ.
ತೂಕ ನಿರ್ವಹಣೆ: ಬಾಳೆಹಣ್ಣಿನಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಂಶ ಕಡಿಮೆ ಇರುತ್ತದೆ. ಆದ್ರೆ ನಾರಿನಂಶ ಹೆಚ್ಚಿರುವುದರಿಂದ ಇದನ್ನು ತಿಂದಾಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಪದೇ ಪದೇ ತಿನ್ನುವ ಬಯಕೆ ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.
ಮಾನಸಿಕ ಆರೋಗ್ಯಕ್ಕೆ ಉತ್ತಮ: ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಮತ್ತು ಟ್ರಿಪ್ಟೋಫಾನ್ (Tryptophan) ಎಂಬ ಅಮೈನೋ ಆಮ್ಲವು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿ ಮೂಡ್ (Mood) ಅನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಚರ್ಮದ ಸೌಂದರ್ಯ: ಬಾಳೆಹಣ್ಣನ್ನು ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಚರ್ಮದ ಸುಕ್ಕುಗಳು ಕಡಿಮೆಯಾಗುತ್ತವೆ ಮತ್ತು ಯೌವನವನ್ನು ಕಾಪಾಡಿಕೊಳ್ಳಬಹುದು. ಇದು ಚರ್ಮಕ್ಕೆ ಕಾಂತಿ ಹಾಗೂ ಮೃದುತ್ವವನ್ನು ನೀಡುತ್ತದೆ.
ಒಟ್ಟಾರೆ ಊಟದ ನಂತರ ಬಾಳೆಹಣ್ಣು ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು.






















