SK Home Ad
Home ಕೃಷಿ/ವಾಣಿಜ್ಯ ಸಿಲಿಂಡರ್‌ ಸಿಕ್ಕವನೇ ಅದೃಷ್ಟವಂತ.. ಬೆಂಗಳೂರು ಹೋಟೆಲ್‌ಗಳಿಗೆ ತಪ್ಪದ ಸಂಕಷ್ಟ; ಜಾಸ್ತಿಯಾಯ್ತು ಗೃಹ ಬಳಕೆ LPG ಸಮಸ್ಯೆ

ಸಿಲಿಂಡರ್‌ ಸಿಕ್ಕವನೇ ಅದೃಷ್ಟವಂತ.. ಬೆಂಗಳೂರು ಹೋಟೆಲ್‌ಗಳಿಗೆ ತಪ್ಪದ ಸಂಕಷ್ಟ; ಜಾಸ್ತಿಯಾಯ್ತು ಗೃಹ ಬಳಕೆ LPG ಸಮಸ್ಯೆ

0
267

ವಾಣಿಜ್ಯ ಹಾಗೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಜನರು ಮತ್ತು ಗ್ಯಾಸ್ ಅವಲಂಬಿತ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಸಮಸ್ಯೆ ಬೆಂಗಳೂರಿನ ಹಲವೆಡೆ ತೀವ್ರವಾಗಿ ಗೋಚರಿಸುತ್ತಿದೆ.

ಗೃಹಬಳಕೆಯ ಸಿಲಿಂಡರ್ ಕೊರತೆ:
ನಗರದ ಲಿಂಗರಾಜಪುರದಲ್ಲಿ ಗ್ಯಾಸ್ ಏಜೆನ್ಸಿ ಮುಂದೆ ಗ್ರಾಹಕರು ಖಾಲಿ ಸಿಲಿಂಡರ್‌ಗಳನ್ನು ಹಿಡಿದು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತಿರುವ ದೃಶ್ಯ ಮಂಗಳವಾರ ಕಂಡುಬಂತು. ಏಜೆನ್ಸಿಗೆ ಎರಡು ಲಾರಿ ಗ್ಯಾಸ್ ಬಂದಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನರು ಬೆಳಗ್ಗೆ 8:30ರಿಂದಲೇ ಕಾದಿದ್ದರು.

ಕೆಲವರು ಕಳೆದ ಒಂದು ವಾರದಿಂದ ಸಿಲಿಂಡರ್ ಸಿಗುತ್ತಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು 10ರಿಂದ 24 ದಿನಗಳವರೆಗೆ ಕಾಯಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಕೆಲಸ ಬಿಟ್ಟು ಗಂಟೆಗಳ ಕಾಲ ಕಾಯುತ್ತಿದ್ದರೂ, “ಗ್ಯಾಸ್ ಇಲ್ಲ, ನಾಳೆ ಬನ್ನಿ” ಎಂಬ ಉತ್ತರ ಸಿಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಜೆನ್ಸಿ ಮಾಲೀಕರ ಪ್ರಕಾರ, 5000 ಬುಕಿಂಗ್‌ಗಳಿಗೆ ಕೇವಲ 300–500 ಸಿಲಿಂಡರ್‌ಗಳಷ್ಟೇ ಬರುತ್ತಿವೆ. ಇದಕ್ಕೆ “ಪ್ಯಾನಿಕ್ ಬುಕಿಂಗ್” ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರವು ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ನೆಲಮಟ್ಟದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ.

ವಾಣಿಜ್ಯ ಸಿಲಿಂಡರ್ ಸಮಸ್ಯೆ – ಹೋಟೆಲ್‌ಗಳಿಗೆ ಸಂಕಷ್ಟ
ಯುದ್ಧದ ಪರಿಣಾಮವಾಗಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಾಗೂ ಪೂರೈಕೆ ವ್ಯತ್ಯಯದಿಂದ ಹೋಟೆಲ್ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಹೊಸೂರಿನ “ಈರೋಡ್ ಅಮ್ಮಾಯಿ ಮೆಸ್” ಎಂಬ ಹೋಟೆಲ್ ಒಂದು ವಿಶಿಷ್ಟ ಆಫರ್ ಮೂಲಕ ಗಮನ ಸೆಳೆದಿದೆ.

“ನಮಗೆ ಅಡುಗೆಗೆ ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ” ಎಂಬ ಘೋಷಣೆಯೊಂದಿಗೆ,

1 ವಾಣಿಜ್ಯ ಸಿಲಿಂಡರ್ ತಂದರೆ → 1 ತಿಂಗಳ ಕಾಲ ಪ್ರತಿದಿನ 1 ಪ್ಲೇಟ್ ಬಿರಿಯಾನಿ ಉಚಿತ
2 ಸಿಲಿಂಡರ್ ತಂದರೆ → ಪ್ರತಿದಿನ 2 ಪ್ಲೇಟ್ ಬಿರಿಯಾನಿ ಉಚಿತ ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೀದಿ ಬದಿ ವ್ಯಾಪಾರಿಗಳಿಗೂ ಸಂಕಷ್ಟ
ಗ್ಯಾಸ್ ಕೊರತೆಯ ಪರಿಣಾಮ ಬೀದಿ ವ್ಯಾಪಾರಿಗಳ ಮೇಲೂ ಬಿದ್ದಿದೆ. ಪಾನಿಪೂರಿ ವ್ಯಾಪಾರಸ್ಥರು ನಾಲ್ಕೈದು ದಿನಗಳಿಂದ ತಮ್ಮ ಗಾಡಿಗಳನ್ನು ಬಂದ್ ಮಾಡಿದ್ದಾರೆ. ಏಜೆನ್ಸಿಗಳಿಗೆ ಹೋಗಿದ್ರೂ ಗ್ಯಾಸ್ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಕೂಡ ನಾಲ್ಕೈದು ಸಾವಿರ ರೂಪಾಯಿ ಕೊಟ್ಟರೂ ಸಿಲಿಂಡರ್ ದೊರೆಯುತ್ತಿಲ್ಲ.

ಪ್ರತಿದಿನ 2,000 ರಿಂದ 3,000 ರೂಪಾಯಿ ದುಡಿಯುತ್ತಿದ್ದ ವ್ಯಾಪಾರಸ್ಥರು ಈಗ ಉದ್ಯೋಗ ಕಳೆದುಕೊಂಡಂತೆ ಆಗಿದ್ದು, ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಒಟ್ಟಾರೆಯಾಗಿ ಗೃಹಬಳಕೆಯಿಂದ ಹಿಡಿದು ಹೋಟೆಲ್ ಹಾಗೂ ಬೀದಿ ಬದಿ ವ್ಯಾಪಾರಿಗಳವರೆಗೆ, ಗ್ಯಾಸ್ ಕೊರತೆ ಜನಜೀವನದ ಮೇಲೆ ದೊಡ್ಡ ಬಿಪರಿಣಾಮ ಬೀರಿದೆ. ಸರಬರಾಜು ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ