Home Advertisement
Home ಆರೋಗ್ಯ ಆರೋಗ್ಯಕ್ಕೆ ಸಂಜೀವಿನಿ ‘ನೆಲ್ಲಿಕಾಯಿ’: ಇಲ್ಲಿವೆ ಇದರ ಉಪಯೋಗಗಳು

ಆರೋಗ್ಯಕ್ಕೆ ಸಂಜೀವಿನಿ ‘ನೆಲ್ಲಿಕಾಯಿ’: ಇಲ್ಲಿವೆ ಇದರ ಉಪಯೋಗಗಳು

0
23

ಇಂದಿನ ಒತ್ತಡದ ಜೀವನಶೈಲಿ ಮತ್ತು ಬದಲಾಗುತ್ತಿರುವ ಹವಾಮಾನದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸನೇ ಆಗಿದೆ. ಆದ್ರೆ ಆಯುರ್ವೇದದಲ್ಲಿ ‘ಅಮೃತಫಲ’ ಎಂದು ಕರೆಯಲ್ಪಡುವ ನೆಲ್ಲಿಕಾಯಿ (Amla) ಇದಕ್ಕೆ ಸರಳ ಮತ್ತು ಅತ್ಯುತ್ತಮ ಪರಿಹಾರವಾಗಿದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಹತ್ತಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಪೋಷಕಾಂಶಗಳ ಗಣಿ: ನೆಲ್ಲಿಕಾಯಿಯು ವಿಟಮಿನ್ ʻಸಿʼಯ ಅತಿ ದೊಡ್ಡ ನೈಸರ್ಗಿಕ ಮೂಲವಾಗಿದೆ. ಇದರೊಂದಿಗೆ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಇದರಲ್ಲಿ ಸಮೃದ್ಧವಾಗಿವೆ. ತಾಜಾ ನೆಲ್ಲಿಕಾಯಿ ಲಭ್ಯವಿಲ್ಲದಿದ್ದಾಗ, ಅದರ ಒಣಗಿದ ಪುಡಿಯನ್ನು ಬಳಸುವುದರಿಂದಲೂ ಸಾಕಷ್ಟು ಲಾಭಗಳನ್ನು ಪಡೆಯಬಹುದು.

ಪ್ರಮುಖ ಆರೋಗ್ಯ ಪ್ರಯೋಜನಗಳು:

ರೋಗನಿರೋಧಕ ಶಕ್ತಿ ಹೆಚ್ಚಳ: ನೆಲ್ಲಿಕಾಯಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಇದು ಶೀತ, ಜ್ವರ ಮತ್ತು ಕಾಲೋಚಿತ ಸೋಂಕುಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ ಮತ್ತು ತೂಕ ಇಳಿಕೆ: ಪ್ರತಿದಿನ ಈ ಪಾನೀಯವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ (Metabolism) ವೇಗಗೊಳ್ಳುತ್ತದೆ. ಇದು ಮಲಬದ್ಧತೆ, ಅಸಿಡಿಟಿ ಮತ್ತು ಹೊಟ್ಟೆಯ ಉಬ್ಬರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಾರಿನಂಶ ಹೆಚ್ಚಿರುವುದರಿಂದ ದೇಹದ ಅನಗತ್ಯ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಇದು ಸಹಕಾರಿ.

ತ್ವಚೆ ಮತ್ತು ಕೂದಲಿನ ರಕ್ಷಣೆ: ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡಲು ಮತ್ತು ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ನೆಲ್ಲಿಕಾಯಿ ರಾಮಬಾಣ. ಇದು ಕೂದಲಿನ ಬೇರುಗಳನ್ನು ಬಲಪಡಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.

ಮಾನಸಿಕ ಆರೋಗ್ಯ ಮತ್ತು ಮಧುಮೇಹ: ನೆಲ್ಲಿಕಾಯಿಯಲ್ಲಿರುವ ಒತ್ತಡ ವಿರೋಧಿ ಗುಣಗಳು ಆತಂಕವನ್ನು ಕಡಿಮೆ ಮಾಡಿ ಮಾನಸಿಕ ಪ್ರಶಾಂತತೆಯನ್ನು ನೀಡುತ್ತವೆ. ಅಲ್ಲದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹಿಗಳಿಗೆ ವರದಾನವಾಗಿದೆ.

ಬಳಸುವ ವಿಧಾನ: ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಒಂದು ಚಮಚ ಶುದ್ಧ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೆಚ್ಚು ಪರಿಣಾಮಕಾರಿ. ರುಚಿಗಾಗಿ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಿಕೊಳ್ಳಬಹುದು.

ನೆಲ್ಲಿಕಾಯಿ ಕೇವಲ ಒಂದು ಹಣ್ಣಲ್ಲ, ಅದು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವ ಸೂಪರ್‌ಫುಡ್. ಋತುಮಾನದ ಬದಲಾವಣೆಯ ಸಮಯದಲ್ಲಿ ಆರೋಗ್ಯವಾಗಿರಲು ನಿಮ್ಮ ದಿನಚರಿಯಲ್ಲಿ ಈ ಸುಲಭ ಕ್ರಮವನ್ನು ಅಳವಡಿಸಿಕೊಳ್ಳುವುದು ಸೂಕ್ತ.