Home Advertisement
Home ಕ್ರೀಡೆ 13,000 ಕ್ಕೂ ಹೆಚ್ಚು ಮಂದಿಯಿಂದ ‘ಕನ್ಯಾಥಾನ್-2026’ ಅಭಿಯಾನ

13,000 ಕ್ಕೂ ಹೆಚ್ಚು ಮಂದಿಯಿಂದ ‘ಕನ್ಯಾಥಾನ್-2026’ ಅಭಿಯಾನ

0
12

ಬೆಂಗಳೂರು: ಭಾರತದ ಅತಿದೊಡ್ಡ ವಿದ್ಯಾರ್ಥಿ ನೇತೃತ್ವದ ದತ್ತಿ ಓಟವಾದ ‘ಕನ್ಯಾಥಾನ್-2026’ ತನ್ನ 15ನೇ ಆವೃತ್ತಿಯನ್ನು ಬೆಂಗಳೂರು ಮತ್ತು ಕರ್ಜತ್‌ನಲ್ಲಿ ಯಶಸ್ವಿಯಾಗಿ ಪೂರೈಸಿತು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣದ ಉದ್ದೇಶಕ್ಕಾಗಿ ನಡೆದ ಈ ಆಂದೋಲನದಲ್ಲಿ ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಕಾರ್ಪೊರೇಟ್ ಪಾಲುದಾರರು ಸೇರಿದಂತೆ ಒಟ್ಟು 13,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಸುಮಾರು 10,000 ಕರ್ಜತ್‌ನಲ್ಲಿ 2000ಕ್ಕೂ ಹೆಚ್ಚು ಮತ್ತು ಬಿಟ್ಸ್ ಪಿಲಾನಿಯಲ್ಲಿ ಸುಮಾರು 1000 ಓಟಗಾರರು ಪಾಲ್ಗೊಳ್ಳುವ ಮೂಲಕ ಈ ವಿದ್ಯಾರ್ಥಿ ನೇತೃತ್ವದ ಚಳವಳಿಗೆ ಹೆಚ್ಚಿನ ಬಲ ತುಂಬಿದರು. ಕಳೆದ ಹದಿನೈದು ಆವೃತ್ತಿಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಉಪಕ್ರಮವು, ನೆಲಮಟ್ಟದಲ್ಲಿ ಸಾಮಾಜಿಕ ಬದಲಾವಣೆ ತರುವಲ್ಲಿ ಅತ್ಯಂತ ಯಶಸ್ವಿ ಉದಾಹರಣೆಯಾಗಿ ಹೊರಹೊಮ್ಮಿದೆ.

‘ಫಿಟ್ ಇಂಡಿಯಾ’ ಅಭಿಯಾನದ ಅಡಿಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅನುಮೋದನೆ ಪಡೆದಿರುವ ಕನ್ಯಾಥಾನ್, ಒಂದು ಸಣ್ಣ ಕ್ಯಾಂಪಸ್ ಉಪಕ್ರಮವಾಗಿ ಆರಂಭವಾಗಿ ಇಂದು ರಾಷ್ಟ್ರೀಯ ಚಳವಳಿಯಾಗಿ ಬೆಳೆದಿದೆ. ಬಡತನ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿಯೆತ್ತುತ್ತಿರುವ ಈ ಸಂಸ್ಥೆಯು ಲಿಂಗ ತಾರತಮ್ಯ ನಿವಾರಣೆಗೆ ಶ್ರಮಿಸುತ್ತಿದೆ.

2011 ರಲ್ಲಿ ಕೇವಲ 400 ಮಂದಿ ಭಾಗವಹಿಸುವವರೊಂದಿಗೆ ಪ್ರಾರಂಭವಾಯಿತು.2019ರಿಂದ ಈ ಉಪಕ್ರಮವು ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಕೇವಲ 2026ರ ಆವೃತ್ತಿಯೊಂದರಲ್ಲೇ ಸುಮಾರು65 ಲಕ್ಷ ರೂಪಾಯಿ ದೇಣಿಗೆ ಹರಿದುಬಂದಿದೆ.

ಈ ಅಭಿಯಾನಕ್ಕೆ ವಿಪ್ರೋ, HP, ಟಿಮ್ಕೆನ್, ಬಯೋಕಾನ್, ಇನ್ಫೋಸಿಸ್, ಸೀಮೆನ್ಸ್, ಡಾಯ್ಚ ಬ್ಯಾಂಕ್, ಬ್ರಿಲಿಯೊ, ಮೊಮೆಂಟಿವ್, ಸಗಿಲಿಟಿ ಮತ್ತು ಟೆಕ್ ಮಹೀಂದ್ರಾ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಹಾಗೂ ವೈಯಕ್ತಿಕ ದಾನಿಗಳು ಬೆಂಬಲ ನೀಡಿದ್ದಾರೆ.