Home Advertisement
Home ನಮ್ಮ ಜಿಲ್ಲೆ ಧಾರವಾಡ ಕನ್ನಡದ ಮೊದಲ AI ಅನುವಾದಿತ ಪುಸ್ತಕ ಗೌಹರ್ ಜಾನ್

ಕನ್ನಡದ ಮೊದಲ AI ಅನುವಾದಿತ ಪುಸ್ತಕ ಗೌಹರ್ ಜಾನ್

0
44

ಸೃಜನಾತ್ಮಕ ಕ್ಷೇತ್ರದಲ್ಲಿ AI ಕ್ರಾಂತಿ: ದೆಹಲಿ AI ಶೃಂಗದಲ್ಲೂ ಸದ್ದು ಮಾಡಿದ ವಿಕ್ರಂ ಸಂಪತ್ ರಚಿತ ಕೃತಿ ಗೌಹರ್ ಜಾನ್ – ಮಾರ್ಚ್ 15ಕ್ಕೆ ಬಿಡುಗಡೆ

ಬಿ.ಅರವಿಂದ

ಹುಬ್ಬಳ್ಳಿ: ಖ್ಯಾತ ಇಂಗ್ಲಿಷ್ ಲೇಖಕ ಹಾಗೂ ಇತಿಹಾಸಕಾರ ಡಾ. ವಿಕ್ರಮ್ ಸಂಪತ್ ಅವರ ಜನಪ್ರಿಯ ಕೃತಿ My Name Is Gauhar Jaan ಇದೀಗ ಎಐ ತಂತ್ರಜ್ಞಾನದ ನೆರವಿನಿಂದ ಕನ್ನಡಕ್ಕೆ ಅನುವಾದಗೊಂಡು ‘ನನ್ನ ಹೆಸರು ಗೌಹರ್ ಜಾನ್’ ಹೆಸರಿನಲ್ಲಿ ಹೊರಬರುತ್ತಿದೆ. ಈ ಕೃತಿ ಕನ್ನಡದಲ್ಲಿ ಎಐ ಬಳಸಿ ಅನುವಾದಗೊಂಡ ಮೊದಲ ಭಾರತೀಯ ಸೃಜನಾತ್ಮಕ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೆಹಲಿಯ AI ಶೃಂಗದಲ್ಲೂ ಚರ್ಚೆ: ಇತ್ತೀಚೆಗೆ ನಡೆದ ದೆಹಲಿ ಎಐ ಸಮ್ಮೇಳನದಲ್ಲಿ ಈ ಕೃತಿ ವಿಶೇಷ ಗಮನ ಸೆಳೆದಿದೆ. ಸೃಜನಾತ್ಮಕ ಸಾಹಿತ್ಯವನ್ನು ಎಐ ಮೂಲಕ ಮನಮುಟ್ಟುವ ರೀತಿಯಲ್ಲಿ ಅನುವಾದಿಸುವ ಪ್ರಯತ್ನ ಸಾಧ್ಯವೇ ಎಂಬ ಪ್ರಶ್ನೆಗೆ ಈ ಯೋಜನೆ ಒಂದು ಉತ್ತರ ನೀಡಿದಂತಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್: ಕರ್ನಾಟಕ ತಂಡ ಪ್ರಕಟ-ಭರ್ಜರಿ ಸಿದ್ಧತೆ

‘ನಾವ್-ಎಐ’ಯಿಂದ ಅನುವಾದ : ಈ ಅನುವಾದ ಕಾರ್ಯವನ್ನು Nav AI ಸಂಸ್ಥೆ ಕೈಗೊಂಡಿದ್ದು, ವಿಶೇಷವಾಗಿ ಅಭಿವೃದ್ಧಿಪಡಿಸಿರುವ ‘ಟ್ರಾನ್ಸ್ಲಿಟ್’ ಪ್ಲಾಟ್‌ಫಾರ್ಮ್‌ ಮೂಲಕ ಪ್ರಕ್ರಿಯೆ ನಡೆಸಲಾಗಿದೆ. ಬಹುಭಾಷಾ ಮಾದರಿಗಳನ್ನು (ಎಂಎಲ್‌ಎಂ) ಒಳಗೊಂಡಿರುವ ಈ ತಂತ್ರಾಂಶಕ್ಕೆ ಮೂಲ ಇಂಗ್ಲಿಷ್ ಪಠ್ಯವನ್ನು ಅಪ್‌ಲೋಡ್ ಮಾಡಿದ ನಂತರ ಕೆಲವೇ ನಿಮಿಷಗಳಲ್ಲಿ ಕರಡು ರೂಪ ಸಿದ್ಧವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಲೇಖಕರಾದ ವಿಕ್ರಮ್ ಸಂಪತ್ ಹಾಗೂ ಅವರ ಸ್ನೇಹಿತ ಸಂದೀಪ್ ಸಿಂಗ್ ಸಂಯುಕ್ತವಾಗಿ ಸ್ಥಾಪಿಸಿರುವ ಈ ಸಂಸ್ಥೆಯ ಉದ್ದೇಶ, ಇಂಗ್ಲಿಷ್‌ನ ಸೃಜನಾತ್ಮಕ ಕೃತಿಗಳನ್ನು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ವೇಗವಾಗಿ ತಲುಪಿಸುವುದು. ‘ನನ್ನ ಹೆಸರು ಗೌಹರ್ ಜಾನ್’ ಈ ಸಂಸ್ಥೆಯ ಮೊದಲ ಪ್ರಮುಖ ಪ್ರಯೋಗವಾಗಿದೆ.

ಮಾನವೀಯ ಸ್ಪರ್ಶವೂ ಸೇರಿದೆ: AI ಕರಡು ಸಿದ್ಧವಾದ ನಂತರ ಅದನ್ನು ಪರಿಶೀಲಿಸಿ, ಸಾಹಿತ್ಯಿಕ ಸೂಕ್ಷ್ಮತೆಗಳನ್ನು ಕಾಪಾಡುವ ಕೆಲಸವನ್ನು ಅನುವಾದಕಿ ಶ್ರೀಗೌರಿ ಎಸ್. ಜೋಶಿ ಮಾಡಿದ್ದಾರೆ. ಅಪಭ್ರಂಶ ಹಾಗೂ ಅಸಂಬದ್ಧ ಭಾಷಾಂತರ ಸಮಸ್ಯೆಗಳು ಇಲ್ಲದೆ, ಸಾಹಿತ್ಯದ ಭಾವವನ್ನು ಕಾಪಾಡಲು ಪ್ರಯತ್ನಿಸಲಾಗಿದೆ ಎಂದು ಲೇಖಕರು ತಿಳಿಸಿದ್ದಾರೆ. ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ ಸಹ ಕರಡನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಪ್ರಕಟಕರಾದ ಎಂ.ಎ. ಸುಬ್ರಹ್ಮಣ್ಯ ತಿಳಿಸಿದ್ದಾರೆ. ಈ ಕೃತಿಯನ್ನು ಹುಬ್ಬಳ್ಳಿಯ `ಸಾಹಿತ್ಯ ಪ್ರಕಾಶನ’ ಪ್ರಕಟಿಸಿದೆ.

ಇದನ್ನೂ ಓದಿ: YUVIKA-2026: ಮಕ್ಕಳಿಗೆ ISROದಿಂದ ಬಾಹ್ಯಾಕಾಶ ತರಬೇತಿ ಅವಕಾಶ

ಗೌಹರ್ ಜಾನ್ ಜೀವನಚರಿತ್ರೆ: ಗೌಹರ್ ಜಾನ್ ಭಾರತ ದೇಶದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ಕಲಾವಿದೆಯಾಗಿದ್ದು, ಭಾರತೀಯ ಗ್ರಾಮೋಫೋನ್ ದಾಖಲೆಗಳ ಇತಿಹಾಸದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದ್ದರು. ಅವರ ರೋಚಕ ಜೀವನಯಾನವನ್ನು ಆಧರಿಸಿದ ಈ ಕೃತಿ ಕಾದಂಬರಿಯಂತಿರುವ ಶೈಲಿಯಲ್ಲಿ ರಚಿತವಾಗಿದೆ.

ಮಾರ್ಚ್ 15ಕ್ಕೆ ಬಿಡುಗಡೆ : AI ಅನುವಾದಿತ ‘ನನ್ನ ಹೆಸರು ಗೌಹರ್ ಜಾನ್’ ಪುಸ್ತಕವು ಮಾರ್ಚ್ 15ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ Suchitra Cinema and Cultural Academy ಆವರಣದಲ್ಲಿ ಬಿಡುಗಡೆಯಾಗಲಿದೆ. ಸಾಹಿತ್ಯ ಮತ್ತು ತಂತ್ರಜ್ಞಾನ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: KMF ನಂದಿನಿ ಉತ್ಪನ್ನ ಸುರಕ್ಷಿತ – ಸುಳ್ಳು ವದಂತಿ ವಿರುದ್ಧ ಕ್ರಿಮಿನಲ್ ಕೇಸ್

ತಿಂಗಳಲ್ಲಿ ಪೂರ್ಣಗೊಂಡ ಅನುವಾದ: ವರ್ಷಗಟ್ಟಲೇ ಹಿಡಿಯುವ ಸಾಹಿತ್ಯಕ ಅನುವಾದವನ್ನು ಕೇವಲ ಒಂದು ತಿಂಗಳಲ್ಲಿ ಪೂರ್ಣಗೊಳಿಸಿರುವುದು ಈ ಪ್ರಯೋಗದ ವಿಶೇಷತೆ ಎಂದು ಲೇಖಕ ಡಾ. ವಿಕ್ರಮ್ ಸಂಪತ್ `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.

AI ಸೃಜನಾತ್ಮಕ ಕ್ಷೇತ್ರದ ಸವಾಲುಗಳನ್ನು ಎಷ್ಟು ಮಟ್ಟಿಗೆ ನಿಭಾಯಿಸಬಲ್ಲದು ಎಂಬುದಕ್ಕೆ ಈ ಕೃತಿ ಒಂದು ಪರೀಕ್ಷೆಯಾಗಲಿದೆ. ಬಿಡುಗಡೆ ನಂತರ ಓದುಗರ ಪ್ರತಿಕ್ರಿಯೆ ಎಐ ಸಾಹಿತ್ಯದ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ.

Previous articleಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಬಜೆಟ್‌ನಲ್ಲಿ ಅನುದಾನಕ್ಕೆ ಆರ್.ವಿ. ದೇಶಪಾಂಡೆ ಒತ್ತಾಯ
Next articleAI ಇಂಪ್ಯಾಕ್ಟ್ ಶೃಂಗಸಭೆ: ಭಾರತದ ನಾಯಕತ್ವಕ್ಕೆ ಜಾಗತಿಕ ಮಾನ್ಯತೆ