ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ ಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಜನತೆಯ ಆಹಾರ ಅಭಿರುಚಿಯು ಬಹಳ ವಿಶಿಷ್ಟವಾಗಿದೆ. ತಿಂಡಿ ತಿನಿಸುಗಳ ಬಗ್ಗೆ ಇಲ್ಲಿನ ಜನರ ಪ್ರೀತಿಯು ಆಹಾರ ಸಂಸ್ಕೃತಿಯನ್ನು ಎತ್ತರಕ್ಕೆ ಕೊಂಡೊಯ್ದಿದೆ. ವೈವಿಧ್ಯಮಯ ಖಾದ್ಯಗಳಿಗೆ ಕರಾವಳಿಯು ಹೆಸರುವಾಸಿಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ, ಈ ವರ್ಷದ ಕರಾವಳಿ ಉತ್ಸವದ ಅಂಗವಾಗಿ ನಡೆದ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್: ಸ್ಟ್ರೀಟ್ ಫುಡ್ ಫೆಸ್ಟ್ ಕಾರ್ಯಕ್ರಮ ಇಂದಿನಿಂದ ಭಾನುವಾರದವರೆಗೆ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯಲಿದ್ದು, ಆಕರ್ಷಕ ತಿಂಡಿ ತಿನಿಸುಗಳು, ಚಾಟ್ಸ್, ಪಾನೀಯಗಳು, ಸಸ್ಯಹಾರ ಮತ್ತು ಮಾಂಸಾಹಾರ ಖಾದ್ಯಗಳ ಸ್ಟಾಲ್‌ಗಳನ್ನು ಒಳಗೊಂಡಿದೆ. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.























