Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ ಸ್ವಚ್ಛತೆಗೆ ದಂಡದ ಚಾಟಿ; ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ!

ಬೆಳಗಾವಿ ಸ್ವಚ್ಛತೆಗೆ ದಂಡದ ಚಾಟಿ; ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ!

0
5

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಸ್ವಚ್ಛತೆ ವಿಚಾರಕ್ಕೆ ಇನ್ನು ಮಾತಿನ ಮರುಳಿಲ್ಲ. ಮಹಾನಗರ ಪಾಲಿಕೆ ಈಗ ನೇರವಾಗಿ ದಂಡದ ಮಾರ್ಗಕ್ಕೆ ಇಳಿದಿದೆ.

ಕಸ ವಿಂಗಡಣೆ ಮಾಡದವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರು ಹಾಗೂ ಬ್ಲಾಕ್ ಸ್ಪಾಟ್ ಸೃಷ್ಟಿಸುವವರ ವಿರುದ್ಧ ಕೈಗೊಂಡ ಕಠಿಣ ಕ್ರಮದಿಂದ ಕೇವಲ ಒಂದು ತಿಂಗಳಲ್ಲೇ 2 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ.

ಈ ದಂಡಾತ್ಮಕ ಕಾರ್ಯಾಚರಣೆ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ರಾತ್ರಿ ವೇಳೆಯವರೆಗೂ ನಿರಂತರವಾಗಿ ನಡೆಯುತ್ತಿರುವುದು ಪಾಲಿಕೆಯ ಗಂಭೀರತೆಯನ್ನು ತೋರಿಸುತ್ತದೆ.

ಮನೆಮನೆಗೆ ಭೇಟಿ- ಕೇಳದಿದ್ದರೆ ದಂಡ: ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ವಾಹನ ಚಾಲಕರು, ಮೇಲ್ವಿಚಾರಕರು, ಆರೋಗ್ಯ ನಿರೀಕ್ಷಕರು, ಕಮ್ಯುನಿಟಿ ಮೊಬಿಲೈಸರ್‌ಗಳು ಕಳೆದ ಮೂರು ತಿಂಗಳಿಂದ ಭಾನುವಾರ ಹಾಗೂ ಎಲ್ಲಾ ಸರಕಾರಿ ರಜೆಗಳಲ್ಲೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಮನೆ ಮನೆಗೆ ಭೇಟಿ ನೀಡಿ ಕಸ ವಿಂಗಡಣೆ ಕುರಿತು ಜಾಗೃತಿ, ಮೊದಲು ವಿನಂತಿ, ನಂತರ ನೋಟಿಸ್ ಮತ್ತು ನಿಯಮ ಉಲ್ಲಂಘನೆ ಮುಂದುವರಿದರೆ ತಕ್ಷಣ ದಂಡ ಎಂಬ ಕ್ರಮಬದ್ಧ ಕಾರ್ಯಾಚರಣೆಯನ್ನು ಪಾಲಿಕೆ ಅನುಸರಿಸುತ್ತಿದೆ.

ಬ್ಲಾಕ್ ಸ್ಪಾಟ್‌ಗಳಿಗೆ ಬ್ರೇಕ್: ಪಾಲಿಕೆಯ ವಿನಂತಿ ಹಾಗೂ ನೋಟಿಸ್‌ಗಳಿಗೂ ಕೆಲವರು ಕಿವಿಗೊಡದ ಹಿನ್ನೆಲೆಯಲ್ಲಿ, ರಾತ್ರಿ ವೇಳೆಯಲ್ಲೂ ಪೌರಕಾರ್ಮಿಕರು ಮತ್ತು ವಾಚ್ ತಂಡಗಳು ನಿಗಾವಹಿಸಿ ದಂಡ ವಿಧಿಸುತ್ತಿವೆ. ರಸ್ತೆ ಬದಿಯಲ್ಲಿ ಕಸ, ಬ್ಲಾಕ್ ಸ್ಪಾಟ್ ಸೃಷ್ಟಿ, ಕಸ ವಿಂಗಡಣೆ ನಿಯಮ ಉಲ್ಲಂಘನೆ ಈ ಎಲ್ಲಾ ಪ್ರಕರಣಗಳಲ್ಲಿ ಸ್ಪಾಟ್ ಫೈನ್ ವಿಧಿಸಲಾಗುತ್ತಿದೆ.

ಕಠಿಣ ಕ್ರಮ: ಪಾಲಿಕೆ ಮೂಲಗಳ ಪ್ರಕಾರ, ದಂಡ ವಿಧಿಸುವುದು ಕೊನೆಯ ಆಯ್ಕೆ. ಆದರೆ ಸ್ವಚ್ಛತೆಗೆ ಅದು ಅನಿವಾರ್ಯವಾಗಿದೆ. ಮೇಯರ್ ಮಂಗೇಶ ಪವಾರ್, ಉಪ ಮೇಯರ್ ವಾಣಿ ಜೋಶಿ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ ಅವರ ನಿರ್ದೇಶನದಂತೆ ಯಾವುದೇ ಸಡಿಲಿಕೆ ಇಲ್ಲದೆ ಕಠಿಣ ಕ್ರಮ ಜಾರಿಯಲ್ಲಿದೆ.

ಸಾರ್ವಜನಿಕರಿಂದ ಉತ್ತಮ ಸ್ಪಂದನೆ: ನಗರ ಸ್ವಚ್ಛತೆ ವಿಚಾರದಲ್ಲಿ ಪಾಲಿಕೆ ಯಾವುದೇ ತೋರಿಕೆ ಕ್ರಮಕ್ಕೆ ಇಳಿದಿಲ್ಲ. ದಂಡದ ಕಾರ್ಯಾಚರಣೆ ಆರಂಭವಾದ ಬಳಿಕ ಹಲವಾರು ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಹೆಚ್ಚಳ, ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಇಳಿಕೆ ಕಂಡುಬಂದಿದೆ. ದಂಡ ಹೆಚ್ಚಿದಂತೆ ಜಾಗೃತಿಯೂ ಹೆಚ್ಚಾಗಿದೆ. ಸಾರ್ವಜನಿಕ ಸ್ಪಂದನೆ ಉತ್ತಮವಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಹೇಳಿದ್ದಾರೆ.

ದಂಡವೇ ಕೊನೆಯ ಮಾರ್ಗ: ಮೊದಲು ಜಾಗೃತಿ, ನಂತರ ನೋಟಿಸ್. ಎಲ್ಲ ಪ್ರಯತ್ನಗಳ ಬಳಿಕವೂ ನಿಯಮ ಉಲ್ಲಂಘನೆಯಾದರೆ ದಂಡ ಅನಿವಾರ್ಯ. ಸ್ವಚ್ಛತೆ ವಿಚಾರದಲ್ಲಿ ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಹನುಮಂತ ಕಲಾದಗಿ ಹೇಳಿದರು.

Previous article32 ವರ್ಷಗಳ ಬಳಿಕ ಅಪಘಾತ ಪ್ರಕರಣದ ಆರೋಪಿ ಪೊಲೀಸ್‌ ವಶಕ್ಕೆ
Next articleಮಗನಿಂದಲೇ ತಂದೆ, ತಾಯಿ, ಸಹೋದರಿ ಕೊಲೆ