ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸಗಳ ವೇಳೆ ಮಹಾತ್ಮ ಗಾಂಧೀಜಿಯವರನ್ನು ಕೊಂಡಾಡುತ್ತಾರೆ. ಆದರೆ ತಮ್ಮದೇ ದೇಶದಲ್ಲಿ ಗಾಂಧಿ ಹೆಸರಿಗೆ ಮತ್ತು ಚಿಂತನೆಗಳಿಗೆ ಅಪಚಾರ ಮಾಡಲಾಗುತ್ತಿದೆ. ಇದು ಪ್ರಧಾನಿ ಮೋದಿ ಅವರ ಹಿಪೊಕ್ರೆಸಿಯ ಒಂದು ಭಾಗ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ ತೀವ್ರವಾಗಿ ಟೀಕಿಸಿದ್ದಾರೆ.
ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ, ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧಿ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ ಅಹಿಂಸೆಯ ಮಾರ್ಗವನ್ನು ಅಸ್ತ್ರವಾಗಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಪರಿಣಾಮವೇ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಅವರ ಜೀವನ ಮತ್ತು ಚಿಂತನೆಗಳು ಇಂದಿಗೂ ಪ್ರಪಂಚದಾದ್ಯಂತ ಮಾದರಿಯಾಗಿವೆ. ಅನೇಕ ರಾಷ್ಟ್ರಗಳು ಗಾಂಧೀಜಿಯ ಸ್ಮರಣಾರ್ಥವಾಗಿ ಪ್ರತಿಮೆಗಳನ್ನೂ ನಿರ್ಮಿಸಿ, ಅವರನ್ನು ಶಾಂತಿ, ಮಾನವೀಯತೆ ಮತ್ತು ಅಹಿಂಸೆಯ ಸಂಕೇತವಾಗಿ ಗೌರವಿಸುತ್ತಿವೆ ಎಂದು ರಮಾನಾಥ ರೈ ಹೇಳಿದರು.
ಆದರೆ ಭಾರತದಲ್ಲೇ, ಮೋದಿ ಅವರ ಶಿಷ್ಯರೆಂದು ಹೇಳಿಕೊಳ್ಳುವವರು ಗಾಂಧೀಜಿ ಪ್ರತಿಮೆಗಳಿಗೆ ಬೆಂಕಿ ಹಚ್ಚುವುದು, ಗುಂಡು ಹಾರಿಸುವ ಮೂಲಕ ಅವಮಾನಿಸುವಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಗಳು, ಮಹಾತ್ಮ ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡಿದ್ದ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರ ನಿತ್ಯವೂ ಗಾಂಧಿ ಚಿಂತನೆಗಳನ್ನು ಕೊಲ್ಲುವ ಕೆಲಸ ಮಾಡುತ್ತಿದೆ ಎಂದು ರಮಾನಾಥ ರೈ ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ, ಎಸ್. ಅಪ್ಪಿ, ದಿನೇಶ್ ಮುಳೂರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಕೆ. ಹರಿನಾಥ್, ಡಿಸಿಸಿ ಉಪಾಧ್ಯಕ್ಷರಾದ ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ. ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಹುಸೈನ್, ಯೋಗೀಶ್ ಕುಮಾರ್, ಸಾರಿಕ ಪೂಜಾರಿ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಜೋಕಿಂ ಡಿಸೋಜಾ, ಅಬ್ಬಾಸ್ ಅಲಿ, ಶೈಲಜಾ ಬಂಟ್ವಾಳ, ಸ್ಟ್ಯಾನಿ ಆಳ್ವಾರಿಸ್, ಸುಹಾನ್ ಆಳ್ವ, ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.























