ಚಿತ್ರದುರ್ಗ: ದೀಪವು ಜ್ಞಾನದ ಸಂಕೇತ. ನಮ್ಮ ಪರಂಪರೆಯಲ್ಲಿ ದೀಪ ಬೆಳಗುವುದು ಶುಭದ ಸಂಕೇತವೇ ಹೊರತು ದೀಪ ಆರಿಸುವುದಲ್ಲ. ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡಿ ಜನ್ಮದಿನದ ದಿನ ದೀಪ ಆರಿಸುವ ಪದ್ಧತಿ ಬಿಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ವಿಭಾಗದ ವ್ಯವಸ್ಥಾಪಕರಾದ ಲೋಹಿತಾಶ್ವ ಕರೆ ನೀಡಿದರು.
ಚಳ್ಳಕೆರೆಯ ಕಾಟಪ್ಪನಹಟ್ಟಿಯಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಟಿವಿ ಧಾರಾವಾಹಿ ಹಾಗೂ ಸಿನಿಮಾಗಳ ಪ್ರಭಾವದಿಂದ ನಮ್ಮ ಮನೆಯ ಆಚರಣೆಗಳು ದಾರಿ ತಪ್ಪುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಂದೆಲ್ಲಾ ವರನಟ ಡಾ. ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ಯಾರಾದರೂ ಮೃತಪಟ್ಟರೆ, ದೀಪ ಆರುವುದನ್ನು ತೋರಿಸುವ ಮೂಲಕ ಸಾವಿನ ಸೂಚನೆ ನೀಡಲಾಗುತ್ತಿತ್ತು. ಆದರೆ ಇಂದು ನಾವು ನಮ್ಮ ಮಕ್ಕಳ ಹುಟ್ಟುಹಬ್ಬದ ದಿನವೇ ಕೇಕ್ ಮೇಲಿರುವ ಕ್ಯಾಂಡಲ್ ಆರಿಸಿ ಸಂಭ್ರಮಿಸುತ್ತಿದ್ದೇವೆ. ಅರಿವಿದ್ದೋ, ಇಲ್ಲದೆಯೋ ಅಶುಭವಾದುದನ್ನು ಆಚರಣೆ ಮಾಡುತ್ತಿದ್ದೇವೆ. ದೀಪ ಬೆಳಗಿ ಆರತಿ ಮಾಡುವುದು ನಮ್ಮ ಮೂಲ ಪರಂಪರೆಯಾಗಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಮನೆಗೆ ಹೋದ ಬಳಿಕ ಹಿರಿಯರು ಮತ್ತು ಮಕ್ಕಳೊಂದಿಗೆ ಕುಳಿತು 10-20 ವರ್ಷಗಳ ಹಿಂದಿನ ಹಬ್ಬದ ಆಚರಣೆಗೂ, ಈಗಿನ ಆಚರಣೆಗೂ ಆಗಿರುವ ಬದಲಾವಣೆಗಳ ಬಗ್ಗೆ ಪರಾಮರ್ಶಿಸಬೇಕು. ಬಿಟ್ಟು ಹೋಗಿರುವ ಒಳ್ಳೆಯ ಸಂಪ್ರದಾಯಗಳನ್ನು ಪುನಃ ಸರಿಪಡಿಸಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಅದ್ದೂರಿ ಮೆರವಣಿಗೆ ಜರುಗಿತು. ಯಲ್ಲಮ್ಮ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಕಾಟಪ್ಪನಟ್ಟಿಯ ಪ್ರಮುಖ ಬೀದಿಗಳು ಹಾಗೂ ಕಾಟಮಲಿಂಗೇಶ್ವರ ದೇವಸ್ಥಾನದ ಬೀದಿಯ ಮೂಲಕ ಸಂಚರಿಸಿ, ಅಂತಿಮವಾಗಿ ಬಂಗೇರ ಕಪ್ಲೆ (ಬಂಗೇರ ತೋಟ) ಆವರಣವನ್ನು ತಲುಪಿತು.
ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡರು. ಬಂಗೇರ ತೋಟದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಗಂಗಾಪೂಜಾ ಕಾರ್ಯಕ್ರಮದಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಭಕ್ತರು ಹಾಗೂ ನೂರಾರು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಕೃತಾರ್ಥರಾದರು.






















