ಚಳ್ಳಕೆರೆ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟ ದಂಧೆಯ ಪ್ರಮುಖ ಸೂತ್ರಧಾರಿ ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರಿಗೆ ಜಾರಿ ನಿರ್ದೇಶನಾಲಯ (ED) ಭಾರೀ ಶಾಕ್ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಕಾರ್ಯಾಚರಣೆ ನಡೆಸಿರುವ ಇಡಿ ಬೆಂಗಳೂರು ವಲಯದ ಅಧಿಕಾರಿಗಳು, ಆರೋಪಿಗಳಿಗೆ ಸೇರಿದ ₹177.3 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.
ಈ ಕುರಿತು ಜನವರಿ 29, 2026ರಂದು ಇಡಿ ಮಹತ್ವದ ಜಪ್ತಿ ಆದೇಶ ಹೊರಡಿಸಿದೆ. ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಬೆಲೆಬಾಳುವ ಕೃಷಿ ಭೂಮಿಗಳು, ವಸತಿ ನಿವೇಶನಗಳು ಹಾಗೂ ಬ್ಯಾಂಕ್ ಠೇವಣಿಗಳಂತಹ ಚರ ಮತ್ತು ಸ್ಥಾವರ ಆಸ್ತಿಗಳು ಸೇರಿವೆ. ಈ ಎಲ್ಲಾ ಆಸ್ತಿಗಳೂ ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಮೂಲಕ ಗಳಿಸಿದ ಅಕ್ರಮ ಹಣದಿಂದಲೇ ಖರೀದಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ KIMS ಅಧಿಕಾರಿ ಮನೆ–ಕಚೇರಿ ಸೇರಿ 5 ಕಡೆ ಲೋಕಾ ದಾಳಿ
ಹೇಗಿತ್ತು ಆನ್‌ಲೈನ್ ಜೂಜಾಟದ ಜಾಲ?: ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ತನಿಖೆಯ ವೇಳೆ ಕೆ.ಸಿ. ವೀರೇಂದ್ರ ಮತ್ತು ಅವರ ತಂಡವು ‘King567’ ಸೇರಿದಂತೆ ಹಲವು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ದೇಶಾದ್ಯಂತ ವ್ಯಾಪಕ ಜಾಲವನ್ನು ವಿಸ್ತರಿಸಿದ್ದು ಬೆಳಕಿಗೆ ಬಂದಿದೆ.
ಆರೋಪಿಗಳು ಮೊದಲ ಹಂತದಲ್ಲಿ ಸಾರ್ವಜನಿಕರನ್ನು ನಂಬಿಸಲು ನಕಲಿ ಗೆಲುವುಗಳನ್ನು ತೋರಿಸುತ್ತಿದ್ದರು. ಇದರಿಂದ ಪ್ರೇರಿತರಾಗಿ ಜನರು ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದರು. ಆದರೆ ನಂತರ ಆ ಹಣವನ್ನು ಹಿಂಪಡೆಯಲು (Withdrawal) ಸಾಧ್ಯವಾಗದಂತೆ ತಾಂತ್ರಿಕ ಅಡಚಣೆಗಳನ್ನು ಸೃಷ್ಟಿಸಿ, ಖಾತೆಗಳನ್ನು ಬ್ಲಾಕ್ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ: ಹೋಂಸ್ಟೇ–ರೆಸಾರ್ಟ್‌ಗಳಲ್ಲಿ ತಪಾಸಣೆ ಹೆಚ್ಚಿಸಲು ಸೂಚನೆ
ಮ್ಯೂಲ್ ಖಾತೆಗಳ ಮೂಲಕ ಹಣ ವರ್ಗಾವಣೆ: ಪೇಮೆಂಟ್ ಗೇಟ್‌ವೇಗಳು ಹಾಗೂ ನೂರಾರು ‘ಮ್ಯೂಲ್ ಖಾತೆ’ಗಳು (ಬೇರೆಯವರ ಹೆಸರಿನ ಬ್ಯಾಂಕ್ ಖಾತೆಗಳು) ಬಳಸಿಕೊಂಡು ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗುತ್ತಿತ್ತು. ಈ ಮೂಲಕ ಹಣದ ಮೂಲವನ್ನು ಮರೆಮಾಚುವ ಪ್ರಯತ್ನ ಮಾಡಲಾಗಿತ್ತು ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
₹2,300 ಕೋಟಿಗೂ ಅಧಿಕ ವಹಿವಾಟಿನ ಶಂಕೆ: ಈ ಪ್ರಕರಣದಲ್ಲಿ ಈಗಾಗಲೇ ಕೆ.ಸಿ. ವೀರೇಂದ್ರ ಅವರನ್ನು ಇಡಿ ಬಂಧಿಸಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಹಿಂದೆ ದೇಶಾದ್ಯಂತ 60ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ ಇಡಿ, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ಮಾಜಿ ಒಲಿಂಪಿಯನ್ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ನಿಧನ
ಪ್ರಸ್ತುತ ಜಪ್ತಿ ಮಾಡಲಾದ ಆಸ್ತಿಯನ್ನು ಸೇರಿಸಿ, ಈ ಪ್ರಕರಣದಲ್ಲಿ ಇದುವರೆಗೆ ₹320 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಇಡಿ ಮೂಲಗಳ ಪ್ರಕಾರ, ಈ ಆನ್‌ಲೈನ್ ಜೂಜಾಟ ದಂಧೆಯಲ್ಲಿ ಒಟ್ಟು ₹2,300 ಕೋಟಿಗೂ ಅಧಿಕ ಅಕ್ರಮ ಹಣ ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಉಳಿದ ಹಣ ಹಾಗೂ ಇತರೆ ಫಲಾನುಭವಿಗಳ ಪತ್ತೆಗೆ ತನಿಖೆ ಇನ್ನೂ ಮುಂದುವರಿದಿದೆ.























