ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಪ್ರವಾಸಿ ತಾಣಗಳು, ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳಲ್ಲಿ ಹೆಚ್ಚಿನ ಮಟ್ಟದ ತಪಾಸಣೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಕೊಪ್ಪಳ KIMS ಅಧಿಕಾರಿ ಮನೆ–ಕಚೇರಿ ಸೇರಿ 5 ಕಡೆ ಲೋಕಾ ದಾಳಿ
ಪ್ರವಾಸಿ ತಾಣಗಳು, ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಈ ಸ್ಥಳಗಳಲ್ಲಿ ವ್ಯಾಪಕ ದಾಳಿಗಳನ್ನು ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಅಂತಹ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಹಾಗೂ ಪೋಷಕರಿಗೆ ಅರಿವು ಮೂಡಿಸಿ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಮಾಜಿ ಒಲಿಂಪಿಯನ್ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ನಿಧನ
ಮಕ್ಕಳು ಶಾಲೆಗೆ ಸೇರಿಸಿದ ನಂತರ ಮತ್ತೆ ಶಾಲೆ ಬಿಡದಂತೆ ನಿರಂತರ ನಿಗಾವಹಿಸಬೇಕು. ಅವರ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಪ್ರೋತ್ಸಾಹ ನೀಡಬೇಕು. ಜಿಲ್ಲೆಯ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.
ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳ ಸ್ವಚ್ಛತಾ ವಾಹನಗಳ ಮೂಲಕ ಜಿಂಗಲ್ಸ್ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಎಲ್ಲಾ ತಾಲೂಕುಗಳಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಿಯಮಿತ ಸಭೆಗಳನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಜೀನಾಮೆ ಕುರಿತು ಸದನದಲ್ಲಿ ಕೆ.ಜೆ. ಜಾರ್ಜ್ ಸ್ಪಷ್ಟನೆ
ಇದಲ್ಲದೆ, ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಮ್ಮ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರು ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಜಾತ್ರೆ, ಉತ್ಸವಗಳು ಹಾಗೂ ಮೀನುಗಾರಿಕಾ ಬಂದರುಗಳಲ್ಲಿ ವಿಶೇಷ ತಪಾಸಣೆ ನಡೆಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಜಾತ್ರೆ ಹಾಗೂ ಉತ್ಸವದ ಸಂದರ್ಭದಲ್ಲಿನ ಮಾರಾಟ ಮಳಿಗೆಗಳಿಗೆ ಅನುಮತಿ ನೀಡುವಾಗ ಬಾಲ/ಕಿಶೋರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬಾರದು ಎಂಬ ಎಚ್ಚರಿಕೆ ನೀಡಬೇಕು. ಯಾವುದೇ ಬಾಲ ಅಥವಾ ಕಿಶೋರ ಕಾರ್ಮಿಕರು ವ್ಯಾಪಾರ ಮಾಡುವುದಕ್ಕೂ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಲ ಮತ್ತು ಕಿಶೋರ ಕಾರ್ಮಿಕರು ಪತ್ತೆಯಾದಾಗ ಮಾಲೀಕರ ವಿರುದ್ಧ ದಾಖಲಿಸುವ ಪ್ರಕರಣಗಳಲ್ಲಿ ಶಿಕ್ಷೆ ಆಗುವಂತೆ ಅಗತ್ಯ ದಾಖಲೆಗಳನ್ನು ತ್ವರಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜೊತೆಗೆ ಪತ್ತೆಯಾದ ಮಕ್ಕಳಿಗೆ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ನೆರವುಗಳನ್ನು ಒದಗಿಸಿ, ಅವರ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: UGC ಇಕ್ವಿಟಿ ನಿಯಮಗಳು ‘ವಿಳಂಬವಾದರೂ ಸ್ವಾಗತಾರ್ಹ’ : ಸ್ಟಾಲಿನ್
ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಅವರು, 2025ರ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ಜಿಲ್ಲೆಯಾದ್ಯಂತ 484 ತಪಾಸಣೆಗಳನ್ನು ನಡೆಸಲಾಗಿದ್ದು, 1 ಬಾಲ ಕಾರ್ಮಿಕ ಮತ್ತು 3 ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ. ಈ ಸಂಬಂಧ 1 ಎಫ್‌ಐಆರ್ ದಾಖಲಾಗಿದ್ದು, 3 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ ಎಂದು ತಿಳಿಸಿದರು. ಮಕ್ಕಳ ಸಹಾಯವಾಣಿ 1098 ಮೂಲಕ ಬಂದ ದೂರುಗಳ ಮೇಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಡಿವೈಎಸ್ಪಿ ಗಿರೀಶ್, ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಮಿಕ ನಿರೀಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.























