ಬಳ್ಳಾರಿ: ಹೊಸ ವರ್ಷ ಜ. 1ರಂದು ನಡೆದಿದ್ದ ಬ್ಯಾನರ್ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ತಡವಾಗಿಯಾದರೂ ಬಳ್ಳಾರಿ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿಯನ್ನು ಪೋಸ್ಟಿಂಗ್ ಇಲ್ಲದೇ ಎತ್ತಂಗಡಿ ಮಾಡಿದ್ದ ಸರಕಾರ ತನ್ನ ಆದೇಶವನ್ನು ವಾಪಸ್ ಪಡೆದು ಅಚ್ಚರಿ ಮೂಡಿಸಿದೆ!.
ಚಂದ್ರಕಾಂತ್ ನಂದಾರೆಡ್ಡಿ ವರ್ಗಾವಣೆ ಮಾಡಿ, 2023ರ ಬ್ಯಾಚಿನ ಐಪಿಎಸ್ ದರ್ಜೆಯ ಅಧಿಕಾರಿ ಯಶ್‌ಕುಮಾರ್ ಶರ್ಮಾ ಅವರನ್ನು ಎರಡು ದಿನಗಳ ಹಿಂದಷ್ಟೇ ಸರ್ಕಾರ ನೇಮಕ ಮಾಡಿತ್ತು. ಅಧಿಕಾರ ವಹಿಸಿಕೊಳ್ಳಲು ಬುಧವಾರ ಬಂದಿದ್ದ ಶರ್ಮಾ ಅವರಿಗೆ ಆ ಭಾಗ್ಯ ಸಿಕ್ಕಿರಲಿಲ್ಲ.
ಸರಕಾರ ಗುರುವಾರ ತಾನೇ ಹೊರಡಿಸಿದ ಆದೇಶವನ್ನು ವಾಪಸ್ ಪಡೆದು ಹಳೇ ಡಿವೆಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ಅವರನ್ನು ಮುಂದುವರಿಸಿ, ಐಪಿಎಸ್ ಅಧಿಕಾರಿ ಯಶ್‌ಕುಮಾರ್ ಶರ್ಮಾ ಅವರಿಗೆ ಇಲ್ಲಿಂದ ಗೇಟ್‌ಪಾಸ್ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪವಲಯಕ್ಕೆ ವರ್ಗಾವಣೆ ಮಾಡಿದೆ. `ಕೈ’ ಶಾಸಕರ ಪ್ರಭಾವಕ್ಕೆ ಬೆದರಿ ಡಿಎಸ್‌ಪಿ ಅವರನ್ನೇ ಮುಂದುವರೆಸಿದೆ ಎಂಬ ಮಾತುಗಳು ಇಲ್ಲಿ ಕೇಳಿಬರುತ್ತಿವೆ.























